ನಾಡಿನೆಲ್ಲೆಡೆ ಈಗ ನವರಾತ್ರಿಯ ಸಂಭ್ರಮ. ಈ ಹಬ್ಬವನ್ನು ದೇಶದೆಲ್ಲೆಡೆ ಅತ್ಯಂತ ವೈಭವ, ಸಡಗರಗಳಿಂದ ಆಚರಿಸಲಾಗುತ್ತಿದೆ. ದೇಶಾದ್ಯಂತ ಇರುವ ದುರ್ಗಾದೇವಿಯ ದೇವಾಲಯಗಳಲ್ಲಿ ಭಕ್ತರು ವಿಶೇಷ ಶ್ರದ್ಧಾಭಕ್ತಿಯಿಂದ ಶಕ್ತಿಮಾತೆಯ ಆರಾಧನೆಯಲ್ಲಿ ತೊಡಗಿದ್ದಾರೆ. ನವರಾತ್ರಿಯ ಈ ಸಂದರ್ಭದಲ್ಲಿ ದೇಶದ ಒಂಬತ್ತು ಪ್ರಸಿದ್ಧ ದೇವಿ ದೇವಾಲಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ “ನವರಾತ್ರಿ- ನವದೇವಿ’ ಲೇಖನ ಮಾಲಿಕೆಯಲ್ಲಿ ಈ ದಿನ ಹಿಮಾಚಲ ಪ್ರದೇಶದ ಮಾ ಜ್ವಾಲಾಜಿ ದೇಗುಲ.
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾಮುಖೀ ಪಟ್ಟಣದ ಹಿಮಾಲಯ ಶ್ರೇಣಿಯಲ್ಲಿ ಮಾ ಜ್ವಾಲಾ ದೇಗುಲವಿದೆ. ಇದನ್ನು ಜ್ವಾಲಾ ಕಿ ಕಾಂಗಡಾ ಎಂದು ಕರೆಯಲಾಗುತ್ತದೆ. ದೇವಸ್ಥಾನವು ಜ್ವಾಲಾ ಜಿ ಪುಣ್ಯಕ್ಷೇತ್ರಗಳ ಶೈಲಿಯಲ್ಲಿದೆ. ಇದು ಹಿಂದೂಗಳ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ.
ಈ ದೇಗುಲದ ಹಿನ್ನೆಲೆಯ ಬಗೆಗೆ ಹಲವಾರು ಪೌರಾಣಿಕ ಕಥೆಗಳಿವೆ. ಮಹಾಭಾರತದಲ್ಲಿಯೂ ಈ ದೇವಾಲಯದ ಉಲ್ಲೇಖವಿದೆ.
ಒಂದು ಪೌರಾಣಿಕ ಕಥೆಯ ಪ್ರಕಾರ ಪ್ರಜಾಪತಿ ದಕ್ಷನ ಸಾಕು ಮಗಳಾದ ಸತಿಯ ಪತಿಯಾದ ಶಿವನನ್ನು ಆಕೆಯ ತಂದೆ ಅವಮಾನಿಸಿದಾಗ ಆಕೆ ತೀವ್ರವಾಗಿ ನೊಂದುಕೊಂಡು ಆತ್ಮಹತ್ಯೆಗೆ ಶರಣಾದಳು. ಈ ವಿಷಯವನ್ನು ತಿಳಿದು ಉದ್ರಿಕ್ತನಾದ ಶಿವನು, ಸತಿಯ ಮೃತದೇಹವನ್ನು ಹೊತ್ತುಕೊಂಡು ತ್ರಿಲೋಕ ಸಂಚಾರ ಆರಂಭಿಸಿದನು.
ಶಿವನ ಆಕ್ರೋಶನ್ನು ಕಂಡು ಬೆದರಿದ ಇತದ ದೇವರುಗಳು ಭಗವಾನ್ ವಿಷ್ಣುವಿನ ಮೊರೆ ಹೋದರು. ವಿಷ್ಣುವು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿದಾಗ ಅದು ಸತಿಯ ದೇಹಕ್ಕೆ ಬಡಿದು ಹಲವಾರು ತುಂಡುಗಳಾಗಿ ವಿವಿಧ ಭಾಗಗಳಲ್ಲಿ ಬಿದ್ದವು. ಈ ಪೈಕಿ ಸತಿಯ ನಾಲಗೆಯು ಜ್ವಾಲಾಮುಖೀ ಪ್ರದೇಶದ ಭಾಗದಲ್ಲಿ ಬಂದು ಬಿತ್ತು. ನಾಲಗೆಯ ಜತೆ ಅಗ್ನಿಯ ಜ್ವಾಲೆಯೂ ಬಿದ್ದಿದ್ದು ಅದು ಇಂದಿಗೂ ಆರದೇ ಹಾಗೆಯೇ ಉರಿಯುತ್ತಿದೆ ಎಂಬ ಪ್ರತೀತಿ ಇದೆ.
ಇಲ್ಲಿನ ಸಮೀಪದ ಗುಹೆಯೊಂದರಲ್ಲಿ ಜ್ವಾಲೆಯೊಂದು ಶಾಶ್ವತವಾಗಿ ಉರಿಯುತ್ತಿದೆ. ಇಲ್ಲಿ ಮೂರ್ತಿಯ ಬದಲು ಈ ಜ್ವಾಲೆಯನ್ನೇ ಪೂಜಿಸಲಾಗುತ್ತದೆ. ಮತ್ತೆ ಕೆಲವು ಪುರಾಣಗಳ ಪ್ರಕಾರ ಇದು ಪಾಂಡವರು ನಿರ್ಮಿಸಿದ ಮೊದಲ ದೇವಾಲಯವಾಗಿದೆ. ಬಂಡೆಯ ಬದಿಯಿಂದ ಹೊರಹೊಮ್ಮುವ ನೈಸರ್ಗಿಕ ಅನಿಲವೇ ಈ ದೇವಾಲಯದ ನಿತ್ಯ ನಿರಂತರವಾಗಿ ಬೆಳಗುವ ಜ್ವಾಲೆಗೆ ಇಂಧನ.
ಈ ಶಕ್ತಿಯನ್ನು ಜ್ವಾಲಾಮುಖೀಯ ದ್ಯೋತಕವಾಗಿ ದೇವೀ ಭಕ್ತರು ಪೂಜಿಸುತ್ತಾ ಬಂದಿದ್ದಾರೆ. ಮಹಾಕಾಳಿ, ಅನ್ನಪೂರ್ಣ, ಚಂಡಿ, ಹಿಂಗ್ಲಾಜ್, ಬಿಂಧ್ಯಾ, ಬಸ್ನಿ, ಮಹಾಲಕ್ಷ್ಮೀ, ಅಂಬಿಕಾ ಮತ್ತು ಅಂಜಿ ದೇವಿ ಎಂಬ ದೇವತೆಗಳ ಹೆಸರುಳ್ಳ ಒಂಬತ್ತು ಶಾಶ್ವತ ಜ್ವಾಲೆಗಳನ್ನು ಈ ದೇವಾಲಯ ಹೊಂದಿದೆ ಎಂಬ ನಂಬಿಕೆಯೂ ಇದೆ.