Advertisement

ಮಹಾನಗರ ಪಾಲಿಕೆ ಚುನಾವಣೆ|ಉಮೇದುವಾರಿಕೆ ಹಿಂಪಡೆಯಲು ಆಮಿಷ ತಂತ್ರ

07:43 PM Aug 25, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆ, ನಾಮಪತ್ರಗಳ ಪರಿಶೀಲನೆ ಮುಗಿದಿದೆ. ಇನ್ನೇನಿದ್ದರೂ ಕಣದಲ್ಲಿರುವ ಎದುರಾಳಿಗಳನ್ನು ಹಿಂದಕ್ಕೆ ಸರಿಸುವುದು, ಮತಯುದ್ಧದಲ್ಲಿ ಗೆಲುವಿಗೆ ಶ್ರಮಿಸುವುದಾಗಿದೆ. ಚುನಾವಣೆ ಕಣದಲ್ಲಿರುವ ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳನ್ನು ಹಿಂದಕ್ಕೆ ಸರಿಸಲು ಹಣ ಸೇರಿದಂತೆ ವಿವಿಧ ಆಮಿಷ ಹಾಗೂ ಒತ್ತಡ ತಂತ್ರಗಳಿಗೆ ಅನೇಕರು ಮೊರೆ ಹೋಗಿದ್ದಾರೆಯೇ? ಹೌದು ಎನ್ನುತ್ತಿವೆ ಕೆಲವೊಂದು ರಾಜಕೀಯ ಮೂಲಗಳು.

ಪಾಲಿಕೆ ಚುನಾವಣೆಯಲ್ಲಿ ಗೆಲುವು ತನ್ನದಾಗಿಸಿಕೊಳ್ಳಲೇಬೇಕೆಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಯತ್ನ, ಶ್ರಮಕ್ಕೆ ಮುಂದಾಗುತ್ತಾರೆ. ನಾಮಪತ್ರ ಹಿಂಪಡೆಯುವುದೂ ಇದರ ಒಂದು ಭಾಗವಾಗಿದೆ. ಆ ಕಾರಣಕ್ಕಾಗಿಯೇ ಪಾಲಿಕೆ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಎರಡು ದಿನಗಳು ಬಾಕಿ ಇದ್ದು, ನಾಮಪತ್ರ ಹಿಂಪಡೆಯುವ ನಿಟ್ಟಿನಲ್ಲಿ ಪಕ್ಷಗಳಿಂದ ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಯತ್ನ ನಡೆದರೆ, ಸ್ಪರ್ಧೆಗಿಳಿದ ಕೆಲವರಿಂದ ವಿವಿಧ ಆಮಿಷ ಯತ್ನಗಳು ನಡೆದಿವೆ ಎಂದೇ ಹೇಳಲಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯದ ಸವಾಲು ಎದುರಾಗಿದೆ. ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಲವು ರೀತಿಯ ಯತ್ನಗಳಿಗೆ ಮುಂದಾಗಿದ್ದಾರೆ. ಬಂಡಾಯಗಾರರ ಮನವೊಲಿಸುವ, ಒತ್ತಡ ತರುವ ಕಾರ್ಯ ನಡೆಯುತ್ತಿದೆ. ಆಮಿಷಕ್ಕೆ ಯತ್ನ ನಡೆಯುತ್ತಿದೆಯೇ?: ಎದುರಾಳಿ ನಾಮಪತ್ರ ಹಿಂಪಡೆಯಲು ಹಲವು ರೀತಿಯ ಒತ್ತಡದ ಜತೆಗೆ ಹಣದ ಆಮಿಷವೊಡ್ಡಲಾಗುತ್ತಿದೆ ಎನ್ನಲಾಗಿದೆ. ಆದರೆ ಆಮ್‌ ಆದ್ಮಿ ಪಕ್ಷ ಇದನ್ನು ತಿರಸ್ಕರಿಸಿ ಸ್ಪರ್ಧೆಯಲ್ಲಿ ಮುಂದುವರಿದಿದೆ. ಇದೇ ರೀತಿ ಇತರೆ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮೇಲೂ ಒತ್ತಡ ಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

ಇನ್ನು ಕೆಲವು ಕಡೆಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಇತರೆ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮೇಲೆ ಹೆಚ್ಚು ಒತ್ತಡ ತರುವ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೇಳುತ್ತಿದ್ದು, ವಾರ್ಡ್‌ ವ್ಯಾಪ್ತಿಯ ಜನರಿಗೆ ಇತರೆ ಪಕ್ಷಗಳ ಅಭ್ಯರ್ಥಿಗಳ ಜತೆ ಪ್ರಚಾರಕ್ಕೆ ಹೋಗದಂತೆಯೂ ಒತ್ತಡ ತರುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆಂದು ಹೇಳಲಾಗುತ್ತಿದೆ. ಯಾವುದೇ ಚುನಾವಣೆಯೇ ಇರಲಿ ನಾಮಪತ್ರ ಹಿಂಪಡೆಯುವ ವೇಳೆ, ಸ್ಪರ್ಧೆಯಿಂದ ನಿವೃತ್ತಿಯಾಗುವ ಸಂದರ್ಭದಲ್ಲಿ ಅನೇಕ ವದಂತಿಗಳು ಹಬ್ಬಿಕೊಳ್ಳುತ್ತವೆ. ಪಾಲಿಕೆ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಪಕ್ಷದ ಟಿಕೆಟ್‌ ಖಚಿತ ಎನ್ನುವವರಿಗೆ ಕೊನೆ ಗಳಿಗೆಯಲ್ಲಿ ಕೆಲವರಿಗೆ ಟಿಕೆಟ್‌ ಕೈತಪ್ಪಿದ್ದು, ಹಲವರು ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಬಂಡಾಯ ಸಾರಿದ್ದಾರೆ. ಇದೀಗ ಪಕ್ಷದಿಂದ ಅಧಿಕೃತವಾಗಿ ಟಿಕೆಟ್‌ ಪಡೆದವರು ಕೆಲವೊಂದು ವ್ಯವಹಾರಗಳಿಗೆ ಮುಂದಾಗಿ ನಾಮಪತ್ರ ಹಿಂಪಡೆಯುವ ಯತ್ನಕ್ಕೂ ಮುಂದಾಗಿದ್ದಾರೆಂಬ ವದಂತಿಗಳು ತಮ್ಮದೇ ರೆಕ್ಕೆ-ಪುಕ್ಕ ಪಡೆದುಕೊಂಡು ಹಾರಾಡುತ್ತಿವೆ.

Advertisement

ಇನ್ನು ಕೆಲವು ಬಂಡಾಯ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯುವ ನಿಟ್ಟಿನಲ್ಲಿ ಮನವೊಲಿಕೆ ಕಾರ್ಯ ನಡೆದಿದ್ದು, ಬಿಜೆಪಿ-ಕಾಂಗ್ರೆಸ್‌ನಲ್ಲಿ ಮಂಗಳವಾರವೇ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸುವ ಕೆಲಸ ನಡೆದಿದೆ. ನಾಮಪತ್ರ ಹಿಂಪಡೆಯದಿದ್ದರೆ ಶಿಸ್ತುಕ್ರಮಕ್ಕೆ ಎದುರಿಸಬೇಕಾದೀತೆಂಬ ಎಚ್ಚರಿಕೆ ಸಂದೇಶ ರವಾನಿಸಲಾಗುತ್ತಿದೆ. ಕೆಲವು ಬಂಡಾಯ ಅಭ್ಯರ್ಥಿಗಳು, ಪಕ್ಷದಿಂದ ಟಿಕೆಟ್‌ ನಿರಾಕರಿಸಿದ ಬಳಿಕೆ ಆ ಪಕ್ಷದ ಮುಲಾಜು ನಮಗೇಕೆ? ಏನೇ ಒತ್ತಡ, ಎಚ್ಚರಿಕೆ ಬಂದರೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಏಳೆಂಟು ಜನರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿದಿದ್ದು, ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಯತ್ನಗಳನ್ನು ಪಕ್ಷದ ನಾಯಕರು ಕೈಗೊಂಡಿದ್ದು, ಎಲ್ಲರೂ ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ ಎಂಬುದು ಬಿಜೆಪಿ ಮುಖಂಡರ ಅನಿಸಿಕೆ. ಸ್ವಲ್ಪ ಯಾಮಾರಿದರೂ ಕಷ್ಟ: ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ವಲ್ಪ ಯಾಮಾರಿದರೂ ವಿಜಯಮಾಲೆ ಇನ್ನೊಬ್ಬರ ಕೊರಳು ಸೇರುವ ಆತಂಕ ಅಭ್ಯರ್ಥಿಗಳದ್ದಾಗಿರುತ್ತದೆ. ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ಅಂತರ ಅತ್ಯಂತ ಕಡಿಮೆ ಆಗಿರುತ್ತದೆ. 100-500 ಮತಗಳ ಅಂತರದಲ್ಲೇ ಬಹುತೇಕರು ಗೆಲುವು ಕಾಣುತ್ತಾರೆ. 1,000 ಮೇಲ್ಪಟ್ಟು ಮತಗಳ ಅಂತರದಿಂದ ಗೆಲುವು ಸಾಧಿಸುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಸ್ಥಳೀಯ ಸಂಸ್ಥೆ ಚುನಾವಣೆಗಳು ಸಾಮಾನ್ಯವಾಗಿ ನೀನಾ, ನಾನಾ ಎಂಬ ರೀತಿಯಲ್ಲಿ ನಡೆಯುತ್ತವೆ. ನೆರೆಯ ಮನೆಯವರು, ಸಂಬಂಧಿಗಳು, ದಾಯಾದಿಗಳು ಚುನಾವಣೆ ವೇಳೆ ವಿರೋಧಿಗಳಾಗುತ್ತಾರೆ, ಪ್ರತಿ ಮತವೂ ಇಲ್ಲಿ ಹೆಚ್ಚಿನ ಮೌಲ್ಯ ಪಡೆಯುತ್ತದೆ. ಪಕ್ಷದಿಂದಲೇ ಪಾಲಿಕೆ ಸದಸ್ಯರಾಗಿದ್ದು, ಈ ಬಾರಿ ಟಿಕೆಟ್‌ ದೊರೆಯದೆ ಬಂಡಾಯವಾಗಿ ಕಣಕ್ಕಿಳಿದವರು, ಸ್ವಜಾತಿಯವರು, ತಮ್ಮದೇ ಮತ ಬುಟ್ಟಿಗೆ ಕೈ ಹಾಕುವವರಿಂದ ಸಮಸ್ಯೆ ಸೃಷ್ಟಿಯಾಗಬಹುದು.

ಸ್ಪರ್ಧೆಯ ಕೊನೆ ಹಂತದಲ್ಲಿ ಗೆಲುವು ಕೈ ಜಾರಬಹುದೆಂಬ ಉದ್ದೇಶ-ಶಂಕೆಯಿಂದಲೇ ಇಂತಹ ಅಭ್ಯರ್ಥಿಗಳನ್ನು ಸ್ಪರ್ಧಾ ಕಣದಿಂದ ಹಿಂದೆ ಸರಿಸುವ ಯತ್ನಗಳು ಯಥೇತ್ಛವಾಗಿ ನಡೆಯುತ್ತಿವೆ. ಇನ್ನು ಕೆಲವೊಂದು ಕಡೆ ತಾನು ಗೆಲ್ಲದಿದ್ದರೂ ಪರವಾಗಿಲ್ಲ, ಅವರು ಸೋಲಬೇಕೆಂಬ ಛಲದೊಂದಿಗೆ ಸ್ಪರ್ಧೆಗಿಳಿದವರು ಇರುತ್ತಾರೆ. ಅಂತಹ ಯತ್ನಗಳು ಪಾಲಿಕೆ ಚುನಾವಣೆಯಲ್ಲಿಯೂ ಇಲ್ಲವೆಂದಿಲ್ಲ.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಬುಧವಾರ-ಗುರುವಾರ ಮಧ್ಯಾಹ್ನ 3:00ಗಂಟೆವರೆಗೂ ಅವಕಾಶ ಇದ್ದು, ಇದರೊಳಗೆ ನಾಮಪತ್ರ ಪಡೆಯುವಂತೆ ಮಾಡುವ ಮೂಲಕ ಬಂಡಾಯ ಶಮನಗೊಳಿಸುವ, ಸಾಧ್ಯವಾದಷ್ಟು ಗೆಲುವು ಖಾತರಿ ಪಡಿಸಿಕೊಳ್ಳುವ ಯತ್ನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ನಾಯಕರು ಮುಂದಾಗಿದ್ದಾರೆ. ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಬಂಡಾಯ ಶಮನ ಮಾಡುವಂತೆ ಪಕ್ಷದ ನಾಯಕರ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡಿ ಬಂಡಾಯ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯುತ್ತಾರೋ, ಸಡ್ಡು ಹೊಡೆದು ಕಣದಲ್ಲಿ ಮುಂದುವರಿಯುತ್ತಾರೋ ಎಂಬ ಕುತೂಹಲ, ನಿರೀಕ್ಷೆಗೆ ಗುರುವಾರ ಮಧ್ಯಾಹ್ನ 3:00 ಗಂಟೆಗೆ ತೆರೆ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next