ಹುಬ್ಬಳ್ಳಿ: ಮುಂದಿನ 5-6 ತಿಂಗಳಲ್ಲಿ ಮಹಾನಗರದ ರಸ್ತೆಗಳು ಸಂಪೂರ್ಣ ಅಭಿವೃದ್ಧಿಯಾಗಿ ಮಹಾನಗರದ ಚಿತ್ರಣ ಬದಲಾಗಿದ್ದು, ಸುಂದರ ಮಹಾನಗರವನ್ನಾಗಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ರಮೇಶ ಭವನದ ಬಳಿ ಗುರುವಾರ ಸರ್ವೋದಯ ವೃತ್ತ-ಗೋಪನಕೊಪ್ಪವರೆಗೆ ಸಿಆರ್‌ಎಫ್ ಯೋಜನೆಯಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಹಳ ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಗೆ ಬಗ್ಗೆ ಬೇಡಿಕೆಗಳಿದ್ದವು. ಸಿಆರ್‌ಎಫ್ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗಿದೆ. 50ಕೋಟಿ ರೂ. ವೆಚ್ಚದಲ್ಲಿ ಗದಗ ರಸ್ತೆ ರೈಲ್ವೆ ಕೆಳೆ ಸೇತುವೆ-ಸಾಯಿನಗರ ವೃತ್ತದವರೆಗೆ ಈ ಯೋಜನೆಯಿದೆ. ಮೊದಲ ಹಂತದಲ್ಲಿ ಸರ್ವೋದಯ ವೃತ್ತದವರೆಗೆ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತದಲ್ಲಿ ಸರ್ವೋದಯ ವೃತ್ತದಿಂದ ಗೋಪನಕೊಪ್ಪದವರಗೆ ರಸ್ತೆ ನಿರ್ಮಾಣವಾಗಲಿದೆ ಎಂದರು.
ಮಹಾನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸಿಆರ್‌ಎಫ್ ಯೋಜನೆಯಲ್ಲಿ 400 ಕೋಟಿ ರೂ. ಮಂಜೂರಾತಿ ಕೇಂದ್ರ ಸರಕಾರದಿಂದ ಮಾಡಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಾಮಗಾರಿಗಳು ಒಂದಿಷ್ಟು ವಿಳಂಬವಾದವು. ಹಿಂದಿನ ಸರಕಾರ ಸಿಆರ್‌ಎಫ್ ರಸ್ತೆ ನಿರ್ಮಾಣಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲಿಲ್ಲ. ಇದೀಗ ನಮ್ಮದೇ ಸರಕಾರವಿದ್ದು, ಒಳ ರಸ್ತೆಗಳು ಅಭಿವೃದ್ಧಿಯಾಗಲಿದೆ. ನಗರ ವಿಕಾಸ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ
ಕಾಮಗಾರಿಗಳು ಆರಂಭವಾಗಲಿವೆ. ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಹಂತ ಹಂತವಾಗಿ ಕೆಲಸ ಆರಂಭಿಸಲಾಗುವುದು ಎಂದರು.
ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಒಂದಿಷ್ಟು ಅನಾನುಕೂಲತೆಗಳು ಆಗಲಿವೆ. ಸಾರ್ವಜನಿಕರು, ವ್ಯಾಪಾರಿಗಳು ಸಹಕಾರ ನೀಡಬೇಕು. ಸಂಚಾರ ದಟ್ಟಣೆಯನ್ನು ಪರ್ಯಾಯ ರಸ್ತೆಗಳಿಗೆ ವರ್ಗಾಯಿಸಬೇಕು. ಅಧಿಕಾರಿಗಳು, ಗುತ್ತಿಗೆದಾರರು ಕೂಡ ತೀವ್ರ ಸಮಸ್ಯೆ ಉಂಟು ಮಾಡಿ ಜನರಿಗೆ ತೊಂದರೆ ಕೊಡಬಾರದು. ರಸ್ತೆ ಕಾಮಗಾರಿಯಾಗಿರುವ ಕಾರಣ ಆದಷ್ಟು ಬೇಗ ಪೂರ್ಣಗೊಳಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು. ರಸ್ತೆ ನಿರ್ಮಾಣ ಹೆಸರಲ್ಲಿ ಮರ ಕಡಿಯುವುದು ಬೇಡ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಬೀರಪ್ಪ ಖಂಡೇಕಾರ, ಸಂತೋಷ ಚವ್ಹಾಣ, ಉಮಾ ಮುಕುಂದ, ಮೀನಾಕ್ಷಿ ಒಂಟಮುರಿ, ಮಹಾದೇವ ನರಗುಂದ, ಮಾಜಿ ಉಪ ಮೇಯರ್ ಮೇನಕಾ ಹುರಳಿ, ವಲಯ ಸಹಾಯಕ ಆಯುಕ್ತ ಎಸ್ .ಸಿ.ಬೇವೂರು ಸೇರಿದಂತೆ ಇನ್ನಿತರರಿದ್ದರು.
ಉದ್ಘಾಟನೆ-ಭೂಮಿಪೂಜೆ-ಕಿಟ್ ವಿತರಣೆ
ಮೊದಲ ಹಂತದಲ್ಲಿ ಪೂರ್ಣಗೊಂಡ ಗದಗ ರಸ್ತೆ ರೈಲ್ವೆ ಕೆಳಸೇತುವೆ-ಸರ್ವೋದಯ ವೃತ್ತವರೆಗೆ ಕಾಂಕ್ರೀಟ್ ರಸ್ತೆ ಉದ್ಘಾಟನೆ ನೆರವೇರಿಸಿದರು. ನಂತರ ಬಾರಕೂಟ್ರಿ-ಭವಾನಿ ನಗರ ಸಂಪರ್ಕ ರಸ್ತೆ ಕಾಂಕ್ರೀಟ್ ರಸ್ತೆ ಹಾಗೂ ಗಟಾರು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬದಾಮಿ ನಗರದ ಧಾರವಾಡ ಒನ್ ಕಚೇರಿ ಆವರಣದಲ್ಲಿ ಮಹಾನಗರ ಪಾಲಿಕೆ ಅನುದಾನದಲ್ಲಿ 10 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಿಸಿದರು.