Advertisement

ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್‌ ಅರೆಸ್ಟ್!‌ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ

03:14 PM Oct 30, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಸೈಬರ್‌ ವಂಚಕರ ಜಾಲಕ್ಕೆ ಹೈದರಾಬಾದ್‌ನಲ್ಲಿ ಟೆಕ್ಕಿಯೊಬ್ಬರು 30 ತಾಸು ಲಾಡ್ಜ್ನಲ್ಲಿ ಡಿಜಿಟಲ್‌  ಬಂಧನಕ್ಕೊಳಗಾಗಿದ್ದ ಪ್ರಕರಣಕ್ಕೂ ಮುಂಚೆಯೇ ನಗರದಲ್ಲಿ ಟೆಕ್ಕಿಯೊಬ್ಬರು 24 ತಾಸು ಮನೆಯಲ್ಲೇ ಬಂಧನಗೊಂಡಿದ್ದರೆಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

Advertisement

ನಗರದ ಸಾಫ್ಟ್‌ವೇರ್‌ ಎಂಜಿನಿಯರ್‌(ಟೆಕ್ಕಿ) ಒಬ್ಬರಿಗೆ ವಂಚಕರು, ನಿಮ್ಮ ಹೆಸರಲ್ಲಿ ಪಾರ್ಸಲ್‌ ಇದ್ದು, ಅದು ಮುಂಬೈನಿಂದ ತೈವಾನ್‌ಗೆ ರವಾನೆ ಆಗುತ್ತಿದೆ. ಅದರಲ್ಲಿ ಕಾನೂನುಬಾಹಿರ ವಸ್ತುಗಳಿವೆ. ಸೈಬರ್‌ ಕ್ರೈಂ ಬ್ರ್ಯಾಂಚ್‌ನವರು ಮಾತನಾಡುತ್ತಾರೆಂದು ಹೇಳಿ ಕರೆ ವರ್ಗಾಯಿಸಿದ್ದಾರೆ. ನಂತರ ಸ್ಕೆ çಪ್‌ ಮೀಟಿಂಗ್‌ ಮೂಲಕ ಮಾತನಾಡಿ, ನಿಮ್ಮ ಹೆಸರಿನ ಆಧಾರ ಕಾರ್ಡ್‌ಗೆ ಲಿಂಕ್‌ ಇರುವ 24 ಖಾತೆಗಳು ಆರೋಪಿತನೊಂದಿಗೆ ಲಿಂಕ್‌ ಇವೆ.

ನಿಮ್ಮನ್ನು ಡಿಜಿಟಲ್‌ ಆಗಿ ಬಂಧಿಸಬೇಕಾಗಿದ್ದು, ನಿಮ್ಮ ಬ್ಯಾಂಕ್‌ ಖಾತೆಗಳ ಪರಿಶೀಲನೆ ಇದೆ ಎಂದು ಹೆದರಿಸಿ ಅ.21ರಂದು ಬೆಳಗ್ಗೆಯಿಂದ 22ರ ಸಂಜೆ ವರೆಗೆ ಮನೆಯಲ್ಲಿ ಡಿಜಿಟಲ್‌ ಅರೆಸ್ಟ್‌ ಹೆಸರಲ್ಲಿ ಒಂದು ದಿವಸ ತಮ್ಮ ವಶದಲ್ಲಿಟ್ಟುಕೊಂಡು, ವಿವಿಧ ಬ್ಯಾಂಕ್‌ ಖಾತೆಗಳಿಗೆ ಆನ್‌ ಲೈನ್‌ ಮೂಲಕ ಒಟ್ಟು 81,06,286 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಇದಕ್ಕೂ ಮೊದಲು ವಂಚಕರು ಟೆಕ್ಕಿಗೆ ವಿಡಿಯೋ ಕಾಲ್‌ ಮಾಡಿದ್ದಾಗ ಮನೆಯಲ್ಲಿನ ಯಾರೊಂದಿಗೂ ಸಂಪರ್ಕ ಹೊಂದಬಾರದು. ರೂಮ್‌ ಬಿಟ್ಟು ಎಲ್ಲೂ ಹೋಗಬಾರದು. ಹೊರಗಿನಿಂದ ಒಳಗೆ ಯಾರು ಬಾರದಂತೆ ಭದ್ರಪಡಿಸಿಕೊಳ್ಳಬೇಕು. ಇಲ್ಲವಾದರೆ ನಾವು ಬಂಧಿಸುತ್ತೇವೆಂದು ರೂಮ್‌ನಲ್ಲೇ ನಿರ್ಬಂಧಿಸಿದ್ದರು.

ಹೈದರಾಬಾದ್‌ನ ಟೆಕ್ಕಿ ಅ.26ರ ಬೆಳಗಿನ ಜಾವದಿಂದ 27ರ ವರೆಗೆ ಸುಮಾರು 30 ತಾಸು ಕಾಲ ಲಾಡ್ಜ್ ನಲ್ಲಿ ಡಿಜಿಟಲ್‌
ಬಂಧನಕ್ಕೊಳಗಾಗಿದ್ದರೂ ಹಣ ಕಳೆದುಕೊಳ್ಳದೆ ಬಚಾವ್‌ ಆಗಿದ್ದರು. ಆದರೆ ಹುಬ್ಬಳ್ಳಿಯ ಟೆಕ್ಕಿ ಬರೋಬ್ಬರಿ 81.06 ಲಕ್ಷ ರೂ. ಕಳೆದುಕೊಂಡಿದ್ದಾರೆ.

Advertisement

ವಂಚನೆ ಹೇಗೆ?: ಪಾರ್ಸೆಲ್‌, ಕೊರಿಯರ್‌ ಕಂಪನಿಗಳ ಸೋಗಿನಲ್ಲಿ ಕರೆಯೊಂದು ಬರಲಿದೆ. ನಿಮ್ಮ ಹೆಸರಲ್ಲಿ ಯಾರೋ ಪಾರ್ಸೆಲ್‌ ಕಳುಹಿಸಿದ್ದಾರೆ ಅಥವಾ ನಿಮ್ಮ ಹೆಸರಿನಿಂದ ಥಾಯ್ಲೆಂಡ್‌, ತೈವಾನ್‌, ಮಲೇಷಿಯಾಗೆ ಪಾರ್ಸಲ್‌ ಕಳುಹಿಸಲಾಗಿದೆ. ಅದರಲ್ಲಿ ಮಾದಕ ವಸ್ತು, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಇನ್ನಿತರ ವಸ್ತುಗಳಿವೆ.

ಡ್ರಗ್ಸ್‌ ಜಾಲ ನಿಮ್ಮ ಹೆಸರಿನಲ್ಲಿ ಈ ಕೃತ್ಯವೆಸಗಿದೆ. ಈ ಕುರಿತು ನೀವು ದೂರು ದಾಖಲಿಸಿ ಅಥವಾ ನಿಮಗೆ ನಾರ್ಕೋಟಿಕ್ಸ್‌ ವಿಭಾಗದ ಅಧಿಕಾರಿಗಳು ಕರೆ ಮಾಡುತ್ತಾರೆಂಬ ಸಂದೇಶ ನೀಡುತ್ತಾರೆ. ನಂತರ ಸೈಬರ್‌ ಕ್ರೈಂ ಪೊಲೀಸರು, ಸಿಐಡಿ, ಸಿಸಿಬಿ ಸೇರಿದಂತೆ ಇತರೆ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮೂಲಕ ವಿಚಾರಣೆ ನಡೆಸುತ್ತಾರೆ.

ಆಧಾರ್‌ನಲ್ಲಿರುವ ಅಥವಾ ಸರ್ಕಾರಿ ದಾಖಲೆಯಲ್ಲಿರುವ ಗುರುತು ಪತ್ತೆಗೆ ವಿವಸ್ತ್ರಗೊಳಿಸುತ್ತಾರೆ. ಈ ಪ್ರಕರಣದಿಂದ
ಪಾರಾಗಲು, ಬಂಧನವಾಗದಂತಿರಲು ಇಂತಿಷ್ಟು ಹಣ ನೀಡಬೇಕೆಂದು ಹೇಳುತ್ತಾರೆ. ಈ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದುರಾಗುವಂತೆ ಮಾಡುತ್ತಾರೆ.

“ಡಿಜಿಟಲ್‌ ಅರೆಸ್ಟ್‌’ ಎಂಬುದಿಲ್ಲ!
ಭಾರತ ಸೇರಿದಂತೆ ಜಗತ್ತಿನ ಯಾವುದೇ ಕಾನೂನು ವ್ಯವಸ್ಥೆಯಲ್ಲಿ ಡಿಜಿಟಲ್‌ ಅರೆಸ್ಟ್‌ (ಬಂಧನ) ಎಂಬುದಿಲ್ಲ. ಸೈಬರ್‌ ಅಪರಾಧಿಗಳೇ ಇದನ್ನು ಹುಟ್ಟು ಹಾಕಿಕೊಂಡಿರುವುದು. ಸಿಬಿಐ, ಇಡಿ, ಕಸ್ಟಮ್ಸ್‌, ಸೈಬರ್‌ ಪೊಲೀಸರು ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳು ಡಿಜಿಟಲ್‌ ಅರೆಸ್ಟ್‌ ಆಗಿದ್ದೀರಿ. ನೀವು ಇದ್ದಲ್ಲಿಯೇ ಇರಬೇಕು. ಎಲ್ಲೂ ಹೋಗಬಾರದು ಎಂದು ಎಲ್ಲೂ ಹೇಳಲ್ಲ. ಹಾಗೇನಾದರು ಯಾರಾದರೂ ಹೇಳಿದರೆ ಅದು ಕಾನೂನುಬಾಹಿರವಾಗಿದೆ.

ಅನಾಮಧೇಯ ಸಂಖ್ಯೆಯಿಂದ ವಿಡಿಯೋ ಕಾಲ್‌, ಕರೆಗಳು ಬಂದರೆ ಸ್ವೀಕರಿಸಬಾರದು. ಲಿಂಕ್‌ಗಳು ಬಂದರೆ ಕ್ಲಿಕ್‌ ಮಾಡಬಾರದು. ಸಂದೇಹ ಬಂದರೆ ತಕ್ಷಣ ಕರೆ ಕಡಿತಗೊಳಿಸಿ ಬ್ಲಾಕ್‌ ಮಾಡಬೇಕು. ಸಮೀಪದ  ಠಾಣೆಗೆ ತೆರಳಿ ಮಾಹಿತಿ ಕೊಡಬೇಕು. 1930 ಸಂಖ್ಯೆಗೆ ಕರೆ ಮಾಡಿ ವರದಿ ನೀಡಬೇಕು. ಒಂದು ವೇಳೆ ಹಣಕಾಸಿನ ವ್ಯವಹಾರ ಆಗಿದ್ದರೆ ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌(ಎನ್‌ಸಿಸಿಆರ್‌ಪಿ)ಗೆ ತಿಳಿಸುತ್ತಾರೆ. ಆ ಮೂಲಕ ಬ್ಲಾಕ್‌ ಮಾಡಿ, ಖಾತೆಯ ವಹಿವಾಟು ಫ್ರೀಜ್‌ ಮಾಡುತ್ತಾರೆ. ಇಂತಹ ಪ್ರಕರಣಗಳಲ್ಲಿ ಶಿಕ್ಷಣವಂತರೆ ಮೋಸ ಹೋಗುತ್ತಿರುವುದು ದುರದೃಷ್ಟಕರ.
ಡಾ| ಶಿವರಾಜ ಕಟಕಭಾವಿ,
ಎಸಿಪಿ, ಹು-ಧಾ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆ ವಿಭಾಗ

■ ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next