Advertisement

ಹುಣಸೂರು: ಸಾಕು ಪ್ರಾಣಿಗಳಿಗೆ ಕಂಠಕವಾಗಿರುವ ಹುಲಿ; ಗ್ರಾಮಸ್ಥರಲ್ಲಿ ಆತಂಕ

10:28 AM Dec 26, 2022 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮಗಳಲ್ಲಿ ಸಾಕು ಪ್ರಾಣಿಗಳಿಗೆ ಕಂಠಕವಾಗಿರುವ ಹುಲಿ ಆಗಾಗ್ಗೆ ಪ್ರತ್ಯಕ್ಷವಾಗಿ ಭೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಮತ್ತೆ ಅರಣ್ಯ ಸೇರಿಕೊಳ್ಳುತ್ತಿದ್ದು, ಸಾಕಾನೆ ಮೂಲಕ ಕೊಂಬಿಂಗ್ ನಡೆಸಿದರೂ ಪ್ರಯೋಜನವಿಲ್ಲದಂತಾಗಿದೆ.

Advertisement

ತಾಲೂಕಿನ ನೇರಳಕುಪ್ಪೆ ಗ್ರಾ.ಪಂ.ನ  ಕೆ.ಜಿ. ಹೆಬ್ಬನಕುಪ್ಪೆ ಸಪೋಟ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಪತ್ತೆಗೆ ಸಾಕಾನೆಯ ಸಹಾಯದೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಬಿಂಗ್ ಕಾರ್ಯಚರಣೆ ನಡೆಸಿದರು.

ನಾಗರಹೊಳೆ ರಾಷ್ಟ್ರಿಯ ಉದ್ಯಾನವನದಂಚಿನ ಕೆ.ಜಿ.ಹೆಬ್ಬನಕುಪ್ಪೆ  ಸಪೋಟ ತೋಟದಲ್ಲಿ ಉದಯ್‌ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ್ದ  ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿದ ವೇಳೆ ಹಸು ಹೋರಾಟ ನಡೆಸಿ ಹುಲಿಯನ್ನು ಓಡಿಸಿತ್ತು. ಹುಲಿ ಕಾಡಿನತ್ತ ಓಡಿತ್ತು.

ಹುಲಿ ದಾಳಿ ನಡೆಸಿರುವ ಕುರುಹುಗಳು, ದನದ ಕೊಟ್ಟಿಗೆ ಸುತ್ತಮುತ್ತಲಿನಲ್ಲಿ ಹೆಜ್ಜೆ ಗುರುತು ಪತ್ತೆಯಾದ ಹಿನ್ನಲೆಯಲ್ಲಿ ತೋಟದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಹುಣಸೂರು ವಲಯದ ಆರ್.ಎಫ್.ಒ ರತನ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಲಿ ಪತ್ತೆಗೆ ಸಾಕಾನೆ ಗಣೇಶನ ನೆರವಿನಿಂದ ಕಚುವಿನಹಳ್ಳಿ ಶ್ರೇಣಿಯ ಡಿ.ಆರ್.ಎಫ್.ಓ. ವೀರಭದ್ರಯ್ಯ ನೇತೃತ್ವದ ತಂಡ ಕೊಂಬಿಂಗ್ ಕಾರ್ಯಾಚರಣೆ ಆರಂಭಿಸಿ ಸಪೋಟ, ಮಾವಿನತೋಟ ಹಾಗೂ ಅಂಕನಕಟ್ಟೆ ಕೆರೆ ಭಾಗದಲ್ಲಿ ಹುಲಿ ಸೆರೆಗೆ ಮುಂದಾದರೂ ಹುಲಿ ಮಾತ್ರ ಕಾರ್ಯಾಚರಣೆ ನಡೆಸುತ್ತಿರುವವರ ಕಣ್ಣಿಗೆ ಕಾಣಿಸದೆ ಚಾಣಾಕ್ಯತನದಿಂದ ಸುತ್ತ ಮುತ್ತಲ ತೋಟಗಳಲ್ಲಿ ಮೇಯಲು ಬಿಡುವ ರಾಸುಗಳ ಮೇಲೆ ದಾಳಿ ನಡೆಸಿ ಭೇಟೆಯಾಡುತ್ತಿದೆ. ವಾರದ ಹಿಂದೆ ಸಹ ಈ ಭಾಗದ ಕಾಡಂಚಿನಲ್ಲಿ ಕೊಂಬಿಂಗ್ ನಡೆಸಿದ್ದರು.

ಕಾಳಬೂಚನಹಳ್ಳಿಯಲ್ಲಿ ಹುಲಿ ಹೆಜ್ಜೆ ಪತ್ತೆ;

Advertisement

ಇದೀಗ ಕೆ.ಜೆ.ಹಬ್ಬನಕುಪ್ಪೆ ಸಮೀಪದ ಕಾಳಬೂಚನಹಳ್ಳಿ ಗ್ರಾಮದ ಕೆ.ಪಿ.ದಿನೇಶ್‌ಕುಮಾರ್ ಎಂಬವರ ತೋಟ ಹಾಗೂ ಮುಸುಕಿನ ಜೋಳದ ಹೊಲದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಹುಲಿ ಸೆರೆ ಹಿಡಿಯುವಂತೆ ಉದ್ಯಾನದಂಚಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next