ಹೈದರಾಬಾದ್: ಸಾರ್ವಜನಿಕ ಸಭೆಯೊಂದರಲ್ಲಿ ಹಿಂದೂಗಳ ಆರಾಧ್ಯ ದೇವರಾದ ಅಯ್ಯಪ್ಪ, ಶಿವ ಮತ್ತು ವಿಷ್ಣು ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ದಲಿತ ಮುಖಂಡ ಮತ್ತು ಭಾರತ ನಾಸ್ತಿಕ ಸಮಾಜದ ಮುಖ್ಯಸ್ಥ ಬೈರಿ ನರೇಶ್ ವಿರುದ್ಧ ಪೊಲೀಸ್ ಸೈಬರ್ ಕ್ರೈಂ ಸೆಲ್ ಪ್ರಕರಣ ದಾಖಲಿಸಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಲವಾರು ದಲಿತ ಸಂಘಟನೆಗಳ ಸಭೆಯಲ್ಲಿ ನರೇಶ್ ಅವರು ಅಯ್ಯಪ್ಪ ದೇವರ ಜನ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಮತ್ತು ಇತರ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಹೈದರಾಬಾದ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದು, ನರೇಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಅಯ್ಯಪ್ಪ ಸ್ವಾಮಿಯ ಹಲವಾರು ಭಕ್ತರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಕರಾಟೆ ಕಲ್ಯಾಣಿ ಎಂಬ ಮಹಿಳೆ ದೂರು ದಾಖಲಿಸಿದ್ದು, ಪ್ರಚಾರಕ್ಕಾಗಿ ಹಿಂದೂ ದೇವರನ್ನು ಅವಮಾನಿಸುವುದು ಫ್ಯಾಶನ್ ಆಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ನರೇಶ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಿಂದೂಗಳ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸುವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ಸರ್ಕಾರದ ವಿರುದ್ಧ ಕಿಡಿಕಾರಿ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.