Advertisement

ಈರೇಶಗೆ ಒಲಿದ ಪಾಲಿಕೆ ಮೇಯರ್‌ ಪಟ್ಟ

09:51 AM May 29, 2022 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ನೂತನ ಮಹಾಪೌರ-ಉಪ ಮಹಾಪೌರರಾಗಿ ಬಿಜೆಪಿಯ ಈರೇಶ ಅಂಚಟಗೇರಿ ಹಾಗೂ ಉಮಾ ಮುಕುಂದ ಆಯ್ಕೆಯಾದರು.

Advertisement

ಇಲ್ಲಿನ ಪಾಲಿಕೆ ಸಭಾಭವನದಲ್ಲಿ ಶನಿವಾರ ನಡೆದ ನೂತನ ಮಹಾಪೌರ-ಉಪಮಹಾಪೌರ ಆಯ್ಕೆ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಮೂವರು ನಾಮಪತ್ರ ಸಲ್ಲಿಸಿದ್ದರು.

ಬೆಳಗ್ಗೆ 11:30 ಗಂಟೆ ಒಳಗೆ ನಾಮಪತ್ರ ಸಲ್ಲಿಸಬೇಕಾಗಿತ್ತು. ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ವಾರ್ಡ್‌ 3ರ ಸದಸ್ಯ ಈರೇಶ ಅಂಚಟಗೇರಿ, ಕಾಂಗ್ರೆಸ್‌ನಿಂದ ವಾರ್ಡ್‌ 24ರ ಮಯೂರ ಮೋರೆ, ಎಐಎಂಐಎಂನಿಂದ ವಾರ್ಡ್‌ 71ರ ಸದಸ್ಯ ನಜೀರ ಅಹ್ಮದ್‌ ಹೊನ್ಯಾಳ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ವಾರ್ಡ್‌ 44ರ ಉಮಾ ಮುಕುಂದ, ಕಾಂಗ್ರೆಸ್‌ ನಿಂದ ವಾರ್ಡ್‌ 7ರ ದೀಪಾ ನೀರಲಕಟ್ಟಿ, ಎಐಎಂಐಎಂನಿಂದ ವಾರ್ಡ್‌ 76ರ ವಹೀದಾಖಾನಂ ಕಿತ್ತೂರ ಸ್ಪರ್ಧೆಯಲ್ಲಿದ್ದರು. ಮಧ್ಯಾಹ್ನ 1:30 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆದು ಎಲ್ಲ ನಾಮಪತ್ರಗಳು ಕ್ರಮಬದ್ಧವೆಂದು ಘೋಷಿಸಲಾಯಿತು.

ಕೈ ಎತ್ತುವ ಮೂಲಕ ಆಯ್ಕೆ: ಸಭೆ ಆರಂಭವಾಗುತ್ತಿದ್ದಂತೆಯೇ ಎಲ್ಲ ನೂತನ 82 ಸದಸ್ಯರಿಂದ ಲಿಖೀತ ಪ್ರಮಾಣ ವಚನ ಮಾಡಿಸಲಾಯಿತು. ನಂತರ ಸದಸ್ಯರ ಹಾಜರಾತಿ ಪಡೆದು, ಪರ-ವಿರೋಧ ಕೈ ಎತ್ತುವ ಮೂಲಕ ಮತದಾನ ನಡೆಸಲಾಯಿತು. ಮಹಾಪೌರ ಸ್ಥಾನಕ್ಕೆ ಬಿಜೆಪಿಯ ಈರೇಶ ಅಂಚಟಗೇರಿ ಅವರ ಪರ 50, ವಿರುದ್ಧ 35 ಮತಗಳು ಬಂದವು. ಕಾಂಗ್ರೆಸ್‌ನ ಮಯೂರ ಮೋರೆ ಅವರ ಪರ 35, ವಿರುದ್ಧ 51 ಮತಗಳು ಬಂದವು. ಎಐಎಂಐಎಂನ ನಜೀರ್‌ ಅಹ್ಮದ್‌ ಹೊನ್ಯಾಳ ಪರ 3, ವಿರುದ್ಧ 83 ಮತಗಳು ಬಂದವು. ಮೂವರು ಸದಸ್ಯರು ತಟಸ್ಥರಾಗಿದ್ದರು.

ಉಪಮಹಾಪೌರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಉಮಾ ಮುಕುಂದ ಪರ 51 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ದೀಪಾ ಮುಕುಂದ ಅವರ ಪರವಾಗಿ 35 ಸದಸ್ಯರು ಕೈ ಎತ್ತಿದರು. ಎಐಎಂಐಎಂನ ವಹೀದಾಖಾನಂ ಕಿತ್ತೂರ ಅವರ ಪರವಾಗಿ 3 ಜನ ಕೈ ಎತ್ತಿದರು. ಮೂವರು ಸದಸ್ಯರು ತಟಸ್ಥರಾಗಿ ಉಳಿದರು.

Advertisement

ಅಂತಿಮವಾಗಿ ನೂತನ ಮಹಾಪೌರರಾಗಿ ಬಿಜೆಪಿಯ ಈರೇಶ ಅಂಚಟಗೇರಿ ಹಾಗೂ ಉಪ ಮಹಾಪೌರರಾಗಿ ಬಿಜೆಪಿ ಉಮಾ ಮುಕುಂದ ಅವರು ವಿಜಯಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆಗಿದ್ದ ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಬಿಸ್ವಾಸ್‌ ಘೋಷಿಸಿದರು.

ನೂತನ ಮಹಾಪೌರ-ಉಪ ಮಹಾಪೌರರ ಫಲಿತಾಂಶ ಘೋಷಣೆ ಆಗುತ್ತಿದ್ದಂತೆಯೇ ಸದನದಲ್ಲಿ ಬಿಜೆಪಿ ಸದಸ್ಯರು ಚಪ್ಪಾಳೆ ಹಾಗೂ ಮೇಜು ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದರು. ಹೊರಗಡೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ್‌ ಎರಚಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ಮಹಾಪೌರ-ಉಪಮಹಾಪೌರ ಆಯ್ಕೆ ಮತದಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ವಿಧಾನಸಭೆ ಸದಸ್ಯರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನಪರಿಷತ್ತು ಸದಸ್ಯರಾದ ಪ್ರದೀಪ ಶೆಟ್ಟರ, ಪ್ರೊ| ಎಸ್‌.ವಿ.ಸಂಕನೂರು ಪಾಲ್ಗೊಂಡಿದ್ದರು. ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಇದ್ದರು.

ನೂತನ ಮಹಾಪೌರ ಈರೇಶ ಅಂಚಟಗೇರಿ, ಉಪ ಮಹಾಪೌರ ಉಮಾ ಮುಕುಂದ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಜೆಪಿ ಶಾಸಕರು, ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಬಿಸ್ವಾಸ್‌, ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಇನ್ನಿತರರು ಹೂಗುತ್ಛ ನೀಡಿ ಅಭಿನಂದಿಸಿದರು.

ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಯಾರಿಗೆ ಯಾರ ಬೆಂಬಲ? ಪಾಲಿಕೆಯಲ್ಲಿ ಬಿಜೆಪಿ 39 ಸ್ಥಾನಗಳಲ್ಲಿ ಗೆದ್ದಿದ್ದು, ಪಕ್ಷೇತರವಾಗಿ ಗೆದ್ದ ಸದಸ್ಯೆಯೊಬ್ಬರು ಈ ಹಿಂದೆಯೇ ಬಿಜೆಪಿ ಸೇರಿದ್ದರು. ನಾಲ್ವರು ಪಕ್ಷೇತರರು, ಒಬ್ಬರು ಜೆಡಿಎಸ್‌ ಸದಸ್ಯೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಬಿಜೆಪಿಯ ಒಬ್ಬರು ಸಂಸದರು, ಮೂವರು ವಿಧಾನಸಭೆ ಸದಸ್ಯರು, ಇಬ್ಬರು ವಿಧಾನಪರಿಷತ್ತು ಸದಸ್ಯರು ಹಾಜರಿದ್ದರು.

ಅದೇ ರೀತಿ ಕಾಂಗ್ರೆಸ್‌ ಪಕ್ಷ 33 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಒಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್‌ ಸೇರಿದ್ದರು. ಒಬ್ಬರು ವಿಧಾನಸಭೆ ಸದಸ್ಯರು ಹಾಜರಿದ್ದರು. ಎಐಎಂಐಎಂನ ಮೂವರು ಸದಸ್ಯರು ತಮ್ಮ ಅಭ್ಯಥಿಗಳಿಗೆ ಬೆಂಬಲಿಸಿದರು. ಪಕ್ಷೇತರ ಒಬ್ಬ ಸದಸ್ಯರು ತಟಸ್ಥವಾಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next