ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಕಳೆದೊಂದು ದಶಕದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಬಾರಿಯೂ ತನ್ನ ವಿಜಯ ಯಾತ್ರೆ ಮುಂದುವರಿಸುವ ನಿಟ್ಟಿನಲ್ಲಿ ಮಿಷನ್-60 ಘೋಷಣೆಯೊಂದಿಗೆ ಅತ್ಯುತ್ಸಾಹದಲ್ಲಿದೆ. ಇನ್ನೊಂದು ಕಡೆ ತಪ್ಪಿದ ಅಧಿಕಾರ ಮತ್ತೆ ಪಡೆಯುವ ಸಾಹಸಕ್ಕೆ ಕಾಂಗ್ರೆಸ್‌ಮುಂದಾಗಿದೆ. ಇದರ ನಡುವೆ ಜೆಡಿಎಸ್, ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಆಮ್‌ಆದ್ಮಿ ಪಕ್ಷ, ಎಐಎಂಐಎಂ, ಆರ್‌ಪಿಐ ಇನ್ನಿತರೆ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಸೆಣೆಸಲು ಸಜ್ಜಾಗಿವೆ.
ಕಳೆದ ಬಾರಿಯ ಗೆಲುವು, ಬದಲಾದ ರಾಜಕೀಯ ಸ್ಥಿತಿ, ಅಭಿವೃದ್ಧಿ ಯೋಜನೆಗಳ ಲೆಕ್ಕಾಚಾರದಲ್ಲಿ ಬಿಜೆಪಿ ಈ ಬಾರಿ ಗೆಲುವು ಸುಲಭವಾಗಲಿದೆ ಎಂಬ ಚಿಂತನೆಯಲ್ಲಿದ್ದರೆ, ಬಿಜೆಪಿ ಸರಕಾರದ ವೈಫಲ್ಯ,ಅವಳಿನಗರ ಸಮಸ್ಯೆಗಳಿಗೆ ಸ್ಪಂದನೆ ಕೊರತೆ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರರ ಒಲವು ಗಳಿಸುವ ಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್ ಸೇರಿದಂತೆ ಹೊಸ ಪಕ್ಷಗಳ ಸ್ಪರ್ಧೆಯ ನಡುವೆ ಬಿಜೆಪಿಯ ಮಿಷನ್-60 ಸಾಧ್ಯವಾದೀತೆ? ಬಿಜೆಪಿ ಗುರಿಯ ಆಸುಪಾಸು ತಲುಪುವ ಉತ್ಸಾಹದಲ್ಲಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಅಧಿಕಾರ ನಮ್ಮದೇ ಎನ್ನುತ್ತಿವೆ ಕಾಂಗ್ರೆಸ್.
ಅಧಿಕಾರ ಹಿಡಿಯಲು ಸರ್ಕಸ್ ಶುರು: 2013ರಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಹುಬ್ಬಳ್ಳಿಯವರೇ ಆದ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯೂ ಆಗಿದ್ದರು. ಪಾಲಿಕೆ ಚುನಾವಣೆಯಲ್ಲಿ ಒಟ್ಟು 67 ಸ್ಥಾನಗಳಲ್ಲಿ ಸುಮಾರು 40-45 ಸ್ಥಾನಗಳ ಗೆಲುವಿನ ನಿರೀಕ್ಷೆಯೊಂದಿಗೆ ಸ್ಪರ್ಧೆಗಿಳಿದಿದ್ದ ಬಿಜೆಪಿ 33 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಧಿಕಾರದ ಉತ್ಸಾಹದಲ್ಲಿದ್ದ ಕಾಂಗ್ರೆಸ್ 22 ಸ್ಥಾನ ಗಳಿಸಿದ್ದರೆ, ಜೆಡಿಎಸ್ ಕೇವಲ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಕೆಜೆಪಿ, ಬಿಜೆಪಿ ಬಂಡಾಯ ಹಾಗೂ ಪಕ್ಷೇತರರು ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಗೆಲುವಿನ ಓಟಕ್ಕೆ ಸುಮಾರು 8-9 ವಾರ್ಡ್‌ಗಳಲ್ಲಿ ಕೆಜೆಪಿ ಬ್ರೇಕ್ ಹಾಕಿತ್ತು. ನಿರೀಕ್ಷಿತ ಸ್ಥಾನಗಳ ಗೆಲವು ಸಾಧ್ಯವಾಗದಿದ್ದರೂ ಬಿಜೆಪಿ ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅವಳಿನಗರದಲ್ಲಿ 82 ವಾರ್ಡ್‌ಗಳಾಗಿವೆ. ಅಧಿಕಾರ ಹಿಡಿಯಲು ಬಿಜೆಪಿ-ಕಾಂಗ್ರೆಸ್ ತಮ್ಮದೇ ಕಾರ್ಯತಂತ್ರ-ಸರ್ಕಸ್‌ಗೆ ಮುಂದಾಗಿವೆ. ಒಂದು ವೇಳೆ ಅತಂತ್ರ ಸ್ಥಿತಿ ಎದುರಾದರೆ ತನಗೆ ಬೇಡಿಕೆ ಖಚಿತ ಎಂಬ ನಿರೀಕ್ಷೆಯಲ್ಲಿ ಜೆಡಿಎಸ್ ಇದೆಯಾದರೂ ಈ ಬಾರಿ ಅದು ಇದ್ದ ಸ್ಥಾನಗಳನ್ನಾದರೂ ಉಳಿಸಿಕೊಳ್ಳುವುದೇ ಅಥವಾ ಸ್ಥಾನ ಹೆಚ್ಚಳ ಸಾಧನೆ ತೋರುವುದೇ ಎಂದು ನೋಡಬೇಕಿದೆ.
ಪ್ರಮುಖ ಮೂರು ಪಕ್ಷಗಳ ನಡುವೆ ಈ ಬಾರಿ ಆಮ್‌ಆದ್ಮಿ ಪಕ್ಷ, ಎಐಎಂಐಎಂ, ಆರ್‌ಪಿಐ ಇನ್ನಿತರೆ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಪೈಪೋಟಿ ಜೋರಾಗಿಯೇ ಇದೆ. ಎರಡು ಪಕ್ಷಗಳಲ್ಲಿ ಟಿಕೆಟ್ ಯಾರಿಗೆ ಎಂಬ ಚಿಂತನ-ಮಂಥನ ನಡೆದಿದ್ದು, ಗೆಲ್ಲುವ ಕುದುರೆಗೆ ಆದ್ಯತೆ ನೀಡಲು ಎರಡು ಪಕ್ಷಗಳು ಮುಂದಾಗಿವೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆ.19 ಇಲ್ಲವೆ 20ರಂದು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಿಕೆಟ್ ಯಾರಿಗೆ ಎಂಬುದನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರ ನಿರ್ಣಯಕ್ಕೆ ಪಕ್ಷ ಮನ್ನಣೆ ನೀಡಲಿದೆ ಎಂದು ಹೇಳಲಾಗುತ್ತಿದ್ದು, ಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ-ಧಾರವಾಡ ಕೇಂದ್ರ, ಪಶ್ಚಿಮ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳು ಯಾರೆಂಬುದನ್ನು ಕೆಪಿಸಿಸಿ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ. ಹು.ಧಾ.ಪೂರ್ವ ವಿಧಾನಸಭೆ ಕ್ಷೇತ್ರ ಹೊರತುಪಡಿಸಿ ಪಾಲಿಕೆ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಮೂವರು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ಕಾಂಗ್ರೆಸ್ ಪಕ್ಷ ಮೂರು ಕ್ಷೇತ್ರಗಳಿಗೆ ಪಕ್ಷದ ಸ್ಥಳೀಯ ಮುಖಂಡರ ಸಮಿತಿಗಳನ್ನು ಮಾಡಿದ್ದು, ಸಮಿತಿ ಸೂಚಿಸುವ ಮೂರು ಹೆಸರುಗಳಲ್ಲಿ ಕೆಪಿಸಿಸಿ ಒಂದು ಹೆಸರನ್ನು ಅಂತಿಮಗೊಳಿಸಲಿದೆ ಎನ್ನಲಾಗಿದೆ.
ಆಮ್‌ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದರೆ, ಆರ್‌ಪಿಐ ಮೊದಲ ಪಟ್ಟಿ ಪ್ರಕಟಿಸಿದೆ. ಎಐಎಂಐಎಂ ಸೇರಿದಂತೆ ವಿವಿಧ ಪಕ್ಷಗಳು ಈ ನಿಟ್ಟಿನಲ್ಲಿ ಇದುವರೆಗೂ ಏನನ್ನು ಹೇಳಿಲ್ಲ.