Advertisement

ಬಳಕೆಯಾಗದೆ ಪಾಳು ಬಿದ್ದ ಶೌಚಾಲಯ

11:41 AM Oct 09, 2019 | Naveen |

„ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಲಕ್ಷಾಂತರ ರೂಪಾಯಿ ಅನುದಾನದಲ್ಲಿ 15 ವರ್ಷಗಳ ಹಿಂದೆ ನಿರ್ಮಿಸಿದ್ದ ಸಮುದಾಯ ಶೌಚಾಲಯಗಳು ನಿರ್ವಹಣೆ ಕೊರತೆ ಕಾರಣ ಬಳಕೆ ಇಲ್ಲದೇ ಪಾಳು ಬಿದ್ದಿವೆ. ಉಳ್ಳವರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬಹುದು. ಆದರೆ ಕೊಳಚೆ ಪ್ರದೇಶದ ಬಡ ಹಾಗೂ ಮಧ್ಯಮ ವರ್ಗದ ಜನರು ಎದುರಿಸುತ್ತಿರುವ ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಆ ಅವಧಿಯಲ್ಲಿ ಶಾಸಕರಾಗಿದ್ದ ರಾಜಶೇಖರ ಪಾಟೀಲ ಅವರು ಎಸ್‌. ಎಂ.ಕೃಷ್ಣ ನೇತೃತ್ವದಲ್ಲಿ ಸರ್ಕಾರದಲ್ಲಿ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಿ ತಲಾ ರೂ. 4.5ಲಕ್ಷ ವೆಚ್ಚದಲ್ಲಿ ಪಟ್ಟಣದ ಏಳು ಓಣಿಗಳಲ್ಲಿ ಶೌಚಾಲಯ ನಿರ್ಮಿಸಿದ್ದರು.

Advertisement

ಜನತಾ ಕಾಲೋನಿ, ಶಿವಪೂರ ಓಣಿ, ಧನಗರಗಡ್ಡಾ, ಕೋಳಿವಾಡಾ, ಜೇರಪೇಟೆ, ಇಂದಿರಾನಗರ ಎಂ.ಪಿ. ತೋಟದ ರಸ್ತೆ ಮಾರ್ಗಮಧ್ಯ ಸೇರಿದಂತೆ ಒಟ್ಟು ಏಳು ಕೊಳಚೆ ಪ್ರದೇಶಗಳಲ್ಲಿ ಈ ಶೌಚಾಲಯಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಯೇ ನಿರ್ಮಿಸಿದೆ. ಅತ್ಯಂತ ಅವಶ್ಯವಿರುವ ನೀರು, ವಿದ್ಯುತ್‌ ಸೌಲಭ್ಯ ಮೊದಲಾದ ಯಾವುದೇ ಮೂಲಸೌಲಭ್ಯ ಕಲ್ಪಿಸದೇ ಕೇವಲ ಕಟ್ಟಡ ನಿರ್ಮಿಸಿ ಕೈ ತೊಳೆದುಕೊಂಡಿದೆ. ಆದರೆ ಈ ವರೆಗೆ ಪುರಸಭೆಗೆ ಅವುಗಳನ್ನು ಹಸ್ತಾಂತರಿಸಿಲ್ಲ. ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಾಸಕ ಪಾಟೀಲ ಅವರು ವಿಶೇಷ ಕಾಳಜಿ ವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನವೇನೋ ತಂದರು. ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ತರಾತುರಿಯಲ್ಲಿ ಕಟ್ಟಡ ನಿರ್ಮಿಸಿ, ಕೈ ತೊಳೆದುಕೊಂಡಿದ್ದಾಯಿತು. ಆದರೇ ಅಪೂರ್ಣ ಸ್ಥಿತಿಯಲ್ಲಿರುವ ಅವುಗಳನ್ನು ಪೂರ್ಣಗೊಳಿಸದೇ ಇರಲು ಕಾರಣವೇನು ಎಂಬುದರ ಬಗ್ಗೆ ಸಂಬಂಧಪಟ್ಟವರನ್ನು ಈ ವರೆಗೆ ಗದರಿಸಿ ಕೇಳುವ ಧೈರ್ಯವನ್ನು ಯಾರೊಬ್ಬ ಚುನಾಯಿತ ಪ್ರತಿನಿಧಿಗಳೂ ಮಾಡದಿರುವುದು ನೋವಿನ ಸಂಗತಿ.

ಗಿಡಗಂಟೆಗಳ ತಾಣ: ಹೀಗೆ ನಿರ್ವಹಣೆ ಇಲ್ಲದ ಕಾರಣ ನಿರ್ಮಿಸಿರುವ ಎಲ್ಲ ಶೌಚಾಲಯ ಕಟ್ಟಡಗಳ ಎದುರು ಗಿಡಗಂಟೆ ಬೆಳೆದಿವೆ. ಮಳೆ ಗಾಳಿಗೆ ಛಾವಣಿ ಮೇಲೆ ಮಣ್ಣು ಬಿದ್ದು ಹುಲ್ಲುನಾಟಿ ಕುಸಿಯಲು ಇಂದು ನಾಳೆ ಎಂದು ಎಣೆಕೆ ಮಾಡುವ ಸ್ಥಿತಿಯಲ್ಲಿವೆ. ಸಾರ್ವಜನಿಕರ ಶೌಚಕ್ಕಾಗಿ ನಿರ್ಮಿಸಿದ ಈ ಕಟ್ಟಡಗಳು ಗಿಡಗಂಟೆಗಳಿಂದ ಆವೃತಗೊಂಡ ಕಾರಣ ಅದೊರಳಗೆ
ಜನ ಹೋಗಲು ಭಯಪಡುವಂತಾಗಿದೆ.

ಮೂರು ಹೊಸ ಶೌಚಾಲಯ: ಇದು 15 ವರ್ಷಗಳ ಹಿಂದಿನ ಕಥೆಯಾದರೆ 2013ರಲ್ಲಿ ಶಾಸಕ ರಾಜಶೇಖರ ಪಾಟೀಲ ಅವರೆ ವಿಶೇಷ ಮುತುವರ್ಜಿ ವಹಿಸಿ, ನಿರ್ಮಿಸಿದ ತಲಾ ರೂ.13ಲಕ್ಷಕ್ಕೂ ಅಧಿಕ ವೆಚ್ಚದ ಮೂರು ಹೈಟೆಕ್‌ ಶೌಚಾಲಯಗಳ ಪೈಕಿ ನ್ಯಾಯಾಲಯ ಪ್ರಾಂಗಣ, ಹಳೆ ತಹಶೀಲ್ದಾರ್‌ ಕಚೇರಿ ಎದುರಿನ ಶೌಚಾಲಯಗಳು ಅಡ್ಡಿಯಿಲ್ಲ ಎನ್ನುವ ಸ್ಥಿತಿಯಲ್ಲಿವೆ. ಆದರೆ ತಾಲೂಕು ಆಡಳಿತದ ಮಿನಿವಿಧಾನಸೌಧ ಪ್ರಾಂಗಣದಲ್ಲಿರುವ ಹೈಟೆಕ್‌ ಶೌಚಾಲಯದ ಸ್ಥಿತಿ ಗಂಭಿರವಾಗಿದೆ. 6 ವರ್ಷಗಳ ಹಿಂದೆ ನಿರ್ಮಿಸಿದ ಹೊಸ ಕಟ್ಟಡ ಸಹ ಹಳೆ ಕಟ್ಟಡದಂತೆ ಕಾಣುತ್ತಿದ್ದು, ಇವುಗಳ ಜೊತೆಗೆ ಅದೂ ಬಳಕೆ ಇಲ್ಲದೆಯೇ ಪಾಳು ಬಿದ್ದಿದೆ.
ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಸಲ್ಲದ ನೆಪವೊಡ್ಡಿ ಕಾಕಹರಣ ಮಾಡದೇ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಉದ್ದೇಶಿತ ಕೆಲಸಕ್ಕೆ ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಕರ್ತವ್ಯ ಬೇಜವಾಬ್ದಾರಿ ಪ್ರದರ್ಶಿಸುವವರ ವಿರುದ್ಧ ಕೇವಲ ಮೌಖೀಕವಾಗಿ ಎಚ್ಚರಿಕೆ ನೀಡದೇ ಮುಲಾಜಿಲ್ಲದೇ ಶಿಸ್ತುಕ್ರಮ ಜರುಗಿಸುವ ಮೂಲಕ ಅನೂಕೂಲ ಕಲ್ಪಿಸಬೇಕು ಎಂಬುದು ಕೊಳಚೆ ಪ್ರದೇಶ ನಿವಾಸಿಗಳ ಒತ್ತಾಸೆ.

Advertisement

Udayavani is now on Telegram. Click here to join our channel and stay updated with the latest news.

Next