ಮುಂಬಯಿ: ಶಿವಸೇನೆ(ಶಿಂಧೆ) ಬಣದ ನಾಯಕಿ ಶೈನಾ ಎನ್‌ಸಿ ಅವರ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಗುರಿಯಾದ ಬಳಿಕ ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಶನಿವಾರ(ನ2 ) ಕ್ಷಮೆಯಾಚಿಸಿದ್ದು, ಯಾರನ್ನೂ ದೂಷಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
“ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಮಹಿಳೆಯರನ್ನು ಅವಮಾನಿಸಿಲ್ಲ” ಎಂದು ಸಾವಂತ್ ಹೇಳಿದ್ದಾರೆ.
“ರಾಜಕೀಯ ಲಾಭಕ್ಕಾಗಿ ಇದನ್ನು ಮಾಡಲಾಗಿದೆ, ನನಗೆ ಅಂತಹ ಉದ್ದೇಶ ಇರಲಿಲ್ಲ, ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ” ಎಂದು ಸಾವಂತ್ ಹೇಳಿದ್ದಾರೆ.
ಸಾವಂತ್ ಹೇಳಿಕೆಯನ್ನು ಆಡಳಿತಾರೂಢ ಮೈತ್ರಿಕೂಟ ಮಾಹಾಯುತಿ ಟೀಕಾಸ್ತ್ರವನ್ನಾಗಿ ಮಾಡಿಕೊಂಡು ಮಾಹಾ ವಿಕಾಸ್ ಅಘಾಡಿ ಮೈತ್ರಿಕೂಟದ ವಿರುದ್ಧ ಪ್ರಯೋಗಿಸುತ್ತಿದೆ.
ಶೈನಾ ಎನ್.ಸಿ.ರನ್ನು “ಇಂಪೋರ್ಟೆಡ್ ಮಾಲ್’ ಎಂದು ಅರವಿಂದ್ ಸಾವಂತ್ ಟೀಕಿಸಿದ್ದರು. ಹೇಳಿಕೆ ಭಾರೀ ವಿವಾದ ಎಬ್ಬಿಸಿತ್ತು. ಶೈನಾ ಚುನಾವಣ ಆಯೋಗಕ್ಕೆ ದೂರು ನೀಡಿದ್ದಾರೆ.
ಬಿಜೆಪಿ ಮಾಜಿ ನಾಯಕಿ ಶೈನಾ, ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆ ಬಣಕ್ಕೆ ಸೇರಿ ಮುಂಬಾದೇವಿ ಇಂದ ಸ್ಪರ್ಧಿಸಿರುವ ಬಗ್ಗೆ ಲೇವಡಿ ಮಾಡಿದ ಅರವಿಂದ್ “ಶೈನಾ ಜೀವನ ಬಿಜೆಪಿಯಲ್ಲಿ ಕಳೆದರು ಈಗ ಶಿಂಧೆ ಬಣಕ್ಕೆ ಪಕ್ಷಾಂತರ ಆಗಿದ್ದಾರೆ. ಬೆಲೆ ಇರುವುದು ಒರಿಜಿನಲ್‌ಗೆ ಮಾತ್ರ. ಆಕೆ ‘ಇಂಪೋರ್ಟೆಡ್ ಮಾಲ್’ ಎಂದಿದ್ದರು.