ಬೆಂಗಳೂರು/ಮಂಗಳೂರು: ಲಕ್ಷದ್ವೀಪ ಸಮೀಪ ಉಂಟಾಗಿದ್ದ “ವಾಯು’ ಹೆಸರಿನ ಚಂಡಮಾರುತ ಈಗ ಗುಜರಾತ್‌ನತ್ತ ಸಾಗುತ್ತಿದ್ದು, ಇದರ ಪರಿಣಾಮ ರಾಜ್ಯ ಕರಾವಳಿಗೆ ಕಾಲಿಟ್ಟಿದ್ದ ಮುಂಗಾರು ದುರ್ಬಲಗೊಂಡಿದೆ.
ಕೇರಳ ಕರಾವಳಿಗೆ ಜೂ.9ರಂದು ಮುಂಗಾರು ಅಪ್ಪಳಿಸಿದ್ದು, ಸಾಮಾನ್ಯವಾಗಿ ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ ಕರಾವಳಿಗೆ ಅಪ್ಪಳಿಸುತ್ತದೆ. ಆದರೆ, ಚಂಡಮಾರುತದ ಪರಿಣಾಮ ತಡವಾಗಿ, ಜೂ.14ರಂದು ಕರಾವಳಿಗೆ ಮುಂಗಾರು ಪ್ರವೇಶಿಸಿತ್ತು.
ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗೆ ಮುಂಗಾರು ಅಪ್ಪಳಿಸಿದರೂ ಚಂಡಮಾರುತದ ಕಾರಣದಿಂದಾಗಿ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಂಭವ ಕಡಿಮೆ. ಏಕೆಂದರೆ, ಚಂಡಮಾರುತ ಗುಜರಾತ್ ಕಡೆಗೆ ಸಾಗುತ್ತಿದ್ದು, ಈ ವೇಳೆ ಮೋಡಗಳ ಚಲನೆ, ತೇವಾಂಶದ ಕೊರತೆಯಿಂದಾಗಿ ಮಳೆಯಾಗದು ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರದಂದು ಮಂಗಳೂರು, ಉಡುಪಿ, ಹೊನ್ನಾವರ, ಭಟ್ಕಳ, ಶೃಂಗೇರಿ, ಮಡಿಕೇರಿ, ಯಲ್ಲಾಪುರ, ತಾಳಗುಪ್ಪ, ಕುಮಟಾ, ಅಂಕೋಲಾ, ಕಾರ್ಕಳದಲ್ಲಿ ಸಾಮಾನ್ಯ ಮಳೆಯಾಗಿದೆ. ಕೊಲ್ಲೂರಿನಲ್ಲಿ ರಾಜ್ಯದಲ್ಲಿಯೇ ಅಧಿಕ, 10 ಸೆಂ. ಮೀ. ಮಳೆ ಸುರಿಯಿತು. ಉಳಿದಂತೆ ಬಿಸಿಲು ಮತ್ತು ಮೋಡ ಮುಸುಕಿದ ವಾತಾವರಣ ಇತ್ತು.
ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.