Advertisement

ಹಾಳು ಕೊಂಪೆಯಾದ ಯಾತ್ರಿ ನಿವಾಸ 

10:02 AM Dec 30, 2018 | |

ಹುಮನಾಬಾದ: ಹೈ.ಕ. ಭಾಗದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ವಿವಿಧ ರಾಜ್ಯಗಳಿಂದ ಬರುವ ಭಕ್ತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯ ವಿಶೇಷ ಅನುದಾನಡಿ ನಿರ್ಮಿಸಿದ ಯಾತ್ರಿ ನಿವಾಸ ಉದ್ದೇಶಿತ ಕೆಲಸಕ್ಕೆ ಬಳಕೆಯಾಗದೇ ಹಂದಿ, ಉಂಡಾಡಿಗಳ ತಾಣವಾಗಿ ಮಾರ್ಪಟ್ಟಿದೆ.

Advertisement

ಪ್ರತೀ ವರ್ಷ ಜನವರಿ 10ರಿಂದ 26ರ ವರೆಗೆ ಎರಡು ವಾರ ಕಾಲ ನಡೆಯುವ ಜಾತ್ರೆ, ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತ ನಡೆಯುವ ಮಹಾರುದ್ರಾಭಿಷೇಕ, ಪುರಾಣ ಒಳಗೊಂಡಂತೆ ವರ್ಷವಿಡೀ ನಡೆಯುವ ಮದುವೆ ಮೊದಲಾದ ಶುಭ ಸಮಾರಂಭಕ್ಕೆ ಬೀದರ್‌ ಮಾತ್ರವಲ್ಲದೇ ವೀರಭದ್ರೇಶ್ವರರನ್ನೇ ಮನೆ ದೇವರಾಗಿ ಪೂಜಿಸುವ ತೆಲಂಗಾಣ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳ ಅಸಂಖ್ಯಾತ ಭಕ್ತರು ಬರುತ್ತಾರೆ.

ಯಾತ್ರಾರ್ಥಿಗಳಿಗೆ ರಾತ್ರಿ ವಿಶ್ರಾಂತಿಗಾಗಿ ಅಗತ್ಯ ಕೋಣೆ ಮತ್ತಿತರ ಮೂಲಸೌಲಭ್ಯವಿಲ್ಲದೇ ಭಕ್ತರು ದೇವಸ್ಥಾನದಿಂದ ದೂರದಲ್ಲಿರುವ ಲಾಡ್ಜ್ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಶ್ರೀಮಂತರಾದರೆ ಹೇಗೋ ವೆಚ್ಚ ಭರಿಸಲು ಸಾಧ್ಯ. ಆದರೆ ಮಧ್ಯಮ ಹಾಗೂ ಬಡ ವರ್ಗದವರಿಗೆ ಈ ಭಾರ ಭರಿಸಲಾಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದರು. ದೇವಸ್ಥಾನ ಆಡಳಿತ ಮಂಡಳಿ ಮಾತ್ರವಲ್ಲದೇ ಈ ವಿಷಯವನ್ನು ಭಕ್ತರು 2011ರಿಂದ ಮೇಲಿಂದ ಮೇಲೆ ಒತ್ತಡ ಹೇರುತ್ತಿದ್ದರು.

ಭಕ್ತರ ಸಮಸ್ಯೆ ಅರ್ಥಮಾಡಿಕೊಂಡ ಈ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲರು ಯಾತ್ರಿನಿವಾಸ ನಿರ್ಮಾಣಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನುದಾನ ತಂದಿದ್ದಲ್ಲದೇ 2012ರಲ್ಲೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆರಂಭದಲ್ಲಿ ವೇಗದಲ್ಲಿದ್ದ ಕಾಮಗಾರಿ ಕಾರಣಾಂತರದಿಂದ ಒಂದೂವರೆ ವರ್ಷಕಾಲ ನನೆಗುದಿಗೆ ಬಿದ್ದಿತ್ತು.

ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಉದಯವಾಣಿ ವಿಶೇಷ ವರದಿ ಪಕಟಿಸಿತ್ತು. ಸುದ್ದಿ ಪ್ರಕಟಗೊಂಡ 15 ದಿನಗಳಲ್ಲೇ ಶಾಸಕ ಪಾಟೀಲರು ಕಾಮಗಾರಿ ಚುರುಕುಗೊಳಿಸಲು ಸಂಬಂಧಿತರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರಿಂದ 2015ರಲ್ಲಿಯೇ ಪೂರ್ಣಗೊಂಡ ಕಟ್ಟಡ ಉದ್ಘಾಟಿಸಿದ್ದರು. 18 ಕೋಣೆ, ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ಇದ್ದವು. ಕೆಲವೇ ದಿನಗಳಲ್ಲಿ ಕೊಳವೆ ಬಾರಿ ಕೆಟ್ಟಿದ್ದರಿಂದ ಸೇವೆ ಸ್ಥಗಿತಗೊಂಡ ನಂತರ ಸೂಕ್ತ ನಿರ್ವಹಣೆ ಇಲ್ಲದೇ ಮದ್ಯ ವ್ಯಸನಿಗಳು, ಜೂಜುಕೋರರು ಸೇರಿದಂತೆ ಒಟ್ಟಾರೆ ದುರ್ವೆಸನಿಗಳ ತಾಣವಾಗಿ ಇದು ಮಾರ್ಪಟ್ಟಿತ್ತು.

Advertisement

ಕಾವಲುಗಾರರು ಯಾರೂ ಇಲ್ಲದ್ದರಿಂದ ಉಂಡಾಡಿಗಳು ಬಾಗಿಲು, ಕಿಟಕಿ ಒಡೆದಿದ್ದಾರೆ. ಮಂಚಗಳ ಮೇಲೆಲ್ಲ ಮದ್ಯದ ಬಾಟಲ್‌, ಸಿಗರೇಟ್‌ ಪ್ಯಾಕ್‌ ಮತ್ತಿತರ ವಸ್ತುಗಳ ಬಿದ್ದಿವೆ. ಅಲ್ಲಿದ್ದ 20ಕ್ಕೂ ಅಧಿ ಕ ಮಂಚಗಳ ಪೈಕಿ ಶೇ.25ರಷ್ಟು ಹಾಳಾಗಿವೆ. ದೀಪದ ವ್ಯವಸ್ಥೆ ಇಲ್ಲದೇ ಕೋಣೆಗಳಲ್ಲಿ ಸದಾ ಕತ್ತಲೆ ಆವರಿಸಿರುತ್ತದೆ.

ಭಕ್ತರ ಅನುಕೂಲಕ್ಕಾಗಿ ಶಾಸಕ ರಾಜಶೇಖರ ಪಾಟೀಲ ಅವರು ವಿಶೇಷ ಮುತುವರ್ಜಿವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಿ 1ಕೋಟಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು ಪ್ರಶಂಸನೀಯ. ಆದರೇ ಅದು ಉದ್ದೇಶಿತ ಕೆಲಸಕ್ಕೆ ಬಳಕೆಯಾಗದೇ ಉಂಡಾಡಿಗಳ ಆಶ್ರಯತಾಣವಾಗಿರುವುದು ಶೋಚನೀಯ ಸಂಗತಿ. ಅಂದು ಶಾಸಕರಾಗಿದ್ದ ಅವರು ಈಗ ಸಚಿವರಾಗಿದ್ದಾರೆ. ಪಾಳುಬಿದ್ದ ಕಟ್ಟಡ ಬಳಕೆಗೆ ಯೋಗ್ಯ ಸ್ಥಿತಿಗೆ ತರುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಭಕ್ತರ ಆಶಯ.

ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾದ ಯಾತ್ರಿ ನಿವಾಸ ಕಾರಣಾಂತರದಿಂದ ಭಕ್ತರ ಸೇವೆಗೆ ಲಭ್ಯವಾಗಲು ಸಾಧ್ಯವಾಗಿರಲಿಲ್ಲ. ಆದರೇ ಈಗ ಸರ್ಕಾರ ದೇವಸ್ಥಾನಕ್ಕಾಗಿ ಪ್ರತ್ಯೇಕವಾಗಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಿಯೋಜಿಸುವ ಸಂಬಂಧ ಈಗಾಗಲೇ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಸೇವೆಗೆ ಹಾಜರಾಗುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಶೀಘ್ರ ಯಾತ್ರಿನಿವಾಸದಲ್ಲಿನ ಸಣ್ಣಪುಟ್ಟ ದುರುಸ್ತಿ ಮಾಡಿ ಭಕ್ತರ ಸೇವೆ ಒದಗಿಸಲಾಗುತ್ತದೆ.
ವೀರಣ್ಣ ಎಚ್‌.ಪಾಟೀಲ,
  ಅಧ್ಯಕ್ಷರು ವೀರಭದ್ರೇಶ್ವರ ದೇವಸ್ಥಾನ ಸಮಿತಿ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next