ಮುಂಬಯಿ: ಕೋವಿಡ್ ಸಂಬಂಧಿತ ಲಾಕ್ ಡೌನ್ ಸ್ಥಿತಿಯನ್ನು ಮೇ 3ರವರೆಗೆ ವಿಸ್ತರಿಸಿದ ಕಾರಣ ಮುಂದಿನ 19 ದಿನಗಳ ಕಾಲ ದೇಶಾದ್ಯಂತ ಜನಜೀವನ ಸ್ತಬ್ಧವಾಗಲಿದೆ.
ಇಲ್ಲಿನ ಬಾಂದ್ರಾ ಪಶ್ವಿಮ ರೈಲ್ವೇ ನಿಲ್ದಾಣದಲ್ಲಿ ಸಾವಿರಾರು ಜನ ಜಮಾಯಿಸಿ ತಮ್ಮನ್ನು ತಮ್ಮ ತಮ್ಮ ಊರುಗಳಿಗೆ ಮರಳಿಸುವಂತೆ ಆಗ್ರಹಿಸುತ್ತಿದ್ದಾರೆ. ಲಾಕ್ ಡೌನ್ ಉಲ್ಲಂಘಿಸಿ ರೈಲ್ವೇ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಜಮಾಯಿಸುತ್ತಿದ್ದಂತೆ ಪೊಲೀಸರು ಜನರ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ.
ಲಾಕ್ ಡೌನ್ ವಿಸ್ತರಿಸಿದ್ದನ್ನು ಈ ಕಾರ್ಮಿಕರು ವಿರೋಧಿಸುತ್ತಿದ್ದಾರೆ. ತಮಗೆ ಇಲ್ಲಿ ಸಾಕಷ್ಟು ಆಹಾರ ಹಾಗೂ ಇನ್ನಿತರ ಅವಶ್ಯ ಸಾಮಾಗ್ರಗಳು ಸಿಗುತ್ತಿಲ್ಲವೆಂದು ಅವರೆಲ್ಲಾ ಆಕ್ರೋಶಗೊಂಡಿದ್ದಾರೆ ಎಂದು ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಪಶ್ಚಿಮ ರೈಲ್ವೇ ಅಧಿಕಾರಿಗಳು ಹಿಂದೂಸ್ತಾನ್ ಟೈಮ್ಸ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಮುಂಬಯಿಗೆ ಕೆಲಸಕ್ಕಾಗಿ ಬಂದಿರುವ ವಲಸೆ ಕಾರ್ಮಿಕರು ಇದೀಗ ಲಾಕ್ ಡೌನ್ ಸ್ಥಿತಿಯಿಂದಾಗಿ ಕೆಲಸವೂ ಇಲ್ಲದೆ ಸರಿಯಾದ ಆಹಾರವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಇಂದು ಮತ್ತೆ 19 ದಿನಗಳ ಕಾಲ ಲಾಲ್ ಡೌನ್ ವಿಸ್ತರಿಸಿದೆ. ಇದರಿಂದ ಆತಂಕಗೊಂಡ ಕಾರ್ಮಿಕರ ಗುಂಪು ತಮ್ಮ ಊರುಗಳಿಗೆ ಮರಳಲು ರೈಲ್ವೇ ನಿಲ್ದಾಣದ ಕಡೆ ಧಾವಿಸಿ ಬರಲಾರಂಭಿಸಿದರು.
ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಬೇಕೆಂದು ಹಠ ಹಿಡಿಯುತ್ತಿದ್ದಾರೆ, ಅವರು ಕಾರ್ಮಿಕ ಕೇಂದ್ರಗಳಲ್ಲಿ ಉಳಿದುಕೊಳ್ಳಲು ಹಾಗೂ ಆಹಾರ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಈ ಸಂಬಂಧ ನಗರದಲ್ಲಿರುವ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಹೋಗಲು ಅವಕಾಶ ಮಾಡಿಕೊಡಬೇಕೆಂಬ ನಮ್ಮ ಮನವಿಯನ್ನು ಕೇಂದ್ರ ಸರಕಾರ ಮಾನ್ಯ ಮಾಡಲಿಲ್ಲ ಎಂದು ಆದಿತ್ಯ ಠಾಕ್ರೆ ಕೆಂದ್ರ ಸರಕಾರದ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ.