ವರದಿ: ದತ್ತು ಕಮ್ಮಾರ
ಕೊಪ್ಪಳ: ನಗರದ ಕೋಟೆಗೆ ಹೊಂದಿಕೊಂಡಂತೆ ಇರುವ ವಿಶಾಲ ಹುಲಿಕೆರೆಯ ಅಭಿವೃದ್ಧಿಗೆ ಈ ಹಿಂದೆ ಪಬ್ಲಿಕ್, ಪ್ರೈವೆಟ್ ಪಾರ್ಟ್ನರ್ ಶಿಪ್‌ನಡಿ ರೂಪಿಸಿರುವ ಯೋಜನೆ ಆರಂಭದಲ್ಲೇ ಆಮೆಗತಿಯಲ್ಲಿ ನಡೆದಿದೆ. ಇನ್ನೂ ಡಿಪಿಆರ್ ಸಿದ್ಧವಾಗಿಲ್ಲ. ಸರ್ಕಾರ ಅನುಮತಿ ಕೊಟ್ಟಿದ್ದರೂ ಯೋಜನೆ ಕಾರ್ಯಗತವಾಗದೇ ಇದ್ದಿದ್ದು ನಿಜಕ್ಕೂ ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ನಗರಕ್ಕೆ ಈ ಮೊದಲು ನೀರಿನ ಮೂಲವೆಂದೇ ಬಿಂಬಿತವಾಗಿರುವ ಹುಲಿಕೆರೆಯನ್ನು ಅಭಿವೃದ್ಧಿಗೊಳಿಸಿ, ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಅಲ್ಲದೇ, ಕೋಟಿ ಕೋಟಿ ಅನುದಾನವನ್ನೂ ಹುಲಿಕೆರೆ ಅಭಿವೃದ್ಧಿಗಾಗಿ ವಿನಿಯೋಗ ಮಾಡಲಾಗಿತ್ತು. ಆದರೆ ಅಲ್ಲಿನ ಎಲ್ಲ ಸಾಮಗ್ರಿಗಳನ್ನು ಜನರೇ ಕಿತ್ತುಕೊಂಡು ಹೋಗಿದ್ದು ಮಾತ್ರ ಗುಟ್ಟಾಗಿ ಉಳಿದಿಲ್ಲ. ಕೇವಲ ಇದನ್ನು ಅಭಿವೃದ್ಧಿ ಮಾಡಿದರೆ ಸಾಲದು ಇದನ್ನೊಂದು ಪ್ರವಾಸಿ ತಾಣವನ್ನಾಗಿ ಮಾಡಿ ಖಾಸಗಿ ಸಂಸ್ಥೆಗಳಿಗೆ ನಿರ್ವಹಣೆ ಹೊಣೆ ನೀಡಬೇಕು ಎನ್ನುವ ಯೋಜನೆ ರೂಪಿಸಿದ್ದ ನಗರಸಭೆಯು ಪಿಪಿಪಿ ಮಾಡೆಲ್‌ನಲ್ಲಿ ಅಭಿವೃದ್ಧಿ ಕೈಗೊಳ್ಳುವ ಕುರಿತಂತೆಯೂ ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು. ಈ ಹಿಂದಿನ ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ಈ ಯೋಜನೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಸರ್ಕಾರ ಅದಕ್ಕೆ ಸಮ್ಮತಿಯನ್ನೂ ನೀಡಿತ್ತು.
ನಗರಸಭೆಯು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳುವ ಕುರಿತಂತೆಯೂ ಡಿಪಿಆರ್ ಸಿದ್ಧಪಡಿಸಿಕೊಡುವಂತೆಯೂ ಕಂಪನಿಗಳನ್ನು ಆಹ್ವಾನಿಸಿತ್ತು. ಆದರೆ ಯಾವುದೇ ಕಂಪನಿಗಳು ಇಲ್ಲಿನ ಪಿಪಿಪಿ ಮಾಡೆಲ್ ರೂಪಿಸಿಕೊಡಲು ಮುಂದೆ ಬಂದಿರಲಿಲ್ಲ. ಕೆಲ ಕಂಪನಿಗಳು ಮುಂದೆ ಬಂದಿದ್ದರೂ ಆ ಕಂಪನಿಗಳು ಡಿಪಿಆರ್ ಸಿದ್ಧಪಡಿಸಲು 40 ಲಕ್ಷ ರೂ. ಮೊತ್ತ ನಿಗಪಡಿಸಿದ್ದವು. ಆದರೆ ನಗರಸಭೆ 5 ಲಕ್ಷ ರೂ.ನಲ್ಲಿ ಡಿಪಿಆರ್ ಸಿದ್ಧಪಡಿಸಿಕೊಡಲು ಆಡಳಿತ ಮಂಡಳಿಯಿಂದ ಸಮ್ಮತಿ ಪಡೆದಿದೆ. ಹುಲಿ ಕೆರೆಯನ್ನು ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿ, ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಿ ಅಲ್ಲಿ ಬೋಟಿಂಗ್, ವಾಕಿಂಗ್ ರೂಟ್, ಸ್ವಿಮ್ಮಿಂಗ್ ಸೇರಿದಂತೆ ಇತರೆ ಪ್ರತಿಷ್ಠಿತ ಜಿಲ್ಲೆಗಳಲ್ಲಿರುವ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಕನಸು ಕಂಡಿದೆ. ಆದರೆ ಆ ಕನಸು ನನಸಾಗಿಸುವ ಆಸಕ್ತಿ ನಗರಸಭೆಗೆ ಇಲ್ಲ. ಇದು ನಗರ ನಿವಾಸಿಗಳಲ್ಲಿ ಭಾರಿ ನಿರಾಸೆ ಮೂಡಿಸುತ್ತಿದೆ. ಇಲ್ಲಿ ನಗರಸಭೆ ಒಂದು ಬಾರಿ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಬಹುದು. ಆದರೆ ತರುವಾಯ ಇಲ್ಲಿ ಬರುವ ಆದಾಯದಲ್ಲಿಯೇ ನಗರಸಭೆಗೂ ಸಂಸ್ಥೆ ಪಾವತಿ ಮಾಡಬೇಕು. ಇತರೆ ವೆಚ್ಚಗಳನ್ನೂ ಈ ಸಂಸ್ಥೆ ಭರಿಸಬೇಕು. ಬಳಿಕ ತನ್ನ ಆದಾಯವನ್ನು ಕಂಡುಕೊಳ್ಳಬೇಕು. ಇಂತಹ ಪಿಪಿಪಿಗೆ ಮೂರು ವರ್ಷಗಳಿಂದ ಯಾವ ಸಂಸ್ಥೆಗಳು ಅಷ್ಟೊಂದು ಆಸಕ್ತಿ ತೋರಿಸದೇ ಇರುವುದು ಇಲ್ಲಿನ ಆಡಳಿತ ವ್ಯವಸ್ಥೆ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ.
ಅಧಿಕಾರಿಗಳು ಒಂದು ಹಂತದಲ್ಲಿ ಪ್ರಯತ್ನ ನಡೆಸಿದ್ದು ಬಿಟ್ಟರೆ ಇದನ್ನು ವೇಗದ ಗತಿಯಲ್ಲಿ ಅಭಿವೃದ್ಧಿಗೊಳಿಸಬೇಕು ಎನ್ನುವ ಇಚ್ಛಾಶಕ್ತಿಯ ಮನಸ್ಸುಗಳೇ ಇಲ್ಲಿ ಕಾಣುತ್ತಿಲ್ಲ. ಹೀಗಾಗಿ ಹುಲಿಕೆರೆಯಲ್ಲಿನ ಪಿಪಿಪಿ ಮಾಡೆಲ್ ಆರಂಭದಲ್ಲಿಯೇ ಆಮೆಗತಿಯಲ್ಲಿ ನಡೆದಿರುವುದು ನಗರದ ಜನರಲ್ಲಿ ಬೇಸರ ತರಿಸಿದೆ. ಇನ್ನಾದರೂ ನಗರಸಭೆ ಯೋಜನೆಗೆ ವೇಗ ಕೊಡಬೇಕಿದೆ.