Advertisement
ಜನಗಣತಿ ಪೂರ್ಣಗೊಂಡ ಬಳಿಕ 2028ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕೈಗೊಳ್ಳುವ ಸಾಧ್ಯತೆಗಳಿವೆ. ಜನಗಣತಿ ವೇಳೆ ಜಾತಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆಯೇ ಎಂಬ ಬಗ್ಗ ಸರ್ಕಾರವು ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ, ಗಣತಿ ವೇಳೆ ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳು(ಒಬಿಸಿ), ಪರಿಶಿಷ್ಟ ಜಾತಿ(ಎಸ್ಸಿ), ಪರಿಶಿಷ್ಟ ಪಂಗಡಗಳ(ಎಸ್ಟಿ) ಉಪ ಜಾತಿ ಸಮೀಕ್ಷೆಯನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅಂದರೆ, ಜನಗಣತಿ ಜೊತೆ ಜೊತೆಗೇ ಜಾತಿ ಗಣತಿಯೂ ನಡೆಯಲಿದೆಯೇ ಎಂಬ ಅನುಮಾನವನ್ನು ಇದು ಹುಟ್ಟು ಹಾಕಿದೆ.
ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತದೆ. ಅದರಂತೆ, 2021ರಲ್ಲಿ ಜನಗಣತಿಯನ್ನು ಕೈಗೊಳ್ಳಬೇಕಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಗಣತಿಯನ್ನು ಮುಂದೂಡಲಾಗಿತ್ತು. ಅಂತಿಮವಾಗಿ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಈಗ ಜನಗಣತಿಗೆ ಮುಂದಾಗಿದೆ. 2011ರಲ್ಲಿ ಕೊನೆಯ ಬಾರಿಗೆ ಗಣತಿ ನಡೆದಿತ್ತು. 2025ರಲ್ಲಿ ಜನಗಣತಿ ಮುಗಿದ ಬಳಿಕ 2035, 2045 ಹೀಗೆ 10 ವರ್ಷಗಳ ಬಳಿಕ ಮುಂಬರುವ ಗಣತಿಗಳು ನಡೆಯಲಿವೆ. ವಿಪಕ್ಷಗಳಿಂದ ಒತ್ತಡ
ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ಜನಗಣತಿಯನ್ನು ಕೈಗೊಳ್ಳಲಿದೆ ಎಂಬ ವರದಿಗಳು ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಜಾತಿಗಣತಿಗೂ ಒತ್ತಾಯಿಸುತ್ತಿವೆ. ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಟ್ವೀಟ್ ಮಾಡಿ, ಕೇಂದ್ರ ಸರ್ಕಾರವು ಸರ್ವ ಪಕ್ಷಗಳ ಸಭೆ ಕರೆದು ಜಾತಿ ಗಣತಿ ಮತ್ತು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ ಬಗ್ಗೆ ಚರ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಹೊಸ ಜನಗಣತಿ ವೇಳೆ ಜಾತಿ ಗಣತಿ ಹಾಗೂ ಕ್ಷೇತ್ರಗಳ ಪುನರ್ವಿಂಗಡಣೆಯ ಬಗ್ಗೆ ಯಾವುದೇ ಸ್ಪಷ್ಟೆಗಳಿಲ್ಲ ಎಂದು ದೂರಿದ್ದಾರೆ.