ಹುಬ್ಬಳ್ಳಿ: ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಪರಿಹಾರ ಕ್ರಮದ ಗಂಭೀರ ಚಿಂತನೆ ಇಲ್ಲವಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಗಮನ ಸೆಳೆಯುವ, ಭೂ ತಾಯಿ ಜ್ವರ ತಗ್ಗಿಸಲು ಪರಿಹಾರ ಕ್ರಮಗಳ ಬಗ್ಗೆ ಮಾ.24ರಂದು ಚಿಂತನ-ಮಂಥನ ನಡೆಯಲಿದೆ. ಹಸಿರು ಕರ್ನಾಟಕ ಪಕ್ಷ ಬೀಜ ಬಿತ್ತನೆ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್ ವೇದಿಕೆಯಾಗಲಿದೆ.
ಭೂಮ್ತಾಯಿಗೆ ಜ್ವರ ಹೆಚ್ಚಿಸುವ ಸ್ಥಿತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ ಎಂಬ ಪರಿಸರ ವಿಜ್ಞಾನಿಗಳ ಎಚ್ಚರಿಕೆ ನೀಡಿಯಾಗಿದೆ. ಇಷ್ಟಾದರೂ ಯಾವುದೇ ರಾಜಕೀಯ ಪಕ್ಷಗಳು ಪರಿಸರ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ವಿಚಾರಕ್ಕೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡುತ್ತಿಲ್ಲ. ರಾಜಕೀಯ ಪಕ್ಷಗಳ ಮೇಲೆ ಒತ್ತಡ ತರುವ, ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸಮಾನ ಮನಸ್ಕ ಪರಿಸರ ಪ್ರೇಮಿಗಳು ಮುಂದಡಿ ಇರಿಸಿದ್ದಾರೆ.
ಪರಿಸರ ಕಾಳಜಿ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಕಣ್ಣು ತೆರೆಸಬೇಕು, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪರಿಸರ ಕಾಳಜಿಗೆ ತಮ್ಮ ನಿಲುವೇನೆಂಬುದನ್ನು ಸ್ಪಷ್ಟಪಡಿಸಬೇಕೆಂಬ ನಿಟ್ಟಿನಲ್ಲಿ ಧಾರವಾಡದ ಡಾ| ಸಂಜೀವ ಕುಲಕರ್ಣಿ ಅವರು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾ.24ರಂದು ಸಂಜೆ 4:00ಗಂಟೆಗೆ ಚಿಂತನಾ ಸಭೆಯೊಂದಿಗೆ ರಾಜ್ಯದ ಗಮನ ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆ. ಪರಿಸರ ಪ್ರೇಮಿಗಳಾದ ನಾಗೇಶ ಹೆಗಡೆ, ಅನಿತಾ ಪೈಲೂರು, ರೂಪಾ ಹಾಸನ, ವೆಂಕಟೇಶಮೂರ್ತಿ, ಡಾ| ಮೀನಾಕ್ಷಿ ಭರತ್ ಇನ್ನಿತರರು ಸಾಥ್ ನೀಡಲಿದ್ದಾರೆ.
ಮೈ ನಡುಗಿಸುತ್ತಿದೆ ಭವಿಷ್ಯದ ಕರಾಳತೆ: ಪರಿಸರ ವಿಜ್ಞಾನಿಗಳ ಪ್ರಕಾರ ಕಳೆದ 250-300 ವರ್ಷಗಳಲ್ಲಿ ಭೂಮಿಯ ಸರಾಸರಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದ್ದು, ಇನ್ನು ಒಂದು ಡಿಗ್ರಿ ತಾಪಮಾನ ಹೆಚ್ಚಾದರೆ ಭವಿಷ್ಯದಲ್ಲಿ ಜೀವಸಂಕುಲಕ್ಕೆ ಬಹುದೊಡ್ಡ ಕುತ್ತು ಎದುರಾಗಲಿದೆ ಎಂಬುದಾಗಿದೆ. ಹವಾಮಾನದ ತೀವ್ರತರ ಬದಲಾವಣೆ, ಮಳೆ ಕೊರತೆ-ಬರ ಹೆಚ್ಚಳದಿಂದ ಕೃಷಿ ಸಂಕಷ್ಟಕ್ಕೆ ಸಿಲುಕಿದೆ. ಕೃಷಿಕರ ನಗರ ವಲಸೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಲಸೆ ಪ್ರಮಾಣ ಹೆಚ್ಚುತ್ತ ಸಾಗಿದರೆ ಭವಿಷ್ಯದಲ್ಲಿ ಕೃಷಿ ಕಾಯಕ ದೊಡ್ಡ ಅಪಾಯಕ್ಕೆ ಸಿಲುಕಲಿದ್ದು, ಆಹಾರ ಭದ್ರತೆ ಎದುರಾಗಲಿದೆ.
ದೇಶದಲ್ಲಿ 1947ರಲ್ಲಿ ಶೇ. 22ರಷ್ಟು ಇದ್ದ ಅರಣ್ಯ ಪ್ರದೇಶ ಇದೀಗ ಶೇ.8ಕ್ಕೆ ಕುಸಿದಿದೆ. ಒಂದು ಕಡೆ ಅರಣ್ಯ ನಾಶವಾಗುತ್ತಿದ್ದರೆ, ಕೃಷಿ ಜಮೀನುಗಳ ಬದುವುಗಳು, ಬದುವಿನ ಮೇಲಿನ ಮರಗಳು ಮಾಯವಾಗಿವೆ. ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿದೆ. ಸಣ್ಣ ನದಿಗಳು ಬತ್ತುತ್ತಿವೆ. ದೊಡ್ಡ ನದಿಗಳಲ್ಲೂ ನೀರಿನ ಹರಿವು ಗಣನೀಯವಾಗಿ ತಗ್ಗತೊಡಗಿದೆ. ಬರದ ಸಮಸ್ಯೆ ಒಂದು ಕಡೆಯಾದರೆ, ಕೆಲವೇ ಗಂಟೆಗಳಲ್ಲಿ ಬೀಳುವ ಜೋರಾದ ಮಳೆ ಮತ್ತೂಂದು ರೀತಿಯ ಅನಾಹುತ ಸೃಷ್ಟಿಸುತ್ತಿದೆ. ಇದಕ್ಕೆ ಪರಿಹಾರ ಭಾಗವಾಗಿ ದೇಶ-ವಿಶ್ವದ ಅನೇಕ ಕಡೆಗಳಲ್ಲಿ ಯತ್ನಗಳು ನಡೆಯುತ್ತಿವೆ. ಇದಕ್ಕೆ ಪೂರಕರವಾಗಿ ಕರ್ನಾಟಕದಲ್ಲೂ ಪರಿಹಾರ ಕ್ರಮದಯತ್ನಕ್ಕೆ ಶ್ರೀಕಾರ ಹಾಕಲಾಗುತ್ತಿದೆ.
ಪರಿಸರ ಕಾಳಜಿ ಕುರಿತ ಪಟ್ಟಿ ಬಿಡುಗಡೆ?:
ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ರಾಜಕೀಯ ಪಕ್ಷಗಳ ಮೇಲೆ ಯಾವೆಲ್ಲ ಬೇಡಿಕೆಗಳೊಂದಿಗೆ ಒತ್ತಡ ತರಬೇಕು, ಏನೆಲ್ಲ ಅಂಶಗಳೊಂದಿಗೆ ಪರಿಸರ ಕಾಳಜಿ ಪಟ್ಟಿ ಬಿಡುಗಡೆ ಮಾಡಬೇಕೆಂಬುದರ ಚಿಂತನೆ ನಡೆದು ಮಹತ್ವದ ತೀರ್ಮಾನಗಳು ಹೊರ ಬೀಳುವ ಸಾಧ್ಯತೆ ಇದೆ. ಪ್ರತಿ ಗ್ರಾಮದಲ್ಲಿ ಮರ, ನೀರು ಮತ್ತು ಮಣ್ಣು ಬಳಗ ಹಾಗೂ ಕಾಂಪೋಸ್ಟ್ ತಯಾರಿಕಾ ಘಟಕ ಸ್ಥಾಪಿಸಬೇಕು, ಗ್ರಾಮದವರೇ ಅವುಗಳ ನಿರ್ವಹಣೆ ಮಾಡುವಂತಿರಬೇಕು, ಮನುಷ್ಯರ ಮಲ-ಮೂತ್ರಗಳನ್ನೂ ಕಾಂಪೋಸ್ಟ್ ಮಾಡಿ ಕೃಷಿ ಭೂಮಿಗೆ ಸೇರಿಸುವ ನಿಟ್ಟಿನಲ್ಲಿ ಇಕೋಸ್ಯಾನ್ ಮತ್ತು ಕಾಂಪೋಸ್ಟ್ ಶೌಚಾಲಯ ಮಾದರಿಗಳ ಬಗ್ಗೆ ಹೆಚ್ಚಿನ ಸಂಶೋಧನೆ, ಪ್ರಚಾರ ಕೈಗೊಳ್ಳಬೇಕು. ವಾಯುಮಾಲಿನ್ಯ ಪ್ರಮಾಣ ದರ್ಶಕಗಳ ಅಳವಡಿಕೆ ಇನ್ನಿತರ ಬೇಡಿಕೆಗಳೊಂದಿಗೆ ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆಯಲ್ಲಿ ಇವುಗಳ ಸೇರ³ಡೆಗೆ ಒತ್ತಾಯಿಸಲಾಗುತ್ತದೆ.
ಬೇಸಿಗೆ ಮುನ್ನವೇ ಸಾವಿರಾರು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇದನ್ನು ಯಾವ ರೀತಿಯ ಪ್ರಗತಿ ಎಂದು ಪರಿಗಣಿಸಬೇಕು. ಪರಿಸರ ಕಾಳಜಿ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಉದಾಸೀನತೆ ಬದಲು ದೂರಗಾಮಿ ಪರಿಹಾರ ಯೋಜನೆ ಹೊಂದಬೇಕಿವೆ. ಮುಂದಿನ 25 ವರ್ಷಗಳ ಅಜೆಂಡಾ ತಯಾರಿಸಬೇಕಿದೆ. ಪ್ರಕೃತಿ ವೇದನೆ ಕೇಳಿಸಿಕೊಳ್ಳುವ, ಪರಿಸರ ಕಾಳಜಿಗೆ ಆದ್ಯತೆಯ ಸಂವೇದನೆ ರಾಜಕಾರಣಿಗಳಲ್ಲಿ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಪುಟ್ಟ ಹೆಜ್ಜೆಯೊಂದು ಇರಿಸಲಾಗುತ್ತಿದೆ.
. ಡಾ| ಸಂಜೀವ ಕುಲಕರ್ಣಿ,
ಪರಿಸರ ಪ್ರೇಮಿ
ಅಮರೇಗೌಡ ಗೋನವಾರ