ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದ ಮೂರ್‍ನಾಲ್ಕು ಜಿಲ್ಲೆಗಳಲ್ಲಿ ನದಿ ತಟದ ಗ್ರಾಮಗಳು ಜಲಾವೃತವಾಗಿವೆ.
ಬೆಳಗಾವಿ, ಬಾಗಲಕೋಟೆ, ವಿಜಯ ಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಎದುರಾಗಿದ್ದು, ನೀರಿನಿಂದ ಸುತ್ತುವರಿದು ಸಂಪರ್ಕ ಕಳೆದುಕೊಂಡ ಹಳ್ಳಿಗಳ ಜನರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲೇ 10ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. ಮಲೆನಾಡಿನ ಶಿವಮೊಗ್ಗ- ಚಿಕ್ಕ ಮಗಳೂರು ಜಿಲ್ಲೆಯಲ್ಲೂ ನದಿಗಳು ಉಕ್ಕಿಹರಿದು ಕೆಲವು ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿವೆ.
ಬೆಳಗಾವಿ ಜಿಲ್ಲೆಯಲ್ಲಿ 41 ಸೇತುವೆಗಳ ಮೇಲೆ ಪ್ರವಾಹ ಬಂದು ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಯಚೂರಿನಲ್ಲೂ ಕೆಲವು ಸೇತುವೆ ಗಳು ಮುಳುಗಡೆಯಾಗಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ವಿಜಯಪುರದಲ್ಲೂ ಯಾವುದೇ ಕ್ಷಣ ಕೆಲವು ಗ್ರಾಮಗಳು ಜಲಾವೃತವಾಗುವ ಸನ್ನಿ ವೇಶ ಸೃಷ್ಟಿಯಾಗಿದೆ. ಬಳ್ಳಾರಿ- ಕೊಪ್ಪಳ ಜಿಲ್ಲೆಯಲ್ಲೂ ಸೇತುವೆಗಳ ಮೇಲೆ ನೀರು ಬಂದು ಸುತ್ತ ಮುತ್ತಲಿನ ಗ್ರಾಮಗಳ ಜನರು ಪರದಾಡುವಂತಾಗಿದೆ.