Advertisement

ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್

03:01 PM Dec 09, 2021 | Team Udayavani |

ಮುದಗಲ್ಲ: ಸತತ ಮಳೆಯಿಂದ ಹಾಳಾದ ತೊಗರಿ ಕಟಾವು ಮಾಡುವ ರೈತರು ಯಂತ್ರದ ಮೊರೆ ಹೋಗಿದ್ದರಿಂದ ತೊಗರಿ ಕಟಾವು ಯಂತ್ರಕ್ಕೆ ಭಾರಿ ಡಿಮ್ಯಾಂಡ್‌ ಬಂದಿದೆ.

Advertisement

ಮುದಗಲ್ಲ ಹೊಬಳಿ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಚೆನ್ನಾಗಿಯೇ ಬಂದ ತೊಗರಿಗೆ ಹೂವು, ಕಾಯಿ ಸಂದರ್ಭದಲ್ಲಿ ಫಂಗಸ್‌ ಮತ್ತು ಸಿಡಿ ರೋಗಕ್ಕೆ ತುತ್ತಾಗಿತ್ತು. ಅಳಿದುಳಿದ ತೊಗರಿ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಬೆಂಬಿಡದ ಮಳೆ ಮತ್ತು ಮುಸುಕಿನ ವಾತಾವರಣದಿಂದ ತೊಗರಿ ಕಾಯಿಯೊಳಗೆ ಮೊಳಕೆಯೂಡೆದು ರೈತರು ನಷ್ಟ ಅನುಭವಿಸುವಂತಾಗಿತ್ತು. ಒಂದು ವಾರದಿಂದ ಬಿಸಿಲು ಕಾಣಿಸಿಕೊಂಡಿದ್ದರಿಂದ ತೊಗರಿ ಕಟಾವಿಗೆ ಕೂಲಿಕಾರರ ಕೊರತೆ ಕಾಡಿದ ಕಾರಣ ರೈತರು ಅನಿವಾರ್ಯವಾಗಿ ತೊಗರಿ ಕಟಾವು ಯಂತ್ರಗಳ ದುಂಬಾಲು ಬಿದ್ದಿದ್ದಾರೆ.

ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ರಾಜ್ಯದಲ್ಲಿನ ಸುಮಾರು 80ಕ್ಕೂ ಹೆಚ್ಚು ತೊಗರಿ ಕಟಾವು ಯಂತ್ರಗಳು ಬೀಡು ಬಿಟ್ಟಿವೆ. ಎಕರೆಗೆ 1200ರೂ.ದಿಂದ 1300ರೂ ವರೆಗೆ ಕಟಾವು ಮಾಡಲಾಗುತ್ತಿದೆ ಎಂದು ತೊಗರಿ ಬೆಳೆದ ಶಂಕ್ರಪ್ಪ, ಶಂಭುಲಿಂಗಪ್ಪ, ಹನುಮಂತಪ್ಪ, ಶರಣಪ್ಪ ಪತ್ರಿಕೆಗೆ ತಿಳಿಸಿದ್ದಾರೆ.

ನಾಗಲಾಪೂರ, ಆಮದಿಹಾಳ, ಪಿಕಳಿಹಾಳ, ಹೂನೂರ, ಬನ್ನಿಗೋಳ, ಕಾಚಾಪೂರ, ಕನಸಾವಿ, ಮೆದಕಿನಾಳ, ತಿರ್ಥಭಾವಿ, ಬೈಲಗುಡ್ಡ, ಮೂಡಲದಿನ್ನಿ, ಸುಲ್ತಾನಪೂರ, ಮಟ್ಟೂರ, ತೆರೆಭಾವಿ, ಬುದ್ದಿನ್ನಿ, ಹಡಗಲಿ, ಕನ್ನಾಳ, ಜಕ್ಕರಮಡು ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 2-3ಯಂತ್ರಗಳು ಟಿಕಾಣಿ ಹೂಡಿವೆ.

ಇದನ್ನೂ ಓದಿ:ರೈತರ ಬೇಡಿಕೆ ಈಡೇರಿಕೆಗೆ ಕೇಂದ್ರ ಅಸ್ತು; 13 ತಿಂಗಳ ರೈತರ ಹೋರಾಟ ಕೊನೆಗೂ ಅಂತ್ಯ

Advertisement

ಇಳುವರಿ ಕುಂಠಿತ

ಸತತ ಮಳೆಯಿಂದ ತೊಗರಿ ಇಳುವರಿ ಕುಂಠಿತವಾಗಿದೆ. ಕಾಯಿಯೊಳಗೆ ಮೊಳಕೆಯೊಡೆದು ನಷ್ಟವಾಗಿದ್ದು ಒಂದೆಡೆಯಾದರೆ, ತಿಂಗಳ ಹಿಂದೆಯೇ ಕಟಾವು ಮಾಡಬೇಕಾದ ತೊಗರಿ ತಿಂಗಳ ನಂತರ ಕಟಾವು ಮಾಡಿದ್ದರಿಂದ ಕಾಯಿಯೊಳಗಿನ ಕಾಳಿಗೆ ಹಾನಿಯಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತೊಗರಿ ಹೆಚ್ಚು ನಷ್ಟವಾಗಿದೆ. ಸುಮಾರು 2600 ಹೆಕ್ಟೇರ್‌ ಪ್ರದೇಶ ತೊಗರಿ ನಷ್ಟವಾಗಿದೆ. ಸರಕಾರಕ್ಕೆ ತೊಗರಿ ವರದಿ ಸಲ್ಲಿಸಲಾಗಿದೆ. ಆಕಾಶ ದಾನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಮುದಗಲ್ಲ

1ಎಕರೆಗೆ 6 ರಿಂದ 7ಕ್ವಿಂಟಲ್‌ ತೊಗರಿ ಇಳುವರಿ ಬರಬೇಕಿತ್ತು. ಆದರೆ 3ರಿಂದ 4 ಕ್ವಿಂಟಲ್‌ ಬರುತ್ತಿದೆ. ಸರಕಾರ ಎಕರೆಗೆ 10 ಸಾವಿರ ರೂ.ಬೆಳೆ ಪರಿಹಾರ ನೀಡಬೇಕು. ಶಂಕ್ರಪ್ಪ ನಾಯ್ಕ, ನಷ್ಟ ಅನುಭವಿಸಿದ ರೈತ

ಸುಮಾರು 7 ಸಾವಿರ ಎಕರೆ ತೊಗರಿ ಕಟಾವು ಮಾಡಿದ್ದೇನೆ. ರೈತರಿಗೆ ಇಳುವರಿ ಕಡಿಮೆಯಾಗಿದೆ. ಪರಶುರಾಮ, ಯಂತ್ರದ ಮಧ್ಯವರ್ತಿ

-ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next