Advertisement

ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಯಾರೇ ಗೆದ್ರೂ ಇತಿಹಾಸ

06:00 AM May 03, 2018 | Team Udayavani |

ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರೇ ಗೆದ್ದರೂ ಇತಿಹಾಸ. ಸತತ ಐದು ಬಾರಿ ಗೆದ್ದ ದಾಖಲೆ ಹೊಂದಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು ಈ ಬಾರಿ ಆರನೇ ಗೆಲುವಿಗೆ ಬೆವರಿಳಿಸಬೇಕಾಗಿದೆ. 

Advertisement

ನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಈ ಕ್ಷೇತ್ರದ್ದು. ಕ್ಷೇತ್ರ ಪುನರ್‌ ವಿಂಗಡಣೆಗೆ ಮುನ್ನ ಇದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರವಾಗಿತ್ತು. ಇದೇ ಕ್ಷೇತ್ರದಿಂದ ಆಯ್ಕೆಯಾದ ಎಸ್‌.ಆರ್‌.ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದರು. ಕ್ಷೇತ್ರದ ವಿಶೇಷವೆಂದರೆ ಮರು ಆಯ್ಕೆಗೆ ಮನ್ನಣೆ ನೀಡುತ್ತ ಬಂದಿರುವುದು. 1957ರಿಂದ 2013ರವರೆಗಿನ ಚುನಾವಣೆಗಳಲ್ಲಿ ಕೇವಲ ನಾಲ್ಕು ಮಂದಿಯಷ್ಟೇ ಈ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಒಬ್ಬರು ಐದು ಬಾರಿ, ಇಬ್ಬರು ಮೂರು ಬಾರಿ ಹಾಗೂ ಒಬ್ಬರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ತ್ರಿಕೋನ ಸ್ಪರ್ಧೆ: ಕ್ಷೇತ್ರದಲ್ಲಿ ಒಟ್ಟು 2,33,884 ಮತದಾರರಿದ್ದಾರೆ. ಈ ಪೈಕಿ 1,17,255 ಪುರು ಷರು ಹಾಗೂ 1,16,629 ಮಂದಿ ಮಹಿಳೆಯರು. ಜಗದೀಶ ಶೆಟ್ಟರ್‌ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಡಾ|ಮಹೇಶ ನಾಲವಾಡ, ಜೆಡಿಎಸ್‌ನಿಂದ ರಾಜಣ್ಣಾ ಕೊರವಿ, ಆಮ್‌ಆದ್ಮಿ ಪಕ್ಷದಿಂದ ಸಂತೋಷ ನರಗುಂದ ಸೇರಿದಂತೆ ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಪೈಪೋಟಿ ತೀವ್ರವಾಗಿದೆ. ಗೆಲುವಿಗಾಗಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಕಸರತ್ತು ನಡೆಸಿದ್ದಾರೆ. ಅಬ್ಬರದ ಪ್ರಚಾರಕ್ಕಿಂತಲೂ ಮನೆ-ಮನೆ ಭೇಟಿ, ಪಾದಯಾತ್ರೆ, ವಾರ್ಡ್‌ ವಾಸ್ತವ್ಯ ತಂತ್ರಗಳಿಗೆ ಮೊರೆ ಹೋಗಿದ್ದಾರೆ. 

ಅದೃಷ್ಟ ನಿರೀಕ್ಷೆ: ಶೆಟ್ಟರ್‌ ಆರನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 1994ರಲ್ಲಿ ಎಸ್‌.ಆರ್‌. ಬೊಮ್ಮಾಯಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದ ಅವರು ಈ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಆಯ್ಕೆಯಾದ ದಾಖಲೆ ಬರೆದಿದ್ದಾರೆ. ಅದಕ್ಕೂ ಮುನ್ನ ಎಂ.ಆರ್‌. ಪಾಟೀಲರು ಮೂರು ಬಾರಿ ಹಾಗೂ ಎಸ್‌.ಆರ್‌.ಬೊಮ್ಮಾಯಿ ಒಟ್ಟಾರೆ ಮೂರು ಬಾರಿ ಚುನಾಯಿತರಾಗಿದ್ದರು. 

2ನೇ ಬಾರಿಗೆ ಯತ್ನ: ಕಾಂಗ್ರೆಸ್‌ ಅಭ್ಯರ್ಥಿ ಡಾ|ಮಹೇಶ ನಾಲವಾಡ ಅವರು ಎರಡನೇ ಬಾರಿಗೆ ಶೆಟ್ಟರ್‌ ಜತೆ ಮುಖಾಮುಖೀ ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಮೊದಲ ಪ್ರಯತ್ನದಲ್ಲೇ ಸುಮಾರು 40,447 ಮತಗಳನ್ನು ಪಡೆದು  ಪೈಪೋಟಿ ನೀಡಿ ಗಮನ ಸೆಳೆದಿದ್ದರು.

Advertisement

ನಿರ್ಣಾಯಕ ಅಂಶವೇನು?
ಈ ಕ್ಷೇತ್ರದಲ್ಲಿ  ಸ್ಪರ್ಧಿಸಿರುವ ಪ್ರಮುಖ 3 ಪಕ್ಷಗಳ ಅಭ್ಯರ್ಥಿ ಗಳು ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಹಾಗಾಗಿ ಈ ಸಮುದಾಯದ ಮತಗಳು ಹಂಚಿ ಹೋದರೂ ಮುಸ್ಲಿಮರು, ಬ್ರಾಹ್ಮ ಣರು ಹಾಗೂ ಸಹಸ್ರರ್ಜುನ ಸೋಮವಂಶ ಕ್ಷತ್ರೀಯ (ಎಸ್‌ಎಸ್‌ಕೆ) ಸಮಾಜದ ಮತದಾರರು ಯಾರನ್ನು ಬೆಂಬಲಿಸುತ್ತಾರೋ ಅವರಿಗೆ ಗೆಲುವು ಖಾತ್ರಿ. 

25 ವರ್ಷಗಳಲ್ಲಿ ಕೈಗೊಂಡ  ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ. ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಆರನೇ ಬಾರಿಗೂ ಜನ ನನ್ನ ಕೈ ಹಿಡಿಯಲಿದ್ದಾರೆ. 
– ಜಗದೀಶ ಶೆಟ್ಟರ, ಬಿಜೆಪಿ ಅಭ್ಯರ್ಥಿ

ಶೆಟ್ಟರ ಅವರನ್ನು 5 ಬಾರಿ ಆಯ್ಕೆ ಮಾಡಿದರೂ ಅಭಿವೃದ್ಧಿ ಆಗದಿರುವ ಬಗ್ಗೆ ಜನರ ಆಕ್ರೋಶವಿದೆ. ಜತೆಗೆ ಸಿದ್ದರಾಮಯ್ಯ ಸರ್ಕಾರ ನೀಡಿದ ಜನಪರ ಯೋಜನೆಗಳ‌ ನೆರವು ನನ್ನನ್ನು ಗೆಲ್ಲಿಸಲಿದೆ. 
– ಮಹೇಶ ನಾಲವಾಡ, ಕಾಂಗ್ರೆಸ್‌ ಅಭ್ಯರ್ಥಿ

ಶೆಟ್ಟರ ಅವರು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಡಾ|ಮಹೇಶ ಕಳೆದ ವಿಧಾನಸಭೆ ಚುನಾವಣೆ ಬಳಿಕ ಜನತೆ ಸಂಪರ್ಕ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಜನ ನನ್ನ ಕೈಹಿಡಿಯಲಿದ್ದಾರೆ
– ರಾಜಣ್ಣಾ ಕೊರವಿ, ಜೆಡಿಎಸ್‌ ಅಭ್ಯರ್ಥಿ

ಜಾತಿವಾರು
ಗಾಯತರು: 75,000
ಬ್ರಾಹ್ಮಣರು:26,000
ಎಸ್‌ಎಸ್‌ಕೆ:20,000
ಮರಾಠರು:5,000
ಮುಸ್ಲಿಮರು:35,000
ಎಸ್ಸಿ-ಎಸ್ಟಿ:28,000
ಕ್ರಿಶ್ಚಿಯನ್‌ರು:15,000
ಜೈನರು:5,000

– ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next