Advertisement

ಹುಬ್ಬಳ್ಳಿ: ವರುಣನ ಅವಕೃಪೆ: ಬೆಳೆಯ ರಕ್ಷಣೆಗೆ ಅನ್ನದಾತರ ಪರದಾಟ

05:25 PM Jul 01, 2023 | Team Udayavani |

ಹುಬ್ಬಳ್ಳಿ: ಬಂದರೆ ಪ್ರವಾಹ ಇಲ್ಲವಾದರೆ ಬರ..ಇತ್ತೀಚೆಗಿನ ವರ್ಷಗಳಲ್ಲಿ ಕೃಷಿಕರ ಪಾಲಿಗೆ ವರುಣದೇವ ಇದೇ ರೀತಿಯಾಗಿ ಕಾಡತೊಡಗಿದ್ದಾನೆ. ಜೂನ್‌ ತಿಂಗಳು ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿರಬೇಕಾಗಿತ್ತು. ಆದರೆ ಎಲ್ಲ ಕಡೆಗೂ ಬರದ ಛಾಯೆ ಆವರಿಸಿದೆ. ಬಿತ್ತನೆ ಮಾಡಿದ ಅಷ್ಟು ಇಷ್ಟು ಬೆಳೆ ಉಳಿಸಿಕೊಳ್ಳಲು ಅನ್ನದಾತರು ಪರದಾಡುವಂತಾಗಿದೆ. ಜೂನ್‌ ಮಾಹೆಯಲ್ಲಿ ಬೀದರ ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಮಳೆಯ ಕೊರತೆ ಅನುಭವಿಸುತ್ತಿವೆ.

Advertisement

ಕಳೆದೊಂದು ದಶಕದಿಂದ ಮಳೆ ರೈತರ ಪಾಲಿಗೆ ಕಣ್ಣಾ ಮುಚ್ಚಾಲೆ ಆಟವಾಡುತ್ತಿದೆ. 2009ರ ನಂತರದಲ್ಲಿ ಉತ್ತರ ಕರ್ನಾಟಕ ಕೆಲವು ವರ್ಷಗಳವರೆಗೆ ಒಂದಿಲ್ಲ ಒಂದು ರೀತಿ ಪ್ರವಾಹ ಸ್ಥಿತಿ ಎದುರಿಸುತ್ತಲೇ ಬಂದಿದೆ.

ಕೆಲವೊಮ್ಮೆ ಬರದ ಸ್ಥಿತಿ ಇದ್ದರೂ ಮಹಾರಾಷ್ಟ್ರದಲ್ಲಿ ಬಿದ್ದ ಮಹಾಮಳೆಗೆ ಪ್ರವಾಹ ಸ್ಥಿತಿ ಎದುರಿಸುವಂತಾಗಿತ್ತು. ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮಳೆ ಬಿದ್ದಿತ್ತಾದರೂ, ಈ ಬಾರಿಯ ಮುಂಗಾರು ಕೈಕೊಟ್ಟಿದೆ. ಉತ್ತಮ ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಬಿತ್ತನೆ ಸಂದರ್ಭ ಮಳೆ ಕೊರತೆ ಚಿಂತೆಗೀಡು ಮಾಡುವಂತೆ ಮಾಡಿದೆ.

ತೀವ್ರ ಮಳೆ ಕೊರತೆ: ಈ ಬಾರಿ ಬೇಸಿಗೆ ಸಂದರ್ಭದಲ್ಲಿಯೂ ಅಡ್ಡ ಮಳೆ ಇಲ್ಲವೇ ಪೂರ್ವ ಮುಂಗಾರು ಮಳೆ ರೂಪದಲ್ಲಿಯೂ ಮಳೆ ಬಿದ್ದಿದ್ದು ಕಡಿಮೆ ಎನ್ನಬಹುದು. ಈ ಬಾರಿ ಸಾಮಾನ್ಯಕ್ಕಿಂತ ಬಿರುಬಿಸಿಲು ಇಡೀ ಉತ್ತರ ಕರ್ನಾಟಕವನ್ನು ಕಾಡಿತ್ತು. ಮಲೆನಾಡಿನ ಸೆರಗಿನಂತಿರುವ ಧಾರವಾಡ-ಹಾವೇರಿ ಜಿಲ್ಲೆಗಳಲ್ಲಿಯೂ ಈ ಬಾರಿಯ ಬಿಸಿಲು ಜನರು ನಿಟ್ಟುಸಿರು ಬಿಡುವಂತೆ ಮಾಡಿತ್ತು. ವಿಚಿತ್ರವೆಂದರೆ ಬಿರು ಬೇಸಿಗೆ ಮೇ ತಿಂಗಳಲ್ಲಿಯೂ ಬೆಳಗಿನ ವೇಳೆ ಚಳಿಗಾಲವನ್ನು ನೆನಪಿಸುವ ರೀತಿ ಮಂಜು ಬೀಳುತ್ತಿತ್ತು.

ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ, ಸಕಾಲಕ್ಕೆ ಪ್ರವೇಶ ಪಡೆಯಲಿದೆ ಎಂಬ ನಿರೀಕ್ಷೆ ಸುಳ್ಳಾಗಿತ್ತು. ವಾಡಿಕೆಗಿಂತ ಐದಾರು ದಿನಗಳ ನಂತರದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶವಾಗಿತ್ತಾದರೂ, ಮುಂಗಾರು ದುರ್ಬಲಗೊಂಡು ಬಹುತೇಕ ಕಡೆ
ಮಳೆ ಕೊರತೆ ಕಾಡುವಂತಾಯಿತು. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಷ್ಟು ಇಷ್ಟು ಮಳೆಯಾಗಿದ್ದು ಬಿಟ್ಟರೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ತೀವ್ರ ಮಳೆ ಕೊರತೆ ಎದುರಿಸುವಂತಾಗಿದೆ.

Advertisement

ಜೂನ್‌ ತಿಂಗಳಲ್ಲಿ ಉತ್ತಮ ಮಳೆ ಬಿದ್ದು ಹಳ್ಳ-ಕೊಳ್ಳ, ನದಿಗಳು ತುಂಬಿಕೊಳ್ಳಬೇಕಾಗಿತ್ತು. ಜಲಾಶಯಗಳಲ್ಲಿ ಒಳಹರಿವು ಹೆಚ್ಚಬೇಕಿತ್ತು. ಆದರೆ, ಕಳೆದ 40-45 ವರ್ಷಗಳ ಇತಿಹಾಸದಲ್ಲಿಯೇ ಇಲ್ಲದ ರೀತಿಯಲ್ಲಿ ಜಲಾಶಯಗಳು ಖಾಲಿಯಾಗಿವೆ.
ಜಲಾಶಯಗಳಲ್ಲಿ ಮುಳುಗಿದ ಅನೇಕ ದೇವಸ್ಥಾನ, ಕಟ್ಟಡಗಳು ಮೊದಲ ಬಾರಿಗೆ ನೋಡುವಂತಾಗಿದೆ.

ಹಳ್ಳ-ನದಿಗಳು ಬತ್ತಿ ಖಾಲಿ ಮೈದಾನದಂತಾಗಿವೆ. ವಿಶೇಷವಾಗಿ ಪ್ರಾಣಿ, ಪಕ್ಷಿಗಳು, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗಿದೆ. ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ತತ್ವಾರ ಕಂಡಿದ್ದರೆ, ಮಳೆ ಕೊರತೆ ಮುಂದುವರಿದರೆ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ವಿವಿಧ ಮಹಾನಗರ, ನಗರ-ಪಟ್ಟಣಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಲಿದೆ. ಜೂನ್‌ ತಿಂಗಳಲ್ಲಿ ಬೀದರ ಹೊರತುಪಡಿಸಿದರೆ ಉತ್ತರ ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಶೇ.31ರಿಂದ 51 ಹಾಗೂ ನಾ ಲ್ಕು ಜಿಲ್ಲೆಗಳಲ್ಲಿ ಶೇ.64-74ರಷ್ಟು ಮಳೆಯ ಕೊರತೆ ಕಂಡು ಬಂದಿದೆ.

ಕಳೆದೆರಡು ದಿನಗಳಿಂದ ಬಹುತೇಕ ಕಡೆ ಯಾವುದೇ ಮಳೆಯಾಗಿಲ್ಲ. ಉತ್ತರ ಕರ್ನಾಟಕದ ಶೇ.25-30 ಪ್ರದೇಶದಲ್ಲಿ 1ರಿಂದ 5 ಎಂ.ಎಂ.ಗಿಂತ ಕಡಿಮೆ ಪ್ರಮಾಣದಷ್ಟು ಮಾತ್ರ ಮಳೆಯಾಗಿದೆ.

ಹೆಸರು ಹೋಯಿತು, ಬೇರೆ ಬೆಳೆ ಅನಿಶ್ಚಿತತೆ:
ಸಾಮಾನ್ಯವಾಗಿ ಮುಂಗಾರು ಹಂಗಾಮಿಗೆ ಉತ್ತರ ಕರ್ನಾಟಕದಲ್ಲಿ ಹೆಸರು, ಸೋಯಾ, ಸಜ್ಜೆ, ಶೇಂಗಾ, ಸೂರ್ಯಕಾಂತಿ ಇನ್ನಿತರ ಬೆಳೆಗಳ ಬಿತ್ತನೆಯಾಗುತ್ತದೆ. ಆದರೆ ಈ ಬಾರಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬಹುತೇಕ ಕಡೆ ಮುಂಗಾರು ಬೆಳೆ ಬಿತ್ತನೆಯೇ ಆಗಲಿಲ್ಲ. ಉಳಿದ ಬೆಳೆಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಳೆಯ ನಿರೀಕ್ಷೆಯೊಂದಿಗೆ ಅಲ್ಲಿ ಇಲ್ಲಿ ಅಷ್ಟು ಇಷ್ಟು ಬಿತ್ತನೆಯಾದ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ರೈತರು ಸಂಕಷ್ಟ ಪಡುತ್ತಿದ್ದಾರೆ. ಕಣ್ಣ ಮುಂದೆಯೇ ಬಿತ್ತಿದ ಬೆಳೆ ಕಮರುತ್ತಿರುವುದು ಕಂಡು ಕಣ್ಣೀರಿಡುತ್ತಿದ್ದಾರೆ.

ಬಿತ್ತಿದ ಬೆಳೆ ಕೆಲವೆಡೆ ಮೊಳಕೆಯೊಡೆಯುವ ಹಂತದಲ್ಲಿದ್ದರೆ, ಇನ್ನು ಕೆಲವೆಡೆ ಮೊಳಕೆಯೊಡೆದಿದ್ದು, ನೀರಿಲ್ಲದೆ ಒಣಗುತ್ತಿವೆ. ನೀರಿನ ಲಭ್ಯತೆ ಇಲ್ಲದೆ ಬಹುತೇಕ ರೈತರು ಮುಗಿಲತ್ತ ನೋಡುತ್ತ ವರುಣದೇವನಿಗೆ ಕೃಪೆ ತೋರು ಎಂದು ಪ್ರಾರ್ಥಿಸುತ್ತಿದ್ದರೆ, ದೂರದಲ್ಲಾದರೂ ನೀರಿನ ಲಭ್ಯತೆ ಇದೆ ಎನ್ನುವ ರೈತರು ಟ್ರಾಕ್ಟರ್‌, ಟ್ಯಾಂಕರ್‌ಗಳಲ್ಲಿ ನೀರು ತಂದು ಹೊಲಗಳಿಗೆ ಸಿಂಪರಣೆ ಮಾಡುವ ಮೂಲಕ ಇದ್ದ ಬೆಳೆ ಉಳಿಸಿಕೊಳ್ಳುವ ಹರಸಾಹಸಕ್ಕೆ ಮುಂದಾಗಿದ್ದಾರೆ.

ರೈತರ ಈ ಯತ್ನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಬೆಳೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರೈತರು ದುಬಾರಿ ವೆಚ್ಚವಾದರೂ ಸರಿ ಎಂದು ಟ್ಯಾಂಕರ್‌ ಮೂಲಕ ನೀರು ತಂದು ಹೊಲಗಳಿಗೆ ಹಾಕುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆಯೋ ತಿಳಿಯದಾಗಿದೆ. ಮುಂದಿನ ಎರಡು ದಿನಗಳವರೆಗೂ ಉತ್ತರ ಕರ್ನಾಟಕದಾದ್ಯಂತ ಮಳೆ ಕೊರತೆ ಮುಂದುವರೆಯಲಿದೆ ಎಂಬುದು ಹವಾಮಾನ ತಜ್ಞರ ಅನಿಸಿಕೆಯಾಗಿದೆ.

ಜುಲೈ ಮೊದಲ ವಾರದಲ್ಲಾದರೂ ಉತ್ತಮ ಮಳೆ ಬಿದ್ದರೆ ಮೆಣಸಿನಕಾಯಿ, ತೊಗರಿ, ಉಳ್ಳಾಗಡ್ಡಿ, ಮೆಕ್ಕೆಜೋಳ ಬೆಳೆಗಳ ಬಿತ್ತನೆಗೆ ಅನುಕೂಲವಾದರೂ ಆಗಲಿದೆ. ಹೆಸರು ಸೇರಿದಂತೆ ಅಕ್ಕಡಿಕಾಳು ಬೆಳೆ ಕಳೆದುಕೊಂಡಿರುವ ರೈತರು ಮೆಣಸಿನಕಾಯಿ,
ಉಳ್ಳಾಗಡ್ಡಿ ಇನ್ನಿತರ ಬೆಳೆಗಳನ್ನಾದರೂ ಕಾಣುವಂತಾಗಲಿದೆ.

ಜೂನ್‌ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಮುಂಗಾರು ವಿಫಲವಾಗಿದ್ದು, ಜುಲೈ 3ರಿಂದ ಚುರುಕು ಪಡೆಯಲಿದೆ. ಉತ್ತರ
ಕರ್ನಾಟಕ, ವಿಶೇಷವಾಗಿ ಕರಾವಳಿ, ಪಶ್ಚಿಮ ಘಟ್ಟಗಳು, ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಒಳನಾಡು ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಡಾ| ಆರ್‌.ಎಚ್‌. ಪಾಟೀಲ, ಪ್ರಧಾನ ನೋಡಲ್‌ ಅಧಿಕಾರಿ,
ಕೃಷಿ ಹವಾಮಾನ ಶಾಸ್ತ್ರ ವಿಭಾಗ

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next