Advertisement
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಟಿಕೆಟ್ ಪಡೆಯುವಿಕೆ ಸರ್ಕಸ್, ನಾಮಪತ್ರ ಹಿಂಪಡೆಯುವಿಕೆ ಸಂಧಾನ, ಒತ್ತಡ ಯತ್ನ ಮುಗಿದಿದೆ. ಎದುರಾಳಿಗಳನ್ನು ಸ್ಪರ್ಧೆಯಿಂದ ನಿವೃತ್ತಿಗೊಳಿಸುವುದು ಹೊರತು ಪಡಿಸಿ ಸ್ಪರ್ಧಾ ಕಣ ಸ್ಪಷ್ಟ ರೂಪ ಪಡೆದಿದೆ. ಇನ್ನೇನಿದ್ದರೂ ಮತ ಸಮರ ಮಾತ್ರ.
Related Articles
Advertisement
ಸ್ಪರ್ಧಾ ಕಣದಲ್ಲಿ ಬಿಜೆಪಿಗೆ ಸುಮಾರು 9 ಜನ ಬಂಡಾಯ ಅಭ್ಯರ್ಥಿಗಳ ಬಿಸಿ ತಾಗಿದ್ದು, ಸುಮಾರು 13 ಜನ ಬಂಡಾಯ ಅಭ್ಯರ್ಥಿಗಳು ಪಕ್ಷದ ಸೂಚನೆ ಪಾಲಿಸಿ ನಾಮಪತ್ರ ಹಿಂಪಡೆದಿದ್ದಾರೆಂಬುದು ಬಿಜೆಪಿ ಹೇಳಿಕೆ. ಮಾಜಿ ಮಹಾಪೌರ ಮಂಜುಳಾ ಅಕ್ಕೂರ, ಮಾಜಿ ಉಪ ಮಹಾಪೌರ ಲಕ್ಷ್ಮೀ ಉಪ್ಪಾರ, ಪಾಲಿಕೆ ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ಮಂಜು ನಡಟ್ಟಿ, ವಿಜಯಕುಮಾರ, ಮಂಜುನಾಥ, ಯಶೋಧಾ ಗಂಡಗಾಳೇಕರ, ಸಂತೋಷ ಶೆಟ್ಟಿ ಅವರುಸ್ಪರ್ಧೆಯಲ್ಲಿಮುಂದುವರಿದಿರುವುದು ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಅಧಿಕೃತ ಅಭ್ಯರ್ಥಿಗಳು ಏನಾದೀತೆಂಬ ಆತಂಕಕ್ಕೊಳಗಾಗುವಂತೆ ಮಾಡಿದೆ. ಕಾಂಗ್ರೆಸ್‌ಗೆ 8 ಅಭ್ಯರ್ಥಿಗಳು ಬಂಡಾಯ ಸಾರಿದ್ದಾರೆ. ಪಕ್ಷದ ನಾಯಕರ ಒತ್ತಡವನ್ನು ಲೆಕ್ಕಿಸದೆ ಪಾಲಿಕೆ ಮಾಜಿ ಸದಸ್ಯ ಗಣೇಶ ಟಗರಗುಂಟಿ ಪಕ್ಷೇತರ ಸದಸ್ಯರಾಗಿ ಕಣದಲ್ಲಿ ಉಳಿದಿರುವುದು, ವಾರ್ಡ್ 71ರ ಕಾಂಗ್ರೆಸ್‌ಅಧಿಕೃತ ಅಭ್ಯರ್ಥಿಗೆ ಆತಂಕ ಮೂಡಿಸತೊಡಗಿದೆ ಎನ್ನಲಾಗಿದೆ. ಅದೇ ರೀತಿ ವಾರ್ಡ್ 52ರಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚೇತನ ಹಿರೇಕೆರೂರು ಪಕ್ಷೇತರರಾಗಿಕಣದಲ್ಲಿದ್ದು,ಕಾಂಗ್ರೆಸ್‌ಅಭ್ಯರ್ಥಿ ಪ್ರಕಾಶ ಕ್ಯಾರಕಟ್ಟಿ ಹೆಚ್ಚು ಬೆವರಿಳಿಸಬೇಕಿದೆ. ಉಳಿದಂತೆ ಚಂದ್ರಿಕಾ ಮೇಸ್ತ್ರಿ, ಶಫಿ ಯಾದಗಿರಿ, ಶೋಭಾ ಕಮತರ, ರಶೀದ್‌ಖಾನ್, ಹೇಮಲತಾ ಹಿರೇಮಠ ಅವರ ಪಕ್ಷೇತರರಾಗಿ ಕಣದಲ್ಲುಳಿದಿರುವುದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೇ ಪಾಲಿಕೆ ಆವರಣದಲ್ಲೇ ಪಕ್ಷದ ಅಭ್ಯರ್ಥಿಯೊಬ್ಬರನ್ನು ತಡೆದಿದ್ದ ರಾಷ್ಟ್ರೀಯ ಪಕ್ಷವೊಂದರ ಮಹಾನಗರ ಜಿಲ್ಲಾಧ್ಯಕ್ಷರು ನಾಮಪತ್ರ ಸಲ್ಲಿಕೆ ಬೇಡ ಎಂದು ಹಣದ ಬೇಡಿಕೆ ಮುಂದಿರಿಸಿದ್ದರು ಎನ್ನಲಾಗಿದೆ. ಅದೇ ರೀತಿ ಹುಬ್ಬಳ್ಳಿಯ ಎರಡು ಪ್ರತಿಷ್ಠಿತ ವಾರ್ಡ್‍ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದ ರೀತಿಯಲ್ಲಿ ತೀವ್ರ ಒತ್ತಡ ತರಲಾಗಿತ್ತು ಎನ್ನಲಾಗಿದೆ. ವಾರ್ಡ್‌ವೊಂದರ ಅಭ್ಯರ್ಥಿ ಅವಿರೋಧ ಆಯ್ಕೆಗೆಂದು ಶತಾಯಗತಾಯ ಯತ್ನಿಸಿದ್ದು, ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಲಿದ್ದಾರೆಂಬ ಅಭ್ಯರ್ಥಿ ಮೇಲೆ ತೀವ್ರ ಒತ್ತಡ ತಂದು ಟಿಕೆಟ್ ಪಡೆಯದಂತೆ ಮಾಡಿದ್ದರೆನ್ನಲಾಗಿದೆ. ಕೊನೆಗೂ ಅವಿರೋಧ ಆಯ್ಕೆಗೆ ಅವಕಾಶ ಕೊಡದ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಹೊರಗಿನವರು ಹಾಗೂ ಸ್ಥಳೀಯರೊಬ್ಬರನ್ನು ಎರಡು ವಾರ್ಡ್‌ಗಳಿಗೆ ಅಭ್ಯರ್ಥಿಯಾಗಿಸಿದ್ದು, ನಾಮಪತ್ರ ಸಲ್ಲಿಕೆ ದಿನದಿಂದಲೇ ಆ ಇಬ್ಬರು ಅಭ್ಯರ್ಥಿಗಳನ್ನು ಬೇರೆ ಕಡೆ ಇರಿಸಲಾಗಿತ್ತು ಎನ್ನಲಾಗಿದೆ. ನಾಮಪತ್ರ ಸಲ್ಲಿಸದಂತೆ, ನಾಮಪತ್ರ ಹಿಂಪಡೆಯುವಂತೆ ಅಭ್ಯರ್ಥಿ ಅಷ್ಟೇ ಅಲ್ಲ ಅವರ ಕುಟುಂಬದವರು, ಸಂಬಂಧಿಕರ ಮೇಲೂ ಒತ್ತಡ ತರುವ ಯತ್ನಗಳು ನಡೆದಿವೆ ಎಂದು ಹೇಳಲಾಗುತ್ತಿದೆ. ಜತೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗೆ ಹಣದ ಆಮಿಷ ತೋರಲಾಗಿತ್ತು, ಒತ್ತಡ ತಂದು ಬೆದರಿಕೆ ಹಾಕಲಾಗಿತ್ತೆಂದು ಆ ಪಕ್ಷ ಮುಖಂಡರೇ ಆರೋಪಿಸಿದ್ದರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಎಲ್ಲಿಯೂ ಅವಿರೋಧಕ್ಕೆ ಅವಕಾಶವಾಗಿಲ್ಲ.
ಇನ್ನೇನಿದ್ದರೂ ಮತಯುದ್ಧ: ಪಾಲಿಕೆ ಚುನಾವಣೆ ಅಖಾಡ ಗು ರುವಾರದಿಂದ ಸ್ಪಷ್ಟ ರೂಪ ಪಡೆದಿದೆ. ಇನ್ನೇನಿದ್ದರೂ ಮತ ಯುದ್ಧ ಮಾತ್ರ. ಈಗಾಗಲೇ ಅನೇಕ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ತಂತ್ರಗಾರಿಕೆ ಶುರುವಿಟ್ಟುಕೊಂಡಿದ್ದಾರೆ. ಯಾವ ಅಭ್ಯರ್ಥಿಯಿಂದ ತನಗೆ ಮತ ನಷ್ಟ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು, ಅದನ್ನು ಹೇಗೆ ನಿಭಾಯಿಸಬೇಕು, ಇರುವ ಸವಾಲುಗಳನ್ನು ಮೆಟ್ಟಿ ನಿಂತು ಗೆಲುವು ತಮ್ಮದಾಗಿಸಬೇಕೆಂಬ ಕಾರ್ಯತಂತ್ರ ರೂಪಿಸುವಲ್ಲಿ ತೊಡಗಿದ್ದಾರೆ. ಮತದಾನಕ್ಕೆಉಳಿದಿರುವುದುಕೇವಲ 8 ದಿನ ಮಾತ್ರ ಬಾಕಿ ಇದೆ ಅಷ್ಟರೊಳಗೆ ಅಭ್ಯರ್ಥಿಗಳು ವಾರ್ಡ್‌ನಲ್ಲಿ ಮತದಾರರ ಓಲೈಕೆ ಕಾರ್ಯ ಮಾಡ ಬೇಕಿದೆ. ಪಾಲಿಕೆ ಚುನಾವಣೆಯಲ್ಲಿ ಪಕ್ಷಗಳು ಅಧಿಕೃತ ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆಗಳು ವಿಭಿನ್ನವಾಗಿರುತ್ತವೆ. ಅವುಗಳನ್ನು ಮತದಾರರಿಗೆ ಪರಿಚಯಿಸಬೇಕಾಗುತ್ತದೆ. ವಿಶೇಷವಾಗಿ ಬಂಡಾಯ ಸಾರಿ ಪಕ್ಷೇತರರಾಗಿ ಸ್ಪರ್ಧಿಸಿರುವವರಿಗೆ ಈ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ಹೊಸದಾಗಿ ಪಕ್ಷೇತರರಾಗಿ ಸ್ಪರ್ಧಿಸುವವರಿಗೆ ಚಿಹ್ನೆತೊಂದರೆ ಹೆಚ್ಚಿಗೆ ಕಾಡದು. ಆದರೆ ಈಗಾಗಲೇ ಪಾಲಿಕೆಗೆ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿ ಇದೀಗ ಪಕ್ಷೇತರರಾಗಿ ಸ್ಪರ್ಧಿಸುವವರು ಮತದಾರರಿಗೆ ಈ ಬಾರಿ ತಮ್ಮ ಚಿಹ್ನೆ ಹಿಂದಿನದಲ್ಲ ಹೊಸದಾದ ಈ ಚಿಹ್ನೆ ಎಂದು ಮನವರಿಕೆ ಮಾಡಿಕೊಡುವುದು ಕಷ್ಟವಾಗಲಿದೆ. ಇದಕ್ಕಾಗಿ ಸಾಕಷ್ಟು ಶ್ರಮಿಸಬೇಕಿದೆ. ಜನರ ಮನ ದೊಳಗೆ ಹೊಸ ಚಿಹ್ನೆಯ ಅಚ್ಚೊತ್ತಬೇಕಿದೆ.