ಹುಣಸೂರು: ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾದ ನಗರಸಭೆ ಅಧಿಕಾರಿಗೆ 25 ಸಾವಿರ ರೂ ದಂಡ ವಿಧಿಸಿ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ. ಸತ್ಯನ್ ಆದೇಶಿಸಿದ್ದಾರೆ.
ಹುಣಸೂರು ನಗರಸಭೆ ಮಾಹಿತಿ ಅಧಿಕಾರಿಯವರಿಗೆ ಜೆ.ಬಿ.ಒಬೆದುಲ್ಲಾ 2022 ರ ಏಪ್ರಿಲ್ 18 ರಂದು ನಗರಸಭೆ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಮುಂದೆ ವಿಚಾರಣೆಗೆ ಹಾಜರಾಗಿ ನೀಡಿದ್ದ ಹೇಳಿಕೆಯ ದಾಖಲೆಯನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ ನಗರಸಭೆ ಮಾಹಿತಿ ಅಧಿಕಾರಿಯಾಗಿದ್ದ ಕಂದಾಯಾಧಿಕಾರಿ ಮಧುಸೂಧನ್‌ರವರು ದಾಖಲಾತಿ ನೀಡಲು ಸತಾಯಿಸಿದ್ದರು. ಇದರ ವಿರುದ್ದ 2022 ಜು.03 ರ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದ ಮೇರೆಗೆ ನೋಟೀಸ್ ಜಾರಿ ಮಾಡಿ 2022 ಏಪ್ರಿಲ್ 18 ರಂದು ಪೌರಾಯುಕ್ತರು ವಿಚಾರಣೆ ನಡೆಸಿ ಅರ್ಜಿದಾರರಿಗೆ ಸದರಿ ವಿಚಾರಣೆಯ ಹೇಳಿಕೆಯ ಪ್ರತಿ ನೀಡುವಂತೆ ಸೂಚಿಸಿದ್ದರೂ ನೀಡಿರಲಿಲ್ಲ.
ಹೀಗಾಗಿ ಒಬೇದುಲ್ಲಾರವರು 2022ರ ಆಗಸ್ಟ್ 19ರಂದು ಆಯೋಗಕ್ಕೆ ದೂರು ನೀಡಿದ್ದರು. ಆಯೋಗವು 2023 ಜೂನ್ 6 ರಂದು ವಿಚಾರಣೆ ನಡೆಸಿ ಉಚಿತವಾಗಿ ಮಾಹಿತಿ ನೀಡುವಂತೆ ಆದೇಶಿಸಿದ್ದರೂ ಸಹ ಈವರೆವಿಗೂ ಅರ್ಜಿದಾರರಿಗೆ ಮಾಹಿತಿ ನೀಡದೆ ವಿಳಂಬ ಮಾಡಿದ್ದರಿಂದ 2023 ರ ನ.10 ರಂದು ಮತ್ತೊಮ್ಮೆ ವಿಚಾರಣೆ ನಡೆದು ದಾಖಲಾತಿ ನೀಡುವಲ್ಲಿ ವಿಫಲವಾದ ಪ್ರಭಾರ ಕಂದಾಯಾ ನಿರೀಕ್ಷಕ ಮಧುಸೂಧನ್‌ರಿಗೆ 25 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದು, ಸಂಬಳದಲ್ಲಿ ಕಟಾವು ಮಾಡಿ ಖಜಾನೆಗೆ ಭರ್ತಿ ಮಾಡಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿ, ಪ್ರಕರಣವನ್ನು 2024 ರ ಏ. 7 ಕ್ಕೆ ಮುಂದೂಡಿದ್ದಾರೆ.