ಹುಬ್ಬಳ್ಳಿ: ರಾಜ್ಯ ಸರ್ಕಾರ ನೇಹಾಳ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾರಣ ಇದನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಇಲ್ಲಿನ ಬಿಡ್ನಾಳ ಬಸವ ನಗರದಲ್ಲಿರುವ ಮೃತ ನೇಹಾಳ ನಿವಾಸಕ್ಕೆ ಮಂಗಳವಾರ ಭೇಟಿ ಕೊಟ್ಟು, ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ನೇಹಾಳ ಹತ್ಯೆ ಬಗ್ಗೆ ನಡೆದುಕೊಂಡ ನಡವಳಿಕೆ ಸರಿಯಾಗಿರಲಿಲ್ಲ. ಸಿಎಂ, ಡಿಸಿಎಂ ಸೇರಿದಂತೆ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಇದರ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ನಡೆಸಿ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ್ದೇವು. ಆದರೆ ಸಿಐಡಿಗೆ ವಹಿಸಿದೆ. ಅದು ನಿಧಾನವಾಗಿ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದರು.
ನೇಹಾಳ ತಂದೆ ಸ್ವತಃ ನಾಲ್ಕೈದು ಜನರ ಮೇಲೆ ಆರೋಪ ಮಾಡಿದ್ದಾರೆ. ಹಂತಕನಿಗೆ ತಕ್ಕ ಶಿಕ್ಷೆ ಆಗಬೇಕೆಂದು ತಂದೆ-ತಾಯಿ ಆಗ್ರಹಿಸಿದ್ದಾರೆ. ಆದರೆ ಇದುವರೆಗೂ ಹಂತಕ ಹೊರತುಪಡಿಸಿ ಯಾರನ್ನು ಬಂಧಿಸಿಲ್ಲ ಎಂದರು.
ಕೊಲೆ ಕೊಲೆಯೇ? ಅದಕ್ಕೆ ಜಾತಿ ಬಣ್ಣ ಬಳಿಯುವ ಅವಶ್ಯಕತೆಯಿಲ್ಲ. ಸರ್ಕಾರ ಈ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು. ರಾಜ್ಯದಲ್ಲಿ ದಿನೇ ದಿನೇ ಇಂತಹ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ನಮ್ಮದೇ ಸರ್ಕಾರವಿದೆ. ಏನು ಬೇಕಾದರೂ ಮಾಡಬಹುದೆಂಬ ಭಾವನೆ ಸರಿಯಲ್ಲ. ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚಿದಾಗ, ಸ್ವತಃ ತಮ್ಮ ಪಕ್ಷದ ದಲಿತ ಶಾಸಕನ ಪರ ಧ್ವನಿ ಎತ್ತದೆ ಅಲ್ಪಸಂಖ್ಯಾತರ ಓಲೈಕೆ ಮಾಡಿದರು. ಇದು ಕಾಂಗ್ರೆಸ್ ನ ಸಂಸ್ಕೃತಿ ಎಂದು ಹರಿಹಾಯ್ದರು.
ವಿದ್ಯಾರ್ಥಿಯೊಬ್ಬಳ ಹಾಡಹಗಲೇ ಹತ್ಯೆಯಾದಾಗ ಸರ್ಕಾರವೇ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಾಗ ನಾವು ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆ? ಮಾನವೀಯತೆ ಉಳ್ಳವರು ಖಂಡಿಸಲೇ ಬೇಕಾಗುತ್ತದೆ. ಇಂತಹ ಪ್ರಕರಣಕ್ಕೆ ಇತಿಶ್ರೀ ಹಾಕಬೇಕು ಎಂದರು.
ನಾಲಾಯಕ್ ಸಿಎಂ ಎಂದು ನೀವು ಹೇಳಿಕೆ ನೀಡಿದ ಬಗ್ಗೆ ಸಚಿವ ಲಾಡ್ ಅವರು ಯಡಿಯೂರಪ್ಪ ಇಲ್ಲದಿದ್ದರೆ ವಿಜಯೇಂದ್ರ ಜೀರೋ ಎಂದಿದ್ದಾರಲ್ಲ ಎಂದಿದ್ದಕ್ಕೆ, ನಾನು ಹೀರೋ ಎಂದು ಯಾವಾಗ ಹೇಳಿದ್ದೇನೆ? ಅವರು ಪಿಎಂ ಬಗ್ಗೆ ಏಕವಚನದಲ್ಲಿ ಮಾತನಾಡಬಹುದು. ನಾವು ಅದಕ್ಕೆ ಸುಮ್ಮನೆ ಕುಳಿತುಕೊಳ್ಳಬೇಕೆ ಎಂದು ಪ್ರಶ್ನಿಸಿದರು.