Advertisement
ಭಾರತೀಯ ಸಂಸ್ಕೃತಿ ಉತ್ಸವ ನಡೆಯುವ ಸ್ಥಳದ ವ್ಯಾಪ್ತಿಯಲ್ಲೇ ಸುಮಾರು 1 ಎಕರೆ ಜಮೀನಿನಲ್ಲಿ ಎರಡು ಗುಂಟೆಯಲ್ಲಿ ಒಂದು ಮನೆ, ಆಕಳು ಕೊಟ್ಟಿಗೆ, ಗೋಬರ್ ಗ್ಯಾಸ್ ನಿರ್ಮಿಸಲಾಗುತ್ತಿದ್ದು, ಉಳಿದ ಸುಮಾರು 38 ಗುಂಟೆಯಲ್ಲಿ ಲಕಪತಿ ಶೇತಿ ಮಾದರಿ ರೂಪಿಸಲಾಗುತ್ತಿದೆ. ಲಕಪತಿ ಶೇತಿ (ಲಕ್ಷಾಧೀಶ ರೈತ) ಇದು ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಕಾಡಸಿದ್ದೇಶ್ವ ಮಠ ಹಾಗೂ ಸಿದ್ದಗಿರಿ ಗುರುಕುಲ ಪ್ರತಿಷ್ಠಾನದ ಪರಿಕಲ್ಪನೆ. ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕೇವಲ 38 ಗುಂಟೆಯಲ್ಲಿ ಸುಮಾರು 100 ತರಹದ ಬೆಳೆಗಳನ್ನು ಬೆಳೆಯುವ ಮೂಲಕ 2015ರಲ್ಲಿ ಕನೇರಿಯಲ್ಲಿ ನಡೆದ 4ನೇ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಬಂದಿದ್ದ ಲಕ್ಷಾಂತರ ಜನರು ವೀಕ್ಷಿಸುವಂತೆ ಮಾಡಿದ್ದರು. ಅಷ್ಟೇ ಅಲ್ಲ ಉತ್ಸವದ ನಂತರವೂ ಅದನ್ನು ಮುಂದುವರೆಸಿದ್ದು, ಇಂದಿಗೂ ಶ್ರೀಮಠಕ್ಕೆ ಹೋಗುವ ರೈತರು, ಭಕ್ತರು, ಪ್ರವಾಸಿಗರು ಲಕ್ಷಾಧೀಶರೈತ ಮಾದರಿ ನೋಡಬಹುದಾಗಿದೆ.
Related Articles
Advertisement
ಒಂದು ಎಕರೆಯಲ್ಲಿ 21 ತಳಿ ಸಿರಿಧಾನ್ಯ, 9 ತಳಿ ಗೋಧಿ, 7 ತಳಿ ಜೋಳ, 5 ತಳಿ ಕಡಲೆ ಇದಲ್ಲದೆ ಚಿಯಾ, ಉಳ್ಳಾಗಡ್ಡಿ, ಬೆಳ್ಳುಳ್ಳಿ, ಪಡವಲಕಾಯಿ, ಚವಳೆಕಾಯಿ, ಬೆಂಡೇಕಾಯಿ, ಹೀರೇಕಾಯಿ, ಬೀನ್ಸ್, ಟೊಮೆಟೊ, ಬದನೇಕಾಯಿ, ಕಾಬೂಲ ಕಡಲೆ, ಸಕ್ಕರೆಮುಕ್ಕರಿ ಜೋಳ, ಪಪ್ಪಾಯಿ, ಕರಬೂಜ, ಕಲ್ಲಂಗಡಿ, ಚೆಂಡು ಹೂ, ಶಿಮ್ಲಾ ಮೆಣಸಿನಕಾಯಿ ಹೀಗೆ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ. ಜತೆಗೆ ರೇಷ್ಮೆ ಕೃಷಿ ಮಾಹಿತಿಗೂ ವ್ಯವಸ್ಥೆ ಕೈಗೊಳ್ಳಲಾಗಿದೆ. ಒಂದು ಎಕರೆಯಲ್ಲಿ ಪಾಲಿಹೌಸ್ ಮಾಡಲಾಗುತ್ತದೆ.
ಲಕ್ಷಾಧೀಶ ರೈತ ಹಾಗೂ ಅದರ ಪಕ್ಕದಲ್ಲೇ ಒಂದು ಎಕರೆಯಲ್ಲಿನ ಕೃಷಿ ಮಾದರಿ ವೀಕ್ಷಣೆಗೆ ಹೋಗುವ ರೈತರು ಮಿಶ್ರ ಹಾಗೂ ಬಹುಬೆಳೆಗಳ ಪ್ರಾತ್ಯಕ್ಷಿಕೆ ಜತೆಗೆ ಅದರ ಮಾಹಿತಿ ನೀಡಿಕೆ, ಪ್ರಶ್ನೆಗಳೇನಾದರು ಮೂಡಿದರೆ ಅದಕ್ಕೆ ಉತ್ತರಿಸುವ, ಕೃಷಿ ವಿಜ್ಞಾನಿ-ತಜ್ಞರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಅಮರೇಗೌಡ ಗೋನವಾರ