ಹುಮನಾಬಾದ: ನವರಾತ್ರಿ ಅಂಗವಾಗಿ ಆರಂಭಿಸಲಾದ ತುಳಜಾಪುರದೇವಿ ಜಾತ್ರೆ ವಿಶೇಷ ಬಸ್ ಸಂಚಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಬಿ.ಪಾಟೀಲ, ನವರಾತ್ರಿ ನಿಮಿತ್ತ ತುಳಜಾಪುರ ಅಂಬಾಭವಾನಿದೇವಿ ದರ್ಶನಕ್ಕೆ ತೆರಳುವ ಭಕ್ತರು ಸುರಕ್ಷಿತ ಪ್ರಯಾಣಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲೇ ಪ್ರಯಾಣಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಒದಗಿಸುವ ವಿಶೇಷ ಬಸ್ ವ್ಯವಸ್ಥೆಯಿಂದ ಲಕ್ಷಾಂತರ ಭಕ್ತರು ಪ್ರಯೋಜನ ಪಡೆಯುತ್ತಾರೆ. ಇಡೀ ಬೀದರ ವಿಭಾಗ ವ್ಯಾಪ್ತಿಯ ಹುಮನಾಬಾದ ಉಪವಿಭಾಗ ಅತ್ಯಂತ ಹೆಚ್ಚಿನ ಆದಾಯ ತರುತ್ತಿರುವುದು ಹೆಮ್ಮೆಯ ಸಂಗತಿ. ನಿಗದಿತ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ವಾಹನ ಓಡಿಸದೇ ಸಂಸ್ಥೆ ಮೇಲೆ ಪ್ರಯಾಣಿಕರು ಇಟ್ಟಿರುವ ವಿಶ್ವಾಸಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು. ಅನಗತ್ಯ ವಾದ ಮಾಡದೇ ವಿನಯದಿಂದ ಮಾತನಾಡಿ ಪ್ರಯಾಣಿಕ ಸ್ನೇಹಿ ಚಾಲಕ, ನಿರ್ವಾಹಕರು ಎಂಬ ಖ್ಯಾತಿ ಪಡೆಯಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೀದರ ವಿಭಾಗೀಯ ತಾಂತ್ರಿಕ ಇಂಜಿನಿಯರ್ ಸುರೇಶ ಖಮೀತ್ಕರ್, ನವರಾತ್ರಿ ಉತ್ಸವ ಅಂಗವಾಗಿ ಈ ವರ್ಷವೂ ತುಳಜಾಪುರಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಸುಖಕರ ಪ್ರಯಾಣ ಉದ್ದೇಶದಿಂದ 110 ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸೆ.24ರಿಂದ ಅ. 15ರ ವರೆಗೆ ತಡೆ ರಹಿತ ಬಸ್ ಸಂಚಾರ ಸೌಲಭ್ಯ ಇರುತ್ತದೆ. ಕಳೆದ ವರ್ಷ 1.5 ಕೋಟಿ ರೂ. ಗುರಿ ನೀಡಲಾಗಿತ್ತು. ಆದರೆ ಗುರಿ ಮೀರಿ 1.80 ಕೋಟಿ ರೂ. ಆದಾಯ ಸಂಗ್ರಹಿಸಲಾಗಿತ್ತು. ಈ ಬಾರಿ 2 ಕೋಟಿ ರೂ. ಆದಾಯ ಗುರಿ ಹೊಂದಲಾಗಿದೆ. ಗುರಿ ಮೀರಿದ ಸಾಧನೆ ಮಾಡುವ ಆತ್ಮವಿಶ್ವಾಸವಿದೆ ಎಂದು ಹೇಳಿದರು.
ಘಟಕ ವ್ಯವಸ್ಥಾಪಕ ಮಂಜುನಾಥ ಮಾಯಣ್ಣವರ ಮಾತನಾಡಿ, ಪ್ರತಿ ಪ್ರಯಾಣಿಕರಿಗೆ 175 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ. ಉಪವಿಭಾಗ ವ್ಯಾಪ್ತಿಯ ಯಾವುದೇ ಊರಿನಿಂದ ಏಕ ಕಾಲಕ್ಕೆ 50 ಪ್ರಯಾಣಿಕರು ತುಳಜಾಪುರ ಯಾತ್ರೆಗೆ ತೆರಳಲು ಸಿದ್ಧರಿದ್ದರಲ್ಲಿ ಬಸ್‌ಅನ್ನು ನೇರವಾಗಿ ಅವರಿರುವ ಊರಿಗೆ ಕಳುಹಿಸಲಾಗುತ್ತದೆ. ಆದರೆ ಈ ಸಂಬಂಧ ಯಾವುದೇ ವ್ಯಕ್ತಿ ತಪ್ಪು ಮಾಹಿತಿ ನೀಡಿ ಬಸ್ ತರಿಸಿಕೊಂಡಲ್ಲಿ ಕರೆ ಬಂದ ಮೊಬೈಲ್ ಸಂಖ್ಯೆ ಆಧರಿಸಿ 50 ಪ್ರಯಾಣಿಕರ ಟಿಕೆಟ್ ದರ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಸ್ ಸೌಲಭ್ಯಕ್ಕಾಗಿ ಬೀದರ 7760992200, 7760992214. ಹುಮನಾಬಾದ 7760992215, ಬಸವಕಲ್ಯಾಣ 7760992216, ಭಾಲ್ಕಿ 7760992217, ಔರಾದ 7760992218ಗೆ ಸಂರ್ಪಕಿಸಬಹುದು ಎಂದು ಹೇಳಿದರು.
ಭದ್ರತಾ ಮತ್ತು ಜಾಗೃತಿ ಅ ಧಿಕಾರಿ ಮಲ್ಲಿಕಾರ್ಜುನ ಬೋಳಾರೆಡ್ಡಿ, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಖಾಲೀದ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ವೈಜಿನಾಥ ಎಂ. ಧನ್ನೂರಾ, ವಿಜಯಕುಮಾರ, ರಾಜೇಂದ್ರ, ಶರಣಪ್ಪ, ಬಸವರಾಜ ಸ್ವಾಮಿ, ಭದ್ರತಾ ರಕ್ಷಕ ಸಂಗಪ್ಪ ಕಠಳ್ಳಿ, ಗೋವಿಂದ ಮೆಕಾಲೆ, ಶರಣಪ್ಪ, ಸೈಯದ್ ಖಾಲೀದ್, ನಜೀರಸಾಬ್, ಎಕ್ಬಾಲ್, ಬಂಡೆಪ್ಪ ಗುಳಶೆಟ್ಟಿ, ಪುರಸಭೆ ಸದಸ್ಯ ಅಪ್ಸರಮಿಯ್ನಾ, ಬಿಜೆಪಿ ಮುಖಂಡ ಸಂಜಯ ದಂತಕಾಳೆ, ಸಂಗಯ್ಯಸ್ವಾಮಿ, ಕೆ. ಪ್ರಭಾಕರ ಇದ್ದರು.