Advertisement

ಕನೇರಿ ಮಠದಿಂದ ನೆರೆ ಗ್ರಾಮ ದತ್ತು

06:18 PM Sep 26, 2019 | Naveen |

„ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ರಾಜ್ಯದ ಪ್ರವಾಹ ಪೀಡಿತ ಒಂದು ಗ್ರಾಮವನ್ನು ದತ್ತು ಪಡೆದು, ಅದನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠ ಚಿಂತನೆ ನಡೆಸಿದೆ.

ಇತ್ತೀಚೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕಂಡರಿಯದ ಪ್ರವಾಹದಿಂದ ಸಂತ್ರಸ್ತರಾದವರಿಗೆ ವಿವಿಧ ಪರಿಹಾರ ಸಾಮಗ್ರಿ, ತಾತ್ಕಾಲಿಕ ಮನೆಗಳ ನಿರ್ಮಾಣ, ಆರೋಗ್ಯ ಸೇವೆ ಇನ್ನಿತರ ಸೌಲಭ್ಯ ನೀಡಿಕೆಯಲ್ಲಿ ತೊಡಗಿರುವ ಶ್ರೀಮಠ, ಕರ್ನಾಟಕ ಪ್ರವಾಹ ಪೀಡಿತ ಒಂದು ಹಳ್ಳಿಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ನಿರ್ಧರಿಸಿದೆ.

ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀಮಠದಿಂದ ಮಹಾರಾಷ್ಟ್ರದಲ್ಲಿ ಪ್ರವಾ ಪೀಡಿತ ಸುಮಾರು 150 ಗ್ರಾಮಗಳ ಸಂತ್ರಸ್ತರಿಗೆ ಆರಂಭದಲ್ಲಿ ಊಟ, ನೀರು, ಔಷಧಿ ಹಂಚಿಕೆ ಮಾಡಲಾಗಿತ್ತು. 150 ಗ್ರಾಮಗಳ ಎಲ್ಲ ಕುಟುಂಬಗಳಿಗೆ ಸುಮಾರು 36 ಸಾಮಗ್ರಿಗಳು ಒಳಗೊಂಡ ಕಿಟ್‌ನ್ನು ವಿತರಣೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಅಂದಾಜು 35-40 ಸಾವಿರದಷ್ಟು ನೋಟ್‌ಬುಕ್‌, ಪೆನ್‌, ಪೆನ್ಸಿಲ್‌ ಇನ್ನಿತರ ಲೇಖನಿ ಸಾಮಗ್ರಿಗಳನ್ನು ನೀಡಲಾಗಿದೆ. ಸುಮಾರು 25 ಗ್ರಾಮಗಳ ಜಾನುವಾರುಗಳಿಗೆ ಒಂದುವರೆ ತಿಂಗಳಿಗೆ ಸಾಕಾಗುವಷ್ಟು ಮೇವು ಸಾಗಣೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ರಾಜ್ಯದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು, ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳ ಹಳ್ಳಿಗಳು ಸೇರಿದಂತೆ ರಾಜ್ಯದ ಗಡಿ ಭಾಗದ ನದಿಗಳಿಗೆ ಹೊಂದಿಕೊಂಡಿರುವ ಗ್ರಾಮಗಳ ಸಂತ್ರಸ್ತರಿಗೂ ಪರಿಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ.

ಖುದ್ದು ಪರಿಶೀಲನೆ: ಕೊಲ್ಲಾಪುರ ಜಿಲ್ಲಾಡಳಿತ, ಕೊಲ್ಲಾಪುರ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು
ಇನ್ನಿತರರು ನೆರೆ ಸಂತ್ರಸ್ತರ ಪರಿಹಾರಕ್ಕೆಂದು ಸಂಗ್ರಹಿಸಿದ್ದ ಸಾಮಗ್ರಿಗಳನ್ನು ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ನೀಡಲಾಗಿದ್ದು, ಶ್ರೀಮಠದಿಂದಲೇ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ. ಶ್ರೀಮಠದ ಸ್ವಯಂ ಸೇವಕರು ಸಂತ್ರಸ್ತ ಗ್ರಾಮಗಳಿಗೆ ತೆರಳಿ ಜನರಿಗೆ ಏನು ಅಗತ್ಯವಿದೆ, ಎಷ್ಟು ಅಗತ್ಯವಿದೆ ಎಂದು ಖುದ್ದು ಪರಿಶೀಲಿಸಿ ಪಟ್ಟಿ ಮಾಡಿಕೊಂಡು ಬಂದ ನಂತರ ಮಾಹಿತಿಗೆ ಅನುಗುಣವಾಗಿ ಪರಿಹಾರ ಸಾಮಗ್ರಿಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸಲಾಗಿದೆ.

Advertisement

ಸುಮಾರು 500ಕ್ಕೂ ಹೆಚ್ಚು ಸ್ವಯಂ ಸೇವಕರು ಹಗಲಿರುಳು ಸಂತ್ರಸ್ತರಿಗೆ ಅಗತ್ಯ ವಸ್ತುಗಳ ತಲುಪಿಸಲು, ನೆರವಾಗಲು ಶ್ರಮಿಸಿದ್ದಾರೆ. ಈಗಲೂ ಹಲವು ಪರಿಹಾರ ಕಾರ್ಯಗಳಲ್ಲಿ ಕೈ ಜೋಡಿಸಿದ್ದಾರೆ.

ತುರ್ತು ನೆರವು, ಪರಿಹಾರ ಸಾಮಗ್ರಿ ನೀಡಿದ ನಂತರ ಪ್ರವಾಹ ಪೀಡಿತ ಗ್ರಾಮಗಳ ಸ್ವತ್ಛತಾ ಕಾರ್ಯದಲ್ಲಿ ಗ್ರಾಮಸ್ಥರೊಂದಿಗೆ ಸ್ವಯಂ ಸೇವಕರು ಕೈ ಜೋಡಿಸಿದ್ದಾರೆ. ಪ್ರವಾಹ ಸಂತ್ರರಸ್ತರಿಗೆ ವಿವಿಧ ಕಡೆಯಿಂದ ನೆರವಿನ ಮಹಾಪೂರವೇ ಹರಿದು ಬಂದಿದ್ದು, ಸಂತ್ರಸ್ತರಿಗೆ ಅಗತ್ಯವಿದ್ದ ಕೆಲವೊಂದು ವಸ್ತುಗಳು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರುವುದು ಹಾಗೂ ಇಲ್ಲದೆ ಇರುದವುಗಳನ್ನು ಗುರುತಿಸಿ ಸುಮಾರು 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗಿದೆ.

ಪರಿಹಾರ ಸಾಮಗ್ರಿ ತಲುಪಿಸಲು ಸಾಧ್ಯವಾಗದ ಗ್ರಾಮಗಳಿಗೆ ಸಂಪರ್ಕ ಇರುವ ಹತ್ತಿರದ ಗ್ರಾಮಗಳ ಕಿರಾಣಿ ಅಂಗಡಿಗಳಿಂದ ಸಂತ್ರಸ್ತ ಕುಟುಂಬಗಳಿಗೆ ಏನೆಲ್ಲಾ ಬೇಕೋ ಅವುಗಳನ್ನು ಕೊಡಿಸಿ, ಹಣ ಪಾವತಿಸಲಾಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಶ್ರೀಮಠದ ಕಾಳಜಿ ಕಂಡು ಅನೇಕ ಉದ್ಯಮಿಗಳು, ದಾನಿಗಳು ಶ್ರೀಮಠದಕ್ಕೆ ಹಣ
ಇನ್ನಿತರ ರೂಪದ ದೇಣಿಗೆ ನೀಡಿದ್ದಾರೆ.

ಮನೆಗಳ ನಿರ್ಮಾಣ: ಪ್ರವಾಹದಿಂದ ಮನೆಗಳಿಗೆ ಹಾನಿಯಾಗಿದ್ದು, ಸಂಪೂರ್ಣವಾಗಿ ಮನೆ ಕುಸಿತವಾದ ಕಡೆಗಳಲ್ಲಿ ಜನರು ತಾತ್ಕಾಲಿಕ ಶೆಡ್‌ಗಳಲ್ಲಿ ಆಶ್ರಯ ಪಡೆದಿದ್ದರು, ನಂತರ ಬಾಡಿಗೆ ಮನೆಗಳಿಗೆ ವಾಸಕ್ಕೆ ಮುಂದಾಗಿದ್ದರು. ಕೆಲವೊಂದು ಕಡೆಗಳಲ್ಲಿ ಬಾಡಿಗೆ ಮನೆಗಳು ಸಹ ಸಿಗದ ಸ್ಥಿತಿ ಇದೆ. ಇದನ್ನು ಗಮನಿಸಿದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಮನೆ ಕಳೆದುಕೊಂಡು ಬಾಡಿಗೆ ಮನೆಯೂ ದೊರೆಯದ ಸ್ಥಿತಿಯಲ್ಲಿರುವ ನಿರಾಶ್ರಿತರಿಗೆ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಸಂತ್ರಸ್ತರಿಗೆ ಮನೆಗಳು ನಿರ್ಮಾಣ ಆಗುವವರೆಗೆ ತಾತ್ಕಾಲಿಕವಾಗಿ ಮನೆಗಳ ಆಶ್ರಯ ನೀಡಿಕೆ ನಿಟ್ಟಿನಲ್ಲಿ ಕಬ್ಬಿಣ ಹಾಗೂ ತಗಡುಗಳನ್ನು ಬಳಸಿ ತಾತ್ಕಾಲಿಕ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮಹಾರಾಷ್ಟ್ರದ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ರಾಜಾಪುರ ಗ್ರಾಮದಲ್ಲಿ
ಈಗಾಗಲೇ ಸುಮಾರು 84 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, 50 ಮನೆಗಳನ್ನು ಪೂರ್ಣಗೊಳಿಸಲಾಗಿದೆ.

ಕರ್ನಾಟಕದಲ್ಲೂ ಇಂತಹ ಸ್ಥಿತಿಯಲ್ಲಿರುವ ಸಂತ್ರಸ್ತರು ಇದ್ದರೆ ಅವರಿಗೂ ತಾತ್ಕಾಲಿಕ ಮನೆಗಳ ನಿರ್ಮಾಣ ಅಲ್ಲದೆ, ಒಂದು ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಇದಕ್ಕೆ ಸೂಕ್ತ ಸ್ಪಂದನೆ ದೊರೆತರೆ ಶೀಘ್ರವೇ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲು ಶ್ರೀಮಠ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next