Advertisement

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 3 ಸಾವು

09:26 AM Aug 12, 2020 | mahesh |

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಧಾರ್ಮಿಕ ಅವಹೇಳನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕಾವಲ್‌ಬೈರಸಂದ್ರದಲ್ಲಿರುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮತ್ತು ಕಚೇರಿ ಮೇಲೆ ಉದ್ರಿಕ್ತ ಗುಂಪೊಂದು ಮಂಗಳವಾರ ರಾತ್ರಿ ದಾಳಿ ನಡೆಸಿ ಬೆಂಕಿ ಹಚ್ಚಿದೆ. ಪೊಲೀಸರು ಮತ್ತು ಉದ್ರಿಕ್ತರ ನಡುವಿನ ಘರ್ಷಣೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ.

Advertisement

ಕಾಡಗೊಂಡನಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗೆ ದಿಗ್ಬಂಧನ ಹಾಕಿರುವ ಗುಂಪು, ಶಾಸಕರು ಹಾಗೂ ಅವರ ಸಂಬಂಧಿ ನವೀನ್‌ ಮನೆ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಬೆಂಕಿ ಹಚ್ಚಿದೆ. ಪೊಲೀಸ್‌ ವಸತಿಗೃಹಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಲಾಗಿದೆ.

ಕರ್ಫ್ಯೂ, ಗೋಲಿಬಾರ್‌
ಕಿಡಿಗೇಡಿಗಳು ಅಲ್ಲಲ್ಲಿ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚುವ ಯತ್ನ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದುದರಿಂದ ಗೋಲಿಬಾರ್‌ ನಡೆಸಿದರು. ಅನಂತರ ಕರ್ಫ್ಯೂ ವಿಧಿಸಲಾಯಿತು. ಅದಕ್ಕಿಂತ ಮೊದಲು ಪೊಲೀಸರು ಉದ್ರಿಕ್ತ ರತ್ತ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ್ದರು. ಆದರೆ ಪರಿಸ್ಥಿತಿ ತಡರಾತ್ರಿಯವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ.

ಏಕಾಏಕಿ ಜಮಾಯಿಸಿದ ಜನ
ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್‌ ಅವರು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ಒಂದು ಕೋಮಿನ ನೂರಾರು ಜನ ರಾತ್ರಿ 10 ಗಂಟೆ ಸುಮಾರಿಗೆ ಕಾವಲ್‌ ಬೈರಸಂದ್ರದಲ್ಲಿರುವ ಶ್ರೀನಿವಾಸಮೂರ್ತಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅದನ್ನು ಚಿತ್ರೀಕರಿಸಲು ಬಂದ ಸಾರ್ವ ಜನಿಕರ ಮೊಬೈಲ್‌ಗ‌ಳನ್ನು ಕಿತ್ತೆಸೆದಿದ್ದಾರೆ. ಅಲ್ಲದೆ, ಆ ರಸ್ತೆ ಯಲ್ಲಿರುವ ಐದಾರು ದ್ವಿಚಕ್ರ ವಾಹನಗಳು ಮತ್ತು ಕಾರು ಗಳ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಠಾಣೆ ಮುಂದೆ ಜಮಾವಣೆ ನೂರಾರು ಮಂದಿ ಸ್ಥಳೀಯರು ಕೆ.ಜಿ. ಹಳ್ಳಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿ ಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿ ಭಟನೆ ನಡೆಸಿದರು.  ಪ್ರತಿಭಟನನಿರತ ಗುಂಪನ್ನು ಚದುರಿ ಸಲು ಹರಸಾಹಸ ಪಡುತ್ತಿದ್ದ ಪೊಲೀಸರು, “ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಕರ್ತವ್ಯಕ್ಕೆ ಅವಕಾಶ ನೀಡಿ. ಎಲ್ಲರೂ ಮನೆಗಳಿಗೆ ತೆರಳಿ’ ಎಂದು ಮನವಿ ಮಾಡಿದರು. ಆದರೂ ಕೆಲವರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

Advertisement

ಆಗ ಅನಿವಾರ್ಯವಾಗಿ ಪೊಲೀಸರು ಗುಂಪು ಚದುರಿ ಸಲು ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಠಾಣೆ ಯಿಂದ ಹೊರಗೆ ಬರದಂತೆ ಪ್ರತಿಭಟನಕಾರರು ಜಮಾ ಯಿಸಿದ್ದರಿಂದ ಅಕ್ಕ ಪಕ್ಕದ ಠಾಣೆಗಳಿಂದ ಹೆಚ್ಚುವರಿ ಸಿಬಂದಿಯನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.
ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಶಾಸಕ ಜಮೀರ್‌ ಅಹ್ಮದ್‌, ಪ್ರತಿಭಟನ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನ ನಿರತರ ಜತೆ ಮಾತುಕತೆ ನಡೆಸಿದರು. ತಪ್ಪಿತಸ್ಥರನ್ನು ಪೊಲೀಸರು ಈಗಾಗಲೇ ಗುರುತಿಸಿದ್ದಾರೆ. ಸದ್ಯದಲ್ಲೇ ಅವರನ್ನು ಬಂಧಿಸುತ್ತಾರೆ. ಆರೋಪಿಗಳ ಬಂಧನಕ್ಕೆ ಮೂರು ಪೊಲೀಸರ ತಂಡ ತೆರಳಿದೆ ಎಂದು ಶಾಸಕ ಜಮೀರ್‌ ಪ್ರತಿಭಟನ ನಿರತರಿಗೆ ಮನವರಿಕೆ ಮಾಡಿಕೊಡಲು ತಿಳಿಸಿದರು.

ಈ ಕುರಿತು ವೀಡಿಯೋ ಬಿಡುಗಡೆ ಮಾಡಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, “ಸಮುದಾಯದ ಬಾಂಧವರಿಗೆ ಕೇಳಿಕೊಳ್ಳುತ್ತೇನೆ. ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮಕೈಗೊಳ್ಳೋಣ. ಯಾರೂ ಗಲಾಟೆ ಮಾಡುವುದು ಬೇಡ. ಯಾವುದೇ ಧರ್ಮದ ಬಗ್ಗೆ ಯಾರೇ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದರೂ ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಪೋಸ್ಟ್‌ ಹಾಕಿದವರಿಗೆ ಶಿಕ್ಷೆ ಆಗಬೇಕು. ತಪ್ಪಿತಸ್ಥರನ್ನು ತತ್‌ಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಆಗ್ರಹಿಸುತ್ತೇನೆ’ ಎಂದಿದ್ದಾರೆ.

ನೂರಾರು ವಾಹನಗಳು ಆಹುತಿ
ಕಿಡಿಗೇಡಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹಲವಾರು ವಾಹನಗಳು ಸುಟ್ಟು ಭಸ್ಮವಾಗಿದೆ. ಕೆಲವೇ ಕೆಲವು ಸಮಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಯಿತು. ಹಲವಾರು ದ್ವಿಚಕ್ರ ವಾಹನಗಳು, ಹಲವಾರು ಮನೆಗಳು ಹಾನಿಗೊಳಗಾಗಿವೆ.

ಆರೋಪಿ ಬಂಧನ?
ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಕಿಡಿಗೇಡಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಂಧಿತನ ಹೆಸರನ್ನು ಹೇಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next