ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ದೇವಸ್ಥಾನದ ಗರ್ಭಗುಡಿಯಿಂದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯ ಅವರು ಮೂಲ ಮೃತ್ತಿಕೆಯನ್ನು ವಿವಿಧ ವೈಧಿಕ ವಿಧಾನಗಳ ಮೂಲಕ ತೆಗೆದರು. ಆರಂಭದಲ್ಲಿ ಶ್ರೀ ದೇಗುಲದ ಪುರೋಹಿತರಿಗೆ ಮತ್ತು ಆಡಳಿತ ಮಂಡಳಿಗೆ ಮೂಲಮೃತ್ತಿಕೆ ನೀಡಿದ ಬಳಿಕ ಭಕ್ತರಿಗೆ ವಿತರಿಸಲಾಯಿತು.
ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಮೃತ್ತಿಕಾ ಪ್ರಸಾದ ಪಡೆದರು. ಮೂಲ ಮೃತ್ತಿಕಾ ಪ್ರಸಾದ ತೆಗೆಯಲು ಇದ್ದುದರಿಂದ ಮಧ್ಯಾಹ್ನ ಅನಂತರ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಮಾಡಲಾಯಿತು. ಏಕಾದಶಿ ದಿನವಾಗಿದ್ದರಿಂದ ಆಯ್ದ ಸೇವೆಗಳನ್ನು ಭಕ್ತರು ನೆರವೇರಿಸಿದರು.
ಈ ಸಂದರ್ಭ ಶ್ರೀ ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಿಡ್ಕ ಮುಂತಾದವರು ಉಪಸ್ಥಿತರಿದ್ದರು.
ಚಂಪಾಷಷ್ಠಿ ಮಹೋತ್ಸವ
ಕುಕ್ಕೆಯಲ್ಲಿ ನ.27ರಿಂದ ಡಿ.12ರ ವರೆಗೆ ಚಂಪಾಷಷ್ಠಿ ಮಹೋತ್ಸವ ಜರಗಲಿದೆ. ನ. 27ರಂದು ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವ ಆರಂಭವಾಗಲಿದೆ. ಎಲ್ಲ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ, ಕುಕ್ಕೆಯಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಜಾತ್ರೋತ್ಸವ ಆರಂಭಗೊಳ್ಳುವುದು ಇಲ್ಲಿನ ವಿಶೇಷ. ರಾಮ-ಲಕ್ಷ್ಮಣ ಎಂಬ ಎರಡು ದೊಡ್ಡ ಜೋಡಿ ಕೊಪ್ಪರಿಗೆಗಳನ್ನು ಏರಿಸುವುದರ ಮೂಲಕ ಜಾತ್ರೆ ಆರಂಭವಾಗುತ್ತದೆ.
ನ. 27ರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.30 ಲಕ್ಷದೀಪೋತ್ಸವ, ಡಿ.1ರ ರಾತ್ರಿ ಶೇಷವಾಹನೋತ್ಸವ, ಡಿ.2ರ ರಾತ್ರಿ ಅಶ್ವವಾಹನೋತ್ಸವ, ಡಿ.3ರ ರಾತ್ರಿ ಮಯೂರ ವಾಹನೋತ್ಸವ, ಡಿ.4ರ ರಾತ್ರಿ ಶೇಷವಾಹನೋತ್ಸವ, ಡಿ.5ರ ರಾತ್ರಿ ಹೂವಿನ ತೇರಿನ ಉತ್ಸವ, ಡಿ.6ರ ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, ಡಿ.7ರ ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ, ಡಿ.8ರಂದು ಅವಭೃಥ ಉತ್ಸವ, ನೌಕಾವಿಹಾರ, ಡಿ.12ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೆ„ವಗಳ ನಡಾವಳಿ ಜರಗಲಿದೆ.
ಅಖಂಡ ಭಜನೆ
ಜಾತ್ರೋತ್ಸವ ಆರಂಭದ ದಿನವಾದ ಬುಧವಾರ ಶ್ರೀ ದೇಗುಲದಲ್ಲಿ ಅಖಂಡ ಭಜನೆ ನೆರವೇರಲಿದೆ. ನ.27ರ ಬೆಳಗ್ಗೆ ಸೂರ್ಯೋದಯದಿಂದ ಗುರುವಾರ ಬೆಳಗ್ಗೆ 6 ಗಂಟೆಯ ತನಕ 24 ತಾಸು ದೇಗುಲದ ಧರ್ಮಸಮ್ಮೇಳನ ಮಂಟಪದಲ್ಲಿ ಭಜನೆ ನೆರವೇರಲಿದೆ.