Advertisement
ಅಶೋಕರಸ್ತೆ ವೀರನಗೆರೆ ಗಣಪತಿ ದೇವಸ್ಥಾನ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಆರಂಭಕ್ಕೂ ಮುನ್ನ ಅರ್ಚಕ ಪ್ರಹ್ಲಾದ್‌ರಾವ್ ವಿಶೇಷ ಪೂಜೆ, ಹೋಮ, ಮಂಗಳಾರತಿ ನೆರವೇರಿಸಿ ಚಾಲನೆ ನೀಡಿದರು. ಅಶೋಕ ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ಮಹಾವೀರ ವೃತ್ತ, ಗಾಂಧಿಚೌಕ, ವಾಸವಿ ವೃತ್ತ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, 100 ಅಡಿ ರಸ್ತೆ, ಸಂಸ್ಕೃತ ಪಾಠ ಶಾಲೆ ಮೂಲಕ ಗನ್‌ಹೌಸ್ ವೃತ್ತದ ಮೂಲಕ ಸಾಗಿ ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯಲ್ಲಿ ವಿಸರ್ಜನೆಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲದೆ ವಿವಿಧ ಬಡಾವಣೆಗಳ ಗಣೇಶ ವಿಗ್ರಹಗಳನ್ನು ಹೊತ್ತು ತಂದಿದ್ದ ಭಕ್ತರು ಮಾರ್ಗ ಮಧ್ಯೆ ಮೆರವಣಿಗೆ ಸೇರಿಕೊಂಡರು.
ಸಾಮೂಹಿಕ ಗಣಪತಿ ವಿಗ್ರಹ ವಿಸರ್ಜನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದಲ್ಲಿ 4 ಡಿಸಿಪಿ, 7 ಎಸಿಪಿ, 25 ಪಿಐ, 40 ಪಿಎಸ್‌ಐ, 250 ಎಚ್‌ಪಿ, ಪಿಸಿ, 4 ಸಿಎಆರ್ ತುಕಡಿ, 4 ಕೆಎಸ್‌ಆರ್‌ಪಿ ತುಕಡಿ, 15 ಅಶ್ವ, 30 ಸಿಬ್ಬಂದಿ, ಕಮಾಂಡೋ ಪಡೆ, ಮೀಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.