ಬಂಟ್ವಾಳ: ಇತ್ತೀಚೆಗೆ ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ಫಲಿತಾಂಶ ನಮಗೆಲ್ಲ ತಿಳಿದಿದೆ. ಹರ್ಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹರ್ಯಾಣದಲ್ಲಿ ಹಗಲುಗನಸು ಕಾಣುತ್ತಿದ್ದ ಕಾಂಗ್ರೆಸ್ ಸೋಲು ಕಂಡಿದೆ. ಕಾಶ್ಮೀರದಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ನಿಂತಿದೆ. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಂಟ್ವಾಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸದನದಲ್ಲೇ ಒಪ್ಪಿದ್ದಾರೆ. ಮೈಸೂರಿನ ಮುಡಾ ಹಗರಣದಲ್ಲೂ ಸಿದ್ದರಾಮಯ್ಯ ಅದೇ ರೀತಿ ಹೇಳಿದ್ದರು. ಆದರೆ ಯಾವುದೇ ಪರಿಹಾರ ನಿರೀಕ್ಷೆ ಮಾಡದೇ ನಿವೇಶನ ಹಿಂದೆ ಕೊಟ್ಟಿದ್ದಾರೆ. ಮೊದಲು ಪರಿಹಾರ ಕೊಡಿ ಎಂದಿದ್ದ ಸಿದ್ದರಾಮಯ್ಯ ಈಗ ಪರಿಹಾರ ಕೇಳದೇ ಹಿಂದಿರುಗಿಸಿದ್ದಾರೆ. ಈ ಮೂಲಕ ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಮೊನ್ನೆ ರಾಜುಕಾಗೆ ಸ್ವತಃ ಅನುದಾನ ಸಿಗುತ್ತಿಲ್ಲ ಹೇಳಿದ್ದಾರೆ. ಕ್ಷೇತ್ರದಲ್ಲಿ ತಲೆ ಎತ್ತಿನಡೆಯಲಾಗದೇ ಆತ್ಮಹತ್ಯೆ ಪರಿಸ್ಥಿತಿ ಇದೆ ಅಂದಿದ್ದಾರೆ ಎಂದು ಟಾಂಗ್ ಕೊಟ್ಟರು.
ಕ್ಯಾಬಿನೆಟ್ ನಲ್ಲಿ ಹುಬ್ಬಳ್ಳಿ ಗಲಭೆಯ ಆರೋಪಿಗಳ ಕೇಸು ವಾಪಾಸ್ ಪಡೆಯಲಾಗಿದೆ. ದೇಶದ್ರೋಹಿಗಳ ಕೇಸುಗಳನ್ನು ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಎನ್ಐಎ ಸೇರಿ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಕೇಸು ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಜನವಿರೋಧಿ ನೀತಿ ಇದು. ಇಂಥ ಹಿಂದೂ ವಿರೋಧಿ, ಭ್ರಷ್ಟ ಸರ್ಕಾರದ ವಿರುದ್ದ ರಾಷ್ಟ್ರಪತಿಗಳಿಗೆ ದೂರು ಕೊಡುತ್ತೇವೆ. ಭ್ರಷ್ಟ ಸರ್ಕಾರವನ್ನು ವಜಾ ಮಾಡಲು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ. ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾದ ಅಗತ್ಯ ಇದೆ ಎಂದು ವಾಗ್ದಾಳಿ ನಡೆಸಿದರು.
ಪರಿಷತ್ ಉಪಚುನಾವಣೆಯ ಕ್ಷೇತ್ರವನ್ನು ಹಾಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿನಿಧಿಸ್ತಿದ್ದರು. ಈ ಸಲಿ ಹಿಂದುತ್ಬದ ಕಟ್ಟಾಳು ಕಿಶೋರ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದೇವೆ. ಹಾಗಾಗಿ ಇಲ್ಲಿ ನಾವು ದೊಡ್ಡ ಅಂತರದಲ್ಲಿ ಮತ್ತೊಮ್ಮೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಭಯ ಸದನಗಳ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಉಸ್ತುವಾರಿ ಡಾ.ಸುಧಾಕರ ರೆಡ್ಡಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲೆಯ ಸಂಸದರು, ಶಾಸಕರು, ಇತರ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.