Advertisement

ಹುಡಾ ನೂತನ ಬಡಾವಣೆ ನಿರ್ಮಾಣ ವಿಳಂಬ

04:30 PM Sep 15, 2021 | Team Udayavani |

ಹಾಸನ: ನಗರದ ಹೊರ ವಲಯ ಕೆಂಚಟ್ಟಹಳ್ಳಿ ಬಳಿ 1060 ಎಕರೆ ಪ್ರದೇಶದಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ವು ನಿರ್ಮಿಸಲು ಉದ್ದೇಶಿಸಿರುವ ನೂತನ ವಸತಿ ಬಡಾವಣೆ ನಿರ್ಮಾಣ ಇನ್ನೂ ವಿಳಂಬ ವಾಗುವ ಸೂಚನೆಗಳು ಕಾಣುತ್ತಿವೆ.

Advertisement

ಹಾಸನದ ಬಿ.ಎಂ.ರಸ್ತೆ ಕಸ್ತೂರವಳ್ಳಿ ಗೇಟ್‌ ಮುಂಭಾಗ (ಕೃಷ್ಣ ಭವನ ಹೋಟೆಲ್‌) ದಿಂದ ಎಚ್‌. ಕೆ.ಎಸ್‌. ಸ್ಕೂಲ್‌ವರೆಗೆ ಹಾಸನ ವಿಮಾನ ನಿಲ್ದಾಣದವರೆಗಿನ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆಯೇ ವಸತಿ ಬಡಾವಣೆ ನಿರ್ಮಾಣಕ್ಕೆ ಹುಡಾ ಯೋಜಿಸಿತ್ತು. ಭೂ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ಶೇ.50: 50ರ ಆನುಪಾತದಲ್ಲಿ ನಿವೇಶನ ಹಂಚಿಕೆಯೊಂದಿಗೆ ಅಂದರೆ, ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಶೇ.50ರಷ್ಟು ಭೂ ಮಾಲೀಕರು ಹಾಗೂ ಶೇ.50ರಷ್ಟನ್ನು ಹುಡಾ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡು, ನೂತನ ಬಡಾವಣೆ ನಿರ್ಮಾಣಕ್ಕೆ ಯೋಜನೆ ಮಾಡಲಾಗಿತ್ತು.

75 ಕೋಟಿ ರೂ. ಸಂಗ್ರಹ: ನೂತನ ಬಡಾವಣೆಯಲ್ಲಿ ನಿವೇಶನ ಬಯಸುವವರ ಬೇಡಿಕೆ ಸಮೀಕ್ಷೆಯನ್ನೂ ನಡೆಸಿತ್ತು. ಬೇಡಿಕೆ ಸಮೀಕ್ಷೆಗೆ ನಿರೀಕ್ಷೆ ಮೀರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೇಡಿಕೆ ಸಮೀಕ್ಷೆಯಲ್ಲಿ 57 ಸಾವಿರ ಜನರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಶುಲ್ಕ ಮತ್ತು ನೋಂದಣಿ ಶುಲ್ಕದಿಂದಲೇ ಹುಡಾಗೆ 75 ಕೋಟಿ ರೂ. ಸಂಗ್ರಹವಾಗಿದೆ. ನೂತನ ಬಡಾವಣೆಯಲ್ಲಿ 16 ಸಾವಿರ ನಿವೇಶನಗಳನ್ನು ನಿರ್ಮಿ ಸಲು ಉದ್ದೇಶಿಸಿದ್ದು, 57 ಸಾವಿರ ಅರ್ಜಿಗಳು ಬಂದಿವೆ. ಅಂದರೆ, ನಿವೇಶನಗಳಿಗೆ ಭಾರೀ ಬೇಡಿಕೆ ಇದೆ ಎಂಬುದು ಖಾತರಿಯಾಗಿದೆ.

ಲಾಟರಿ ಮೂಲಕ ನಿವೇಶನ ಹಂಚಿಕೆ: 16 ಸಾವಿರ ನಿವೇಶನಗಳನ್ನು ನಿರ್ಮಾಣವಾದರೂ ಭೂ ಮಾಲೀಕರಿಗೆ ಶೇ.50ರಷ್ಟು ಹಂಚಿಕೆ ಮಾಡಿದ ನಂತರ ಉಳಿಯುವ ಶೇ.50ರಷ್ಟು ನಿವೇಶನದಲ್ಲಿ ಮೂಲೆ ನಿವೇಶನ ಹೊರತುಪಡಿಸಿ 5000ಕ್ಕಿಂತ ಕಡಿಮೆ ನಿವೇಶನಗಳು ಅರ್ಜಿದಾರರಿಗೆ ಹಂಚಿಕೆಯಾಗಬೇಕಾಗಿದೆ. ಅಂದರೆ ಈಗ ಅರ್ಜಿ ಸಲ್ಲಿಸಿರುವ 10 ಜನರ ಪೈಕಿ ಒಬ್ಬರಿಗೆ ಹುಡಾದಿಂದ ನಿವೇಶನ ಸಿಗಬಹುದು. ಅದೂ ಲಾಟರಿ
ಮೂಲಕ ನಿವೇಶನ ಹಂಚಿಕೆ ನಡೆಯಲಿದೆ.

Advertisement

ಇದನ್ನೂ ಓದಿ:ಹಿಂದೂಗಳು ಇಡೀ ಜಗತ್ತಿನಲ್ಲಿಯೇ ಅತ್ಯಂತ ಸಹಿಷ್ಣುತೆ ಹೊಂದಿರುವವರು: ಜಾವೇದ್ ಅಖ್ತರ್

ಮಾಲೀಕರನ್ನು ಮನವೊಲಿಸುವ ಪ್ರಯತ್ನ: 1060 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ನಿರ್ಧರಿಸಿರುವ ಹುಡಾ, ಭೂ ಮಾಲೀಕರಿಂದ ಭೂಮಿ ಪಡೆಯುವ ಪ್ರಯತ್ನ ನಡೆಸಿದ್ದು, ಇದುವರೆಗೆ 800 ಎಕರೆ ಭೂಮಿ ಸ್ವಾಧೀನದ ಒಪ್ಪಿಗೆ ಪತ್ರವನ್ನು ಭೂ ಮಾಲೀಕರಿಂದ ಪಡೆದುಕೊಂಡಿದೆ. ಇನ್ನೂ 200 ಎಕರೆಯನ್ನು ಬಿಟ್ಟುಕೊಡಲು ಭೂ ಮಾಲೀಕರು ಸಮ್ಮ ತಿಸಿಲ್ಲ. ಅವರ ಮನವೊಲಿಸುವ ಪ್ರಯತ್ನವನ್ನು ಹುಡಾ ಮಾಡುತ್ತಿದೆ.

ಅಕ್ಟೋಬರ್‌ ಅಂತ್ಯದೊಳಗೆ ಯೋಜನೆ ಸಿದ್ಧ: ವಸತಿ ಬಡಾವಣೆ ನಿರ್ಮಾಣದ ಯೋಜನೆಯನ್ನು ಇನ್ನೂ ಹುಡಾ ರೂಪಿಸಿಲ್ಲ. ಅಕ್ಟೋಬರ್‌ ಅಂತ್ಯದೊಳಗೆ ಯೋಜನೆ ರೂಪಿಸಿ, ಆನಂತರ ಬಡಾವಣೆ ನಿರ್ಮಾಣದ ರೂಪುರೇಷೆ ನಿರ್ಮಿಸುವ ಗುತ್ತಿಗೆಯನ್ನು ಮೈಸೂರಿನ ಜಿಯೋ ನೆಟ್‌ ಕನ್ಸಲ್ಟೆಂಟ್‌ ನೀಡಲು ಉದ್ದೇಶಿಸಿದೆ. ಈ ಖಾಸಗಿ ಕಂಪನಿ ಬಡಾವಣೆಯ ನೀಲ ನಕ್ಷೆಯನ್ನು ರೂಪಿಸಿದ ನಂತರ ಬಡಾವಣೆ ನಿರ್ಮಾಣದ ಸಿವಿಲ್‌ ಕಾಮಗಾರಿಗೆ ಟೆಂಡರ್‌ ಕರೆಯ ಬೇಕಾಗಿದೆ. ಹಾಗಾಗಿ ಹೊಸ ಬಡಾವಣೆ ನಿರ್ಮಾಣ ಆರಂಭಕ್ಕೆ ಕನಿಷ್ಠ 6 ತಿಂಗಳು ಬೇಕಾಗಿದ್ದು, ನಿವೇಶನ ಹಂಚಿಕೆಗೆ ಒಂದು ವರ್ಷ ಬೇಕಾಗಬಹುದು.

ಭೂ ಮಾಲೀಕರಿಗೂ ಅನುಕೂಲ: ನೂತನ ಬಡಾವಣೆಯಲ್ಲಿ ಭೂ ಮಾಲೀಕರಿಗೆ ಒಂದು ಎಕರೆಗೆ 12 ಸಾವಿರ ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಹುಡಾ ಚಿಂತಿಸಿದೆ. ಅಂದರೆ ಶೇ.50ಕ್ಕಿಂತಲೂ ಹೆಚ್ಚು ನಿವೇಶನಗಳು ಭೂ ಮಾಲೀಕರಿಗೆ ಸಿಗಲಿದ್ದು, ಹುಡಾಗೆ ಎಕರೆಗೆ 9500 ಚದರ ಅಡಿ ನಿವೇಶನಗಳು ಲಭ್ಯವಾಗಲಿವೆ ಎಂದು ಅಂದಾಜು ಮಾಡಲಾಗಿದೆ.

ನಿವೇಶನಕ್ಕೆ ಬೇಡಿಕೆ ಸಾಧ್ಯತೆ: ಈಗಿನ ಲೆಕ್ಕಾಚಾರದಲ್ಲಿ ಹುಡಾ ಚದರ ಅಡಿಗೆ 800 ರೂ. ದರದಲ್ಲಿ ನಿವೇಶನ ಹಂಚಿಕೆಗೆ ಉದೇಶಿಸಿದೆ. ಭೂ ಮಾಲೀಕರು ತಮಗೆ ಸಿಗುವ ನಿವೇಶನಗಳನ್ನು ಚದರ ಆಡಿಗೆ 800ರಿಂದ 1000 ರೂ. ದರದಲ್ಲಿ ಮಾರಾಟ ಮಾಡಿದರೂ 8ರಿಂದ 12 ಕೋಟಿ ರೂ. ಎಕರೆಗೆ ಸಿಕ್ಕಿದಂತಾಗುತ್ತದೆ. ಈ ವಸತಿ ಬಡಾವಣೆ ನಿರ್ಮಾಣವಾದರೆ, ಭೂ ಮಾಲೀಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಬಿ.ಎಂ.ರಸ್ತೆಗೆ ಹೊಂದಿ ಕೊಂಡಂತೆ ವಿಮಾನ ನಿಲ್ದಾಣದ ಪರಿಸರದಲ್ಲಿ ಬಡಾವಣೆ ನಿರ್ಮಾಣವಾಗುವುದರಿಂದ ನಿವೇಶನಗಳಿಗೆ ಭಾರೀ ಬೇಡಿಕೆ ಬರಬಹುದೆಂಬುದು ಹುಡಾ ಲೆಕ್ಕಾಚಾರವಾಗಿದೆ.

ಹೊಸ ಬಡಾವಣೆ ನಿರ್ಮಾಣದ ಪ್ರದೇಶದಲ್ಲಿ ಬೃಹತ್‌ ವಿದ್ಯುತ್‌ ಮಾರ್ಗ ಹಾದು ಹೋಗಿತ್ತು. ಹುಡಾದ ಅದೃಷ್ಟವೆಂಬಂತೆ ಈಗ ವಿಮಾನ ನಿಲ್ದಾಣಕ್ಕೆ ಅಡ್ಡಿಯಾಗಿದ್ದ ವಿದ್ಯುತ್‌ ಮಾರ್ಗವನ್ನು ಸ್ಥಳಾಂತರಿಸಲಾಗುತ್ತಿದ್ದು. ಈಗಾಗಲೇ ಸ್ಥಳಾಂತರದ ಕೆಲಸ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್‌ ಮಾರ್ಗ ಸ್ಥಳಾಂತರವು ಹುಡಾಗೆ ವರದಾನ ವಾದಂತಾಗಿದೆ.

ಸಾಧ್ಯವಾದಷ್ಟೂ ಶೀಘ್ರದಲ್ಲೇ ಬಡಾವಣೆ ನಿರ್ಮಾಣ
ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಬಡಾವಣೆ ನಿರ್ಮಾಣ ಕನಸಿನ ಯೋಜನೆಯಾಗಿದೆ. ಅತ್ಯಾಧುನಿಕ ನಾಗರಿಕ ಸೌಲಭ್ಯ ಗಳನ್ನೊಳಗೊಂಡ ಬಡಾವಣೆ ನಿರ್ಮಿಸಲು ಪ್ರಾಧಿಕಾರ ಚಿಂತಿಸಿದೆ. ಈಗಾಗಲೇ ಶೇ.80ರಷ್ಟು ಭೂ ಮಾಲೀಕರು ಬಡಾವಣೆ ನಿರ್ಮಾಣ ಕ್ಕೆ ಭೂಮಿ ಬಿಟ್ಟುಕೊಡಲು ಸಮ್ಮತಿಸಿರುವುದರಿಂದ ಬಡಾವಣೆ ನಿರ್ಮಾಣಕ್ಕೆ ಯಾವ ಅಡ್ಡಿಯೂ ಎದುರಾಗದು. ಬಡಾವಣೆ ನಿರ್ಮಾಣ ಕ್ಕೆ ಈಗ ಹಣದ ಸಮಸ್ಯೆಯೂ ಇಲ್ಲ. ಆದರೆ, ಯೋಜನೆ ನಿರ್ಮಾಣ, ಟೆಂಡರ್‌ ಪ್ರಕ್ರಿಯೆಗೆ ಸಮಯಬೇಕಾಗಿದೆ. ಆದಷ್ಟೂ ಶೀಘ್ರವಾಗಿ ಬಡಾವಣೆ ನಿರ್ಮಾಣ ಮಾಡಿ, ಅರ್ಜಿದಾರರಿಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್‌ ಸ್ಪಷ್ಟಪಡಿಸಿದ್ದಾರೆ.

ನಿವೇಶನಕ್ಕಾಗಿ ಕಾಯಬೇಕಾದ ಪರಿಸ್ಥಿತಿ
ನೂತನ ಬಡಾವಣೆ ನಿರ್ಮಾಣದ ಪ್ರದೇಶದಲ್ಲಿ 7 ಕೆರೆಗಳು ಬರಲಿದ್ದು, ಅ ಕೆರೆಗಳನ್ನು ಉಳಿಸಿಕೊಂಡು ಸೌಂದರ್ಯಿಕರಣಗೊಳಿಸಲೂ
ಹುಡಾ ಚಿಂತಿಸಿದೆ. ಬಿ.ಎಂ.ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ 300 ಅಡಿ ರಸ್ತೆ (ದಶಪಥ ರಸ್ತೆ) ನಿರ್ಮಾಣಕ್ಕೂ ಯೋಜಿಸಿದ್ದು, ನೂತನ
ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ರೂಪಿಸಲು ಹುಡಾ ಯೋಚಿಸಿದೆ. ಆದರೆ, ಸಾಕಷ್ಟು ಸಮಯವಂತೂ ಬೇಕಾಗಿರುವುದರಿಂದ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿರುವವರು ಇನ್ನೂ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ.

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next