ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಹು-ಧಾ ಪಾಲಿಕೆ ಗದ್ದುಗೆ ಹಿಡಿಯಲು ಅಗತ್ಯ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ನಾಯಕರ ಲೆಕ್ಕಾಚಾರವನ್ನು ಮತದಾರಪ್ರಭು ತಲೆಕೆಳಗಾಗಿಸಿದ್ದಾನೆ. ಯಾವ ಪಕ್ಷಕ್ಕೂ ಮಹಾನಗರ ಜನತೆ ಬಹುಮತ ನೀಡಲಿಲ್ಲ. ಇಂತಹವರು ಗೆಲ್ಲುತ್ತಾರೆ ಎನ್ನುವ ಕ್ಷೇತ್ರದಲ್ಲಿ ಅಚ್ಚರಿಯ ಸೋಲು ಎದುರಾಗಿದೆ. ಒಂದಿಷ್ಟು ತಪ್ಪುಗಳನ್ನು ತಿದ್ದಿಕೊಂಡಿದ್ದರೆ ಇನ್ನಷ್ಟು ಸೀಟುಗಳನ್ನು ಗೆಲ್ಲಬಹುದಿತ್ತು ಎನ್ನುವ ಪರಾಮರ್ಶೆ ಪಕ್ಷದ ಪಡಸಾಲೆಯಲ್ಲಿ ಜೋರಾಗಿ ನಡೆಯುತ್ತಿದೆ.
ಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಗೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ ಬಿಜೆಪಿಗೆ ಹು-ಧಾ ಕೇಂದ್ರ ವಿಧಾಸಭಾ ಕ್ಷೇತ್ರ ನಿರ್ಣಾಯಕ ಎನ್ನುವ ಲೆಕ್ಕಾಚಾರ ಎರಡು ಪಕ್ಷದಲ್ಲಿವೆ. ಆದರೆ ನಾಯಕರ ಈ ಅಳೆದು ತೂಗುವ ಚಿಂತನೆಗಳು ಅಷ್ಟೊಂದಾಗಿ ಯಶ ಕಂಡಿಲ್ಲ. 25 ವಾರ್ಡ್‌ಗಳನ್ನು ಹೊಂದಿರುವ ಹು-ಧಾ ಕೇಂದ್ರ ವಿಧಾಸಭಾ ಕ್ಷೇತ್ರದಲ್ಲಿ ಕನಿಷ್ಟ 21-22 ಸದಸ್ಯರ ಗೆಲುವನ್ನು ಬಿಜೆಪಿ ನಿರೀಕ್ಷಿಸಿತ್ತು. ಆದರೆ 14ರಲ್ಲಿ ಮಾತ್ರ ಗೆಲುವಾಗಿದೆ. ಚಲಾವಣೆಯಾದ ಒಟ್ಟು ಮತಗಳಲ್ಲಿ 2013ರಲ್ಲಿ ಪಕ್ಷಕ್ಕೆ ಶೇ.32.18 ಮತಗಳು ಬಂದಿದ್ದರೆ, ಈ ಬಾರಿ ಶೇ.45.86 ಮತಗಳು ಬಂದಿವೆ. ಶೇ.13.68 ಮತಗಳು ಹೆಚ್ಚಾಗಿವೆ.
ಇನ್ನೂ ಕಾಂಗ್ರೆಸ್ 8 ಕ್ಷೇತ್ರಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, (ಕಳೆದ ಬಾರಿ ಶೇ.22.30) ಶೇ.29.50 ಮತಗಳು ಬಂದಿವೆ. ಬಿಜೆಪಿ ಭದ್ರಕೋಟೆಯಲ್ಲಿ ಕಳೆದ ಬಾರಿಗಿಂತ ಶೇ.7.2 ಅಧಿಕ ಮತಗಳನ್ನು ತನ್ನತ್ತ ಸೆಳೆದಿದೆ. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ 23 ವಾರ್ಡ್ ಪೈಕಿ ಕಾಂಗ್ರೆಸ್ 17-19 ರಲ್ಲಿ ಗೆಲುವು ನಿರೀಕ್ಷಿಸಿತ್ತು. ಆದರೆ 11ರಲ್ಲಿ ಗೆದ್ದಿದ್ದಾರೆ. 2013ರಲ್ಲಿ ಶೇ.30.76 ಮತಗಳನ್ನು ಪಡೆದಿದ್ದರೆ ಈ ಬಾರಿ ಶೇ.42.93 ಮತ ಪಡೆಯುವ ಮೂಲಕ ಶೇ.12.17 ಮತದಾರರ ಒಲವು ಹೆಚ್ಚಿಸಿಕೊಂಡಿದೆ.
ಇನ್ನು ಬಿಜೆಪಿ ಕಮಾಲ್ ಮಾಡುವಲ್ಲಿ ಯಶಸ್ವಿಯಾಗಿಲ್ಲ. 7 ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದು, ಶೇ.27.02 ಮತಗಳು (ಕಳೆದ ಬಾರಿ ಶೇ.30.87) ಬರುವ ಮೂಲಕ ಕಳೆದ ಬಾರಿಗೆ ಹೋಲಿಸಿದರೆ ಶೇ.3.85 ಮತ ಕುಸಿದಿದೆ.