ಹೊಸದಿಲ್ಲಿ: ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅವಧಿ ಮುಗಿದ ಬಳಿಕ ಬಿಜೆಪಿಯ ಹಿರಿಯ ನಾಯಕ ಹುಕುಮ್ ನರೇನ್ ಯಾದವ್ ಅವರನ್ನು ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಬಿಜೆಪಿಯ ಹಿರಿಯ ನಾಯಕರಾದಿ ಎನ್‌ಡಿಎ ಮುಖಂಡರು ಯಾದವ್ ಅವರ ಆಯ್ಕೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ದೈನಿಕ್ ಭಾಸ್ಕರ್ ಈ ಬಗ್ಗೆ ವರದಿ ಮಾಡಿದೆ.
ಯಾದವ್ ಅರನ್ನು ಬೆಂಬಲಿಸುವಂತೆ ಜೆಡಿಯುವನ್ನೂ ಬಿಜೆಪಿ ಮನವಿ ಮಾಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
75 ರ ಹರೆಯದ ಯಾದವ್ ಅವರು ಬಿಹಾರದ ಹಿಂದುಳಿದ ವರ್ಗದ ನಾಯಕರಾಗಿದ್ದು, 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು,ಕೇಂದ್ರ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಹಾಲಿ ಅವರು ಬಿಹಾರದ ಮಧುಬನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸಂಸತ್‌ನಲ್ಲಿ ತಮ್ಮ ಹಾಸ್ಯ ಭರಿತ ಉಗ್ರ ಭಾಷಣಗಳಿಂದಲೇ ಯಾದವ್ ಸುದ್ದಿಯಾಗುತ್ತಿದ್ದರು.
ಎರಡು ಬಾರಿ ಉಪರಾಷ್ಟ್ರಪತಿಯಾಗಿರುವ ಅನ್ಸಾರಿ ಅವರ ಅಧಿಕಾರವಧಿ ಜುಲೈ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ.