ಹುಣಸೂರು: ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಮಳೆ ಆರಂಭಗೊಂಡಿದ್ದು, ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿನ ಅಪಾರ ಪ್ರಮಾಣದ ಸಸ್ಯ ಸಂಪತ್ತು, ವನ್ಯಜೀವಿಗಳಿಗೆ ಜೀವಕಳೆ ಬಂದಿದೆ.
ಸೋಮವಾರ ಬೆಳ್ಳಂಬೆಳಗ್ಗೆ ಸಫಾರಿಗೆ ತೆರಳಿದ್ದ ಜಂಗಲ್ ಲಾಡ್ಜ್ ನ ಸಫಾರಿ ವಾಹನದಲ್ಲಿ ತೆರಳಿದ್ದವರಿಗಷ್ಟೆ ಅಲ್ಲದೆ, ದಮ್ಮನಕಟ್ಟೆಯ ಮಾಮೂಲಿ ಸಫಾರಿ ವಾಹನದಲ್ಲಿ ತೆರಳಿದ್ದವರಿಗೂ ಹೆಣ್ಣು ಹುಲಿಯೊಂದಿಗೆ ಎರಡು ಮರಿ ಹುಲಿಗಳ ದರ್ಶನ ಭಾಗ್ಯ ದೊರೆತಿದೆ.
ಬೆಳ್ಳಂಬೆಳಗ್ಗೆ ಹುಲಿಯೊಂದು ತನ್ನ ಮರಿಗಳೊಂದಿದೆ ಸಫಾರಿ ಲೈನ್ ದಾಟಿ ಅರಣ್ಯದೊಳಕ್ಕೆ ಹೋಗುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹುಲಿ ಸಂರಕ್ಷಣೆಗೆ ಹೇಳಿ ಮಾಡಿಸಿದ ತಾಣವಾಗಿದ್ದು, ಕಳೆದ ಸಾಲಿನ ಹುಲಿ ಗಣತಿ ವೇಳೆ 125 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಹಿಂದೆಲ್ಲಾ ಹುಲಿಗಳು ಆಗೊಮ್ಮೆ- ಈಗೊಮ್ಮೆ ಕಾಣಸಿಗುತ್ತಿದ್ದ ದಿನಗಳಿದ್ದವು.
ಇದನ್ನೂ ಓದಿ:ಭಾರತದ ತಂಡದಲ್ಲಿ ವಿಕೆಟ್ ಕಬಳಿಸುವ ಬೌಲರ್ ಗಳಿಲ್ಲ: ಮಾಜಿ ನಾಯಕನ ಟೀಕೆ
ಇತ್ತೀಚಿನ ವರ್ಷದಲ್ಲಿ ಅರಣ್ಯ ಇಲಾಖೆಯ ಕಠಿಣ ಕ್ರಮ, ಕಳ್ಳ ಭೇಟೆಗೆ ಕಡಿವಾಣ, ಸಿಬ್ಬಂದಿಗಳು ಅರಣ್ಯದ ಸಂರಕ್ಷಣೆ ಮಾಡುತ್ತಿರುವುದರಿಂದಾಗಿ ಈ ಬಾರಿ ಹುಲಿ ಸಂತತಿಯು ಮತ್ತಷ್ಟು ಹೆಚ್ಚಳವಾಗಿರುವುದಕ್ಕೆ ಕಾರಣವಾಗಿದ್ದು, ಸಫಾರಿಯಲ್ಲಿ ನಿತ್ಯ ಹುಲಿಗಳು ಕಾಣಸಿಗುತ್ತಿವೆ. ಇದರಿಂದಾಗಿ ಸಫಾರಿ ಪ್ರಿಯರು ವನ್ಯಜೀವಿಗಳನ್ನು ಕಂಡು ಸಂತಸಪಡುತ್ತಿದ್ದಾರೆ.