Advertisement

ರಸಗೊಬ್ಬರಕ್ಕಾಗಿ ಭಾರೀ ಪ್ರತಿಭಟನೆ

03:37 PM Jun 02, 2022 | Team Udayavani |

ಗದಗ: ರಸಗೊಬ್ಬರ ವಿತರಿಸುವಂತೆ ಒತ್ತಾಯಿಸಿ ಬುಧವಾರ ರಸ್ತೆ ತಡೆ ನಡೆಸಿದ ರೈತರು, ನಂತರ ಕಾಟನ್‌ ಸೇಲ್‌ ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಕೃಷಿ ಇಲಾಖೆ ಗದಗ ತಾಲೂಕಿನ ರೈತರಿಗೆ ಅಧಿಕೃತ ಮಾರಾಟ ಸಂಸ್ಥೆ ದಿ ಕಾಟನ್‌ ಸೇಲ್‌ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಂಡಿದೆ. ಆದರೆ, ಸೊಸೈಟಿ ಸಮರ್ಪಕವಾಗಿ ರಸಗೊಬ್ಬರ ವಿತರಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದೊಂದು ವಾರದಿಂದ ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದ ರೈತರಿಗೆ ಒಂದೆರಡು ದಿನ, ವಾರ ಬಿಟ್ಟು ಬನ್ನಿ ಎಂದು ಅಧಿ ಕಾರಿಗಳು ಸತಾಯಿಸುತ್ತಿದ್ದಾರೆಂದು ಆರೋಪಿಸಿ ಸರ್ಕಾರ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ವಿರುದ್ಧ ಕಿಡಿಕಾರಿದರು.

ಜಿಲ್ಲೆಯಲ್ಲಿ ಈಗಾಗಲೇ ಹೆಸರು ಬಿತ್ತನೆ ಆರಂಭವಾಗಿದೆ. ಬಿತ್ತಿದ ಬೆಳೆಗಳಿಗೆ ರಸಗೊಬ್ಬರ ಪೂರೈಕೆ ಅತ್ಯವಶ್ಯಕವಾಗಿದೆ. ಆದ್ದರಿಂದ, ಜಮೀನಿನಲ್ಲಿ ಹೆಸರು ಬಿತ್ತನೆ ಮಾಡುವುದನ್ನು ಬಿಟ್ಟು ರಸಗೊಬ್ಬರಕ್ಕಾಗಿ ಬೆಳಿಗ್ಗೆಯಿಂದ ಕಾದು ಕುಳಿತರೂ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ರಸಗೊಬ್ಬರ ಪೂರೈಸದೆ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿದರು.

ಕಳೆದ ವಾರ ರೋಹಿಣಿ ಮಳೆ ಆರಂಭವಾಗಿದ್ದು, ವಾರದೊಳಗೆ ಹೆಸರು ಬಿತ್ತನೆಯಾಗಬೇಕು. ಭೂಮಿ ಹೆಚ್ಚು ತೇವಾಂಶವಿರುವ ಕಾರಣ ಜಮೀನಿನಲ್ಲಿ ಹೆಸರು ಬಿತ್ತಲು ಎಕರೆಗೆ ಒಂದು ಚೀಲ ಡಿಎಪಿ ಗೊಬ್ಬರ ಅತ್ಯವಶ್ಯವಾಗಿದೆ. ಆದರೆ, ಡಿಎಪಿ ರಸಗೊಬ್ಬರ ಅಸಮರ್ಪಕ ಪೂರೈಕೆಯಿಂದಾಗಿ ಇಳುವರಿ ಕುಂಠಿತಗೊಳ್ಳುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

Advertisement

ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾನಿರತ ರೈತರ ಮನವೊಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ರಸಗೊಬ್ಬರ ವಿತರಣೆಗೆ ಕ್ರಮ ಜರುಗಿಸಿದರು.

5 ಚೀಲ ರಸಗೊಬ್ಬರ ಪೂರೈಕೆ: ಈಗಾಗಲೇ ರಸಗೊಬ್ಬರಕ್ಕಾಗಿ ಪರದಾಡುತ್ತಿರುವ ರೈತರಿಗೆ ಪ್ರತಿ ಆಧಾರ್‌ ಕಾರ್ಡ್‌ಗೆ ಚೀಲಕ್ಕೆ 1350 ರೂ.ನಂತೆ 5 ಚೀಲ ರಸಗೊಬ್ಬರ ವಿತರಣೆಗೆ ಚಾಲನೆ ನೀಡಲಾಯಿತು. ರೈತರು ತಮ್ಮ ಆಧಾರ್‌ ಕಾರ್ಡ್‌ನ್ನು ರಸಗೊಬ್ಬರ ಪೂರೈಕೆದಾರರ ಬಳಿ ನೀಡಿ ರಸಗೊಬ್ಬರ ಖರೀದಿಸಿದರು.

ತಾಂತ್ರಿಕ ಸಮಸ್ಯೆ: ಗದಗ ತಾಲೂಕಿನ ರಸಗೊಬ್ಬರ ಅಧಿಕೃತ ಮಾರಾಟ ಸಂಸ್ಥೆ ದಿ ಕಾಟನ್‌ ಸೇಲ್‌ ಸೊಸೈಟಿ ಈಗಾಗಲೇ ರೈತರಿಗೆ 500 ಡಿಎಪಿ ರಸಗೊಬ್ಬರ ಮಾರಾಟ ಮಾಡಿದೆ. ನಂತರ ಖರೀದಿಸಿ 1500 ಚೀಲ ರಸಗೊಬ್ಬರದ ಇನ್‌ ವೈಸ್‌ ಐಡಿ ದೊರೆಯದ ಕಾರಣ ರಸಗೊಬ್ಬರ ವಿತರಣೆಗೆ ತೊಂದರೆ ಉಂಟಾಗಿದೆ ಎಂದು ರಸಗೊಬ್ಬರ ಪೂರೈಕೆದಾರರು ಮಾಹಿತಿ ನೀಡಿದರು.

ಸರ್ಕಾರ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ರೈತರಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನಿದೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇಂದು ರೈತರು ತಮ್ಮ ಸ್ವಂತ ಹಣದಿಂದ ರಸಗೊಬ್ಬರ ಖರೀದಿಸಲು ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು. ಮಹೇಶ ಪಟ್ಟಣಶೆಟ್ಟಿ, ರೈತ

ಹೆಸರು ಬಿತ್ತನೆ ಅವಧಿ ಮುಗಿಯುತ್ತ ಬಂದಿದೆ. ರೋಹಿಣಿ ಮಳೆ ಮುಗಿಯುವುದರೊಳಗಾಗಿ ಹೆಸರು ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಆದರೆ, ಸರ್ಕಾರ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡದೆ ರೈತರ ಜತೆಗೆ ಆಟವಾಡುತ್ತಿದೆ. ಮುತ್ತಪ್ಪ ಶಂಕ್ರಿ, ಗಾವರವಾಡ ಗ್ರಾಮದ ರೈತ

Advertisement

Udayavani is now on Telegram. Click here to join our channel and stay updated with the latest news.

Next