Advertisement
ಇಪ್ಪತ್ತೈದು ವರ್ಷಗಳ ಹಿಂದಿದ್ದ ಟ್ರೆಂಡ್ ಬೇರೆಯೇ. ಕೈಯಲ್ಲೊಂದು ಗ್ಯಾಸ್‌ಲೈಟ್ ಹಿಡಿದುಕೊಂಡು ರಾತ್ರಿಯಾದರೂ ಮನೆ-ಮನೆಗೆ ತೆರಳಿ ಹುಲಿವೇಷ ಕುಣಿಯುತ್ತಿದ್ದ ಕಾಲವದು. ದಿನದಲ್ಲಿ 300 ರೂ. ಸಿಕ್ಕರೆ ಅದುವೇ ದೊಡ್ಡ ವಿಚಾರವಾಗಿತ್ತು. ಹತ್ತಾರು ಕಿಲೋ ಮೀಟರ್ ನಡೆದುಕೊಂಡೇ ಮನೆ ಮನೆಗೆ ತೆರಳುತ್ತಿದ್ದರು. ಈಗ ಹುಲಿ ವೇಷಗಳು ವಾಹನವೇರಿ ಬರುತ್ತವೆ. ಈ ವ್ಯವಸ್ಥೆಯಿಂದ ಚಿತ್ರಣ ಸಂಪೂರ್ಣ ಬದಲಾಗಿದೆ. ಮೂರು ವರ್ಷಗಳ ಹಿಂದೆ ಸಿನಿಮಾದಲ್ಲೂ ಹುಲಿವೇಷ ಕಲೆ ಪರಿಚಯವಾದಲ್ಲಿಂದ “ಟೈಗರ್ ಡ್ಯಾನ್ಸ್’ ಈಗ ರಾಜ್ಯಾದ್ಯಂತ ಮನೆ ಮಾತಾಗಿದೆ. ಕರಾವಳಿ ಪ್ರದೇಶವಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹುಲಿವೇಷ ಜನಪ್ರಿಯತೆ ಗಳಿಸಿತ್ತು. ಈಗ ಅದರ ಪರಿಧಿ ವಿಸ್ತರಿಸಿ, ಅನೇಕರು ಹುಲಿವೇಷ ಕುಣಿತ ಕಲಾವಿದರಾಗಿಯೂ ಗಮನ ಸೆಳೆಯುತ್ತಿದ್ದಾರೆ. ಹುಡುಗಿಯರೂ ಒಂದು ಕೈ ನೋಡುತ್ತಿದ್ದಾರೆ.
ಚಲನಚಿತ್ರ, ರಿಯಾಲಿಟಿ ಶೋಗಳ ಮೂಲಕ ಕರಾವಳಿಯಲ್ಲಿದ್ದ ಹುಲಿವೇಷದ ಸಂಸ್ಕೃತಿ ರಾಜ್ಯಕ್ಕೇ ಪಸರಿಸಿದೆ. ಇದಕ್ಕೆ ಮುಖ್ಯ ಕಾರಣವಾದದ್ದು ರಕ್ಷಿತ್ ಶೆಟ್ಟಿ ನಿರ್ದೇಶನದ “ಉಳಿದವರು ಕಂಡಂತೆ’ ಚಲನಚಿತ್ರ. ಈ ಚಿತ್ರದಲ್ಲಿ ಕರಾವಳಿಯ ಸಂಸ್ಕೃತಿ ಬಿಂಬಿತವಾಗಿದ್ದು, ಹುಲಿವೇಷದ ಝಲಕ್ ಕೂಡ ಇತ್ತು. ಸ್ವತಃ ನಟ ರಕ್ಷಿತ್ ಶೆಟ್ಟಿ ಹುಲಿ ವೇಷಗಳ ಜತೆ ನೃತ್ಯ ಮಾಡುವ ಶೈಲಿ ಕರುನಾಡಲ್ಲೇ ಜನಪ್ರಿಯತೆ ಗಳಿಸಿತ್ತು. “ಒರಿಯರೊªರಿ ಅಸಲ್’, “ರಂಗ್’ ಸಹಿತ ಕೆಲ ತುಳು ಚಿತ್ರಗಳಲ್ಲೂ ಹುಲಿವೇಷ ಗುರುತಿಸಿಕೊಂಡಿತ್ತು. ಹಲವು ರಿಯಾಲಿಟಿ ಶೋಗಳೂ ಹುಲಿ ವೇಷಕ್ಕೆ ವೇದಿಕೆ ಒದಗಿಸಿವೆ. ಕಿಚ್ಚ ಸುದೀಪ್, ರಮೇಶ್ ಅರವಿಂದ್ ಸಹಿತ ಹಲವು ನಟ-ನಟಿಯರು ಹುಲಿವೇಷ ನೃತ್ಯ ಸ್ಟೆಪ್ ಹಾಕಿದ ಉದಾಹರಣೆಗಳಿವೆ. ನಟ ಶಿವರಾಜ್ ಕುಮಾರ್ ಇತ್ತೀಚೆಗೆ ಕದ್ರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಹುಲಿವೇಷ ನೃತ್ಯ ಮಾಡಿ ನೆರೆದಿದ್ದವರನ್ನು ರಂಜಿಸಿದ್ದರು. ಬಹು ನಿರೀಕ್ಷಿತ “ಟಗರು’ ಚಲನಚಿತ್ರದಲ್ಲಿಯೂ ಹುಲಿವೇಷದ ಸನ್ನಿವೇಶವಿದೆ.
Related Articles
ಹುಲಿವೇಷ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಈ ಬಾರಿ ಹುಲಿವೇಷಕ್ಕೆಂದೇ ನಗರದಲ್ಲಿ ಎರಡು ಸ್ಪರ್ಧೆಗಳು ಏರ್ಪಟ್ಟಿವೆ. ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೇತೃತ್ವದಲ್ಲಿ “ಪಿಲಿನಲಿಕೆ’ ಎಂಬ ಸ್ಪರ್ಧೆಯನ್ನು ಸೆ. 29ರಂದು ನಗರದ ಮಂಗಳಾ ಕ್ರೀಡಾಂಗಣದ ವಾಲಿಬಾಲ್ ಮೈದಾನದಲ್ಲಿ ಆಯೋಜಿಸಿದ್ದು, ಪ್ರಥಮ ಬಹುಮಾನ 2 ಲಕ್ಷ ರೂ., ದ್ವಿತೀಯ 1 ಲಕ್ಷ ರೂ. ಇಡಲಾಗಿದೆ. ಉತ್ತಮ ಬಣ್ಣಗಾರಿಕೆ, ಚರ್ಮ ತಮಟೆ, ಮರಿ ಹುಲಿ, ಕರಿ ಹುಲಿ, ಉತ್ತಮ ಕುಣಿತಕ್ಕೆ ತಲಾ 30 ಸಾವಿರ ರೂ. ಬಹುಮಾನ ನೀಡಲಾಗುತ್ತದೆ.
Advertisement
ಈ ಕುರಿತು “ಸುದಿನ’ಕ್ಕೆ ಪ್ರತಿಕ್ರಿಯಿಸಿದ ಮಿಥುನ್ ರೈ “ಜಿಲ್ಲೆಯಲ್ಲಿ ಹುಲಿಕುಣಿತದ ಸಾಂಪ್ರದಾಯಿಕ ಕಲೆ ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿದ್ದೇವೆ. ಪುರಾತನ ವೈಭವವನ್ನು ಜನರಿಗೆ ಮತ್ತೂಮ್ಮೆ ತೋರಿಸುವುದು ನಮ್ಮ ಕೆಲಸ’ ಎಂದರು.
ಪಿಲಿ ಪಜ್ಜೆ“ಟೈಗರ್ ಕ್ಯಾಂಪ್’ ತಂಡದ 25ನೇ ವರ್ಷದ ಆಚರಣೆಗೆಂದು ಸೆ. 29ರಂದು ನಗರದ ಮಾರ್ಗನ್ಸ್ ಗೇಟ್ ಸಮೀಪದ ಕಲ್ಯಾಣೋತ್ಸವ ಮೈದಾನದಲ್ಲಿ “ಪಿಲಿಪಜ್ಜೆ ‘ಎಂಬ ಹುಲಿ ವೇಷ ಸ್ಪರ್ಧೆ ಏರ್ಪಡಿಸಿದೆ. ವಿಜೇತರಿಗೆ ಪ್ರಥಮ ಬಹುಮಾನ 1 ಲಕ್ಷ, ದ್ವಿತೀಯ 60 ಸಾವಿರ ಮತ್ತು ತೃತೀಯ ಬಹುಮಾನ 40 ಸಾವಿರ ರೂ. ಘೋಷಿಸಿದೆ. “ನಾನು 40 ವರ್ಷದಿಂದ ಹುಲಿವೇಷ ಹಾಕುತ್ತಿದ್ದೇನೆ. ಅಂದಿದ್ದ ಸಂಪ್ರದಾಯ ಇಂದಿಲ್ಲ. ಅಂದು ಹುಲಿವೇಷಕ್ಕೆ ಅದರದ್ದೇ ಕುಣಿತದ ಪ್ರಕಾರವಿತ್ತು. ಈಗ ಅದನ್ನು ಅನೇಕರು ಪಾಲಿಸುತ್ತಿಲ್ಲ. ಹಿಂದೆ ಹುಲಿವೇಷಗಾರರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದರು. ಮದ್ಯಪಾನ, ಮಾಂಸಾಹಾರ ಸೇವನೆ ಮಾಡುವಂತಿರಲಿಲ್ಲ. ಅಂದಿನ ಕಟ್ಟುನಿಟ್ಟಿನ ಕ್ರಮ ಇಂದಿಲ್ಲ’ ಎನ್ನುತ್ತಾರೆ ಹುಲಿ ವೇಷಧಾರಿ ಟೈಗರ್ ಕ್ಯಾಂಪ್‌ನ ರಾಜಾ. ಮಹಿಳೆಯರೇನೂ ಕಮ್ಮಿ ಇಲ್ಲ!
ಒಂದು ಕಾಲದಲ್ಲಿ ಹುಲಿವೇಷ ಪುರುಷ ಪ್ರಧಾನವಾಗಿತ್ತು. ಇತ್ತೀಚೆಗೆ ಮಹಿಳೆಯರೂ ಹುಲಿವೇಷದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಅನೇಕ ಮಹಿಳೆಯರು ನವರಾತ್ರಿ ಸಮಯದಲ್ಲಿ ಮುಖಕ್ಕೆ ಬಣ್ಣ ಬಳಿದು ಹೆಜ್ಜೆ ಹಾಕುವುದುಂಟು. ಇವರು ಪುರುಷರಂತೆಯೇ ತಾಲೀಮು ನಡೆಸುತ್ತಾರೆ. ಅಷ್ಟೇಕೆ ರಿವರ್ಸ್ ಸ್ಲಿಪ್, ಸ್ಟಂಟ್‌ನಲ್ಲಿಯೂ ಮುಂದಿದ್ದಾರೆ. ಮನೋರಂಜನೆ
ಸಾಂಪ್ರದಾಯಿಕ ಕಲೆಯಾಗಿದ್ದ ಹುಲಿವೇಷವಿಂದು ಮನೋರಂಜನೆಯ ಕಲೆಯಾಗುತ್ತಿದೆ. ಕೆಲ ವರ್ಷಗಳ ಹಿಂದೆ ನನ್ನ ಅಪ್ಪ ಕೂಡ ಹುಲಿವೇಷಕ್ಕೆ ಬಣ್ಣ ಹಚ್ಚುತ್ತಿದ್ದರು. ದೇವರಲ್ಲಿ ಹೇಳಿದ ಹರಕೆ ಈಡೇರಲೆಂದು ಹುಲಿವೇಷಕ್ಕೆ ಬಣ್ಣ ಹಚ್ಚುವ ಕ್ರಮ ಕೆಲ ವರ್ಷಗಳ ಹಿಂದೆ ಇತ್ತು. ಹಿಂದಿದ್ದ ಹುಲಿವೇಷದ ಆಡಂಬರ ಸದ್ಯ ಮರೆಯಾಗಿದೆ. ಮುಂದಿನ ತಲೆಮಾರಿಗೆ ಕರಾವಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಇದನ್ನು ಪ್ರಸ್ತುತಪಡಿಸಲು ಮುಖ್ಯ ಮಾಧ್ಯಮ ಎಂದರೆ ಚಲನಚಿತ್ರ. ಸಿನಿಮಾಗಳಲ್ಲಿ ಹುಲಿವೇಷ ಬಳಸಿಕೊಳ್ಳುವುದರಿಂದ ಮುಂದಿನ ತಲೆಮಾರಿಗೆ ಪರಿಚಯಿಸಲು ಸಾಧ್ಯವಾದೀತು.
ನವೀನ್ ಡಿ. ಪಡೀಲ್, ನಟ ನವೀನ್ ಭಟ್ ಇಳಂತಿಲ