Advertisement
ಸುಮಾರು ನಾಲ್ಕು ದಶಕಗಳಿಂದ ಸಂಗ್ರಹಗೊಂಡ ತ್ಯಾಜ್ಯದ ವಿಲೇವಾರಿ, ಸ್ವಚ್ಛತೆ ಕುರಿತಾಗಿ ಸಮಗ್ರ ಮಾಹಿತಿ ಸಂಗ್ರಹಿಸಿ ಪರಿಹಾರ ರೂಪದ ವರದಿಯನ್ನು ಮುಂದಿನ ಸಾಮಾನ್ಯ ಸಭೆಗೆ ಮಂಡಿಸುವಂತೆ ಮಹಾಪೌರ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ವೀರಣ್ಣ ಸವಡಿ ಗಮನ ಸೆಳೆಯುವ ಸೂಚನೆ ಮಂಡಿಸಿದರು.
Related Articles
Advertisement
ಕಾಂಗ್ರೆಸ್ ಸದಸ್ಯ ಸಂದೀಲ್ ಕುಮಾರ, ಎಐಎಂಐನ ನಜೀರ್ ಹೊನ್ಯಾಳ ಮಾತನಾಡಿ, ಅಧಿಕಾರಿಗಳು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾರ್ಡ್ ಗೆ 30 ಪೌರಕಾರ್ಮಿಕರು ಬೇಕು. ಆದರೆ, ವಾಸ್ತವಿಕವಾಗಿ ಅನೇಕ ವಾರ್ಡ್ ಗಳಿಗೆ 3-4 ಪೌರಕಾರ್ಮಿಕರು ಇದ್ದಾರೆ ಎಂದರು. ವಿಪಕ್ಷ ನಾಯಕ ದೊರೈರಾಜ್ ಮಣಿಕುಂಟ್ಲಾ, ಅನೇಕ ಸದಸ್ಯರು ತ್ಯಾಜ್ಯ ಸಮಸ್ಯೆ ಮೇಲೆ ಮಾತನಾಡಿದರು. ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಮಾತನಾಡಿ, ಒಟ್ಟು ಪೌರಕಾರ್ಮಿಕರಲ್ಲಿ ಶೇ.10 ಜನರು ಗೈರಾಗಿರುತ್ತಾರೆ. 50 ಪೌರಕಾರ್ಮಿಕರನ್ನು ಅತಿಗಣ್ಯರ ಆಗಮನ ಇನ್ನಿತರ ತುರ್ತು ಕಾರ್ಯಕ್ಕೆ ಕಾಯ್ದಿರಿಸಿ, ಉಳಿದ ಪೌರಕಾರ್ಮಿಕರನ್ನು 82 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗುವುದು. ವಾರ್ಡ್ ನಲ್ಲಿನ ಜನಸಂಖ್ಯೆ, ವಾರ್ಡ್ ವಿಸ್ತಾರ ಇನ್ನಿತರ ವಿಷಯಗಳನ್ನು ಗಮನಿಸಿ ಹಂಚಿಕೆ ಮಾಡುವ ಚಿಂತನೆ ಹೊಂದಿದ್ದೇವೆ. ಕಾಯಂ ಪೌರಕಾರ್ಮಿಕರು, ನೇರ ವೇತನ ಹಾಗೂ ಗುತ್ತಿಗೆಯಾಧಾರಿತ ಪೌರಕಾರ್ಮಿಕರು ಸೇರಿ ತಲಾ ಆರು ಜನರಂತೆ ಒಂದು ವಾರ್ಡ್‌ಗೆ ನಿಯೋಜನೆ ಮಾಡಲು ಯೋಜಿಸಲಾಗಿದ್ದು, ಸದಸ್ಯರು ಒಪ್ಪಿಗೆ ನೀಡಿದರೆ ಇದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.
ಮಹಾಪೌರ ಈರೇಶ ಅಂಚಟಗೇರಿ ಮಾತನಾಡಿ, ಪ್ರತಿ ವಲಯವಾರು ಸದಸ್ಯರನ್ನು ಆಹ್ವಾನಿಸಿ ಪೌರಕಾರ್ಮಿಕರ ವಿಂಗಡಣೆ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಸಂಗ್ರಹಿತ ತ್ಯಾಜ್ಯ ವಿಲೇವಾರಿ ಕುರಿತಾಗಿ ಅಗತ್ಯ ಮಾಹಿತಿ ಸಂಗ್ರಹಿಸಿ ಮುಂದಿನ ಸಾಮಾನ್ಯ ಸಭೆಗೆ ಮಂಡಿಸಬೇಕೆಂದು ಆದೇಶಿಸಿದರು. ಕನಿಷ್ಟ 500 ಜನರಿಗೆ ಒಬ್ಬರು ಪೌರಕಾರ್ಮಿಕರು ಅಗತ್ಯವಾಗಿದ್ದು, ಇದರ ಪ್ರಕಾರ ಇನ್ನೂ 300 ಪೌರಕಾರ್ಮಿಕರು ಬೇಕು. ಸುಮಾರು 250 ಆಟೋಟಿಪ್ಪರ್, ಪ್ರತಿ ಎರಡು ವಾರ್ಡ್‌ಗೆ ಒಬ್ಬ ಆರೋಗ್ಯ ನಿರೀಕ್ಷಕ, ವಲಯಕ್ಕೆ ಒಬ್ಬರು ಪರಿಸರ ಎಂಜಿನಿಯರ್ ಬೇಕಾಗಿದೆ. ಆಟೋಟಿಪ್ಪರ್‌ಗಳ ದುರಸ್ತಿ ಕಾರ್ಯವನ್ನು ಆಯಾ ವಲಯಾಧಿಕಾರಿಗಳಿಗೆ ನೀಡುವುದು ಒಳಿತು. –ವೀರಣ್ಣ ಸವಡಿ, ಪಾಲಿಕೆ ಸದಸ್ಯ