Advertisement

ಆಂತರಿಕ ಭಯೋತ್ಪಾದನೆ ಅಪಾಯಕಾರಿ

11:26 AM Feb 24, 2019 | Team Udayavani |

ಹುಬ್ಬಳ್ಳಿ: ದೇಶದ ಗಡಿಯಲ್ಲಿ ನಡೆಯುತ್ತಿರುವ ಭಯೋತ್ಪಾದನೆಗಿಂತ ದೇಶದೊಳಗೆ ನಡೆಯುತ್ತಿರುವ ಆಂತರಿಕ ಭಯೋತ್ಪಾದನೆ ಹೆಚ್ಚು ಅಪಾಯಕಾರಿ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ರೋಟರಿ ಪರಿಹಾರ ಹುಬ್ಬಳ್ಳಿ ಕೆಎಲ್‌ಇ ತಾಂತ್ರಿಕ ವಿವಿಯ ಬಯೋಟೆಕ್‌ ಸಭಾಂಗಣದಲ್ಲಿ ರೋಟರಿ ಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಮ್ಮ ದೇಶದ 49 ಸೈನಿಕರನ್ನು ಹತ್ಯೆ ಮಾಡಿರುವುದು ಹೀನ ಕೃತ್ಯ. ದೇಶದ ಗಡಿಯಲ್ಲಿ ಭಯೋತ್ಪಾದಕರು ದಾಳಿ ನಡೆಸುತ್ತಾರೆ. ಅದಕ್ಕೆ ಪ್ರತಿಯಾಗಿ ಸೈನಿಕರು ದಾಳಿ ನಡೆಸುತ್ತಾರೆ. ಆದರೆ ನಮ್ಮ ದೇಶದೊಳಗೆ ಕಳವಳಕಾರಿ ಭಯೋತ್ಪಾದನೆ ನಡೆಯುತ್ತಿದೆ. ಪ್ರಸಾದದಲ್ಲಿ ವಿಷ ಬೆರೆಸಿ ಜನರನ್ನು ಕೊಲ್ಲುವ ಅಕ್ಷಮ್ಯ ಘಟನೆಗಳು ನಡೆಯುತ್ತಿವೆ. ಪ್ರಸಾದವನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಇಂಥ ಪ್ರಸಾದದಲ್ಲಿ ವಿಷ ಬೆರೆಸುವುದು ಮನಸಿಗೆ ಬೇಸರ ಉಂಟು ಮಾಡುತ್ತದೆ ಎಂದರು.

ನಮ್ಮ ಸಂಸ್ಕೃತಿಯಲ್ಲಿ ಪ್ರಸಾದಕ್ಕೆ ತನ್ನದೇ ಆದ ಮಹತ್ವವಿದೆ. ಪ್ರಸಾದ ಸೇವಿಸಿದರೆ ಕೃತಾರ್ಥಭಾವ ಮೂಡುತ್ತದೆ. ಮಠ-ಮಾನ್ಯಗಳಲ್ಲಿ ಪ್ರಸಾದ ವಿತರಣೆ ನಿತ್ಯ ನಿರಂತರ ನಡೆಯುತ್ತದೆ. ಉಣ್ಣುವ ಅನ್ನಕ್ಕೆ ವಿಷವಿಕ್ಕುವ ಜನರಿದ್ದಾರೆಂಬುದನ್ನು ನಂಬುವುದಕ್ಕೂ ಕಷ್ಟವಾಗುತ್ತದೆ. ದೇಶದಲ್ಲಿ ನಡೆಯುವ ಇಂಥ ಘಟನೆಗಳು ಭಯೋತ್ಪಾದನೆಗಿಂತಲೂ ಕೆಟ್ಟ ಕೃತ್ಯಗಳು ಎಂದು ತಿಳಿಸಿದರು.

ಮರ್ಯಾದಾ ಹತ್ಯೆಯಂಥ ಘಟನೆಗಳು ಮನಸ್ಸಿಗೆ ಬೇಸರ ಉಂಟು ಮಾಡುತ್ತವೆ. ಇನ್ನೊಬ್ಬರನ್ನು ಕೊಲ್ಲುವುದು ಸುಲಭವಾಗಿದೆ. ನಮ್ಮದು ಕೊಲ್ಲುವ ಸಂಸ್ಕೃತಿಯಲ್ಲ, ನಮ್ಮದು ಉಳಿಸುವ-ಬೆಳೆಸುವ ಸಂಸ್ಕೃತಿ ಎಂದು ಹೇಳಿದರು.

ಸದ್ವಿಚಾರಗಳಿಂದ ಮಾತ್ರ ಒಳ್ಳೆಯ ವ್ಯಕ್ತಿ ರೂಪುಗೊಳ್ಳಲು ಸಾಧ್ಯ. ಕೆಟ್ಟ ವಿಚಾರಗಳನ್ನು ದೂರ ಇಡಬೇಕು. ಬಸವಣ್ಣ ಲಿಂಗಪೂಜೆ ಮೂಲಕ ಕೆಟ್ಟ ವಿಚಾರಗಳನ್ನು ದೂರ ಮಾಡಿ, ಸದ್ವಿಚಾರಗಳನ್ನಷ್ಟೇ ಉಳಿಸಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಅವರೊಬ್ಬ ಮಹಾನ್‌ ವ್ಯಕ್ತಿಯಾಗಿ ಬೆಳೆದರು. ನುಡಿದಂತೆ ನಡೆಯಬೇಕು ಹಾಗೂ ನಡೆದಂತೆ ನುಡಿಯಬೇಕು ಆಗ ವ್ಯಕ್ತಿ ನಡೆದಾಡುವ ದೇಗುಲ, ಮಾತನಾಡುವ ದೇವರಾಗಲು ಸಾಧ್ಯ ಎಂದರು.

Advertisement

ಜಲ ಶುದ್ಧೀಕರಣ ಘಟಕದಂತೆ ಮನಸನ್ನು ಶುದ್ಧಿಕರಿಸುವ ಘಟಕವನ್ನು ನಾವೇ ಅಳವಡಿಸಿಕೊಳ್ಳಬೇಕು. ಆಗ ಸದಾ ಒಳ್ಳೆಯ ವಿಚಾರಗಳೇ ಬರಲು ಸಾಧ್ಯ. ದೇಶದಲ್ಲಿ ಆದರ್ಶ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

ಡಾ| ದೇವರಾಜ ರಾಯಚೂರ, ರವಿಕಿರಣ ಕುಲಕರ್ಣಿ, ವಿಜಯ ಹಟ್ಟಿಹೊಳಿ, ಮಹೇಶ ಸವಣೂರ, ತುಳಸಿದಾಸ ಪಟೇಲ್‌, ಬಾಜಿಲ್‌ ಡಿಸೋಜಾ, ನರಿಂದರ್‌ ಬರವಾಲ್‌, ಬಾಲಕೃಷ್ಣ ಸರಾಫ್, ಡಾ| ಮಿತಾಕ್ಷಿ ಹೂಗಾರ, ಅಬ್ದುಲ್‌ ಸಾದಿಕ್‌, ಸುನಿಲ್‌ ಮಿರಜಕರ, ಫಣಿರಾಜ ಎಚ್‌.ಕೆ. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next