Advertisement
ಮೂಡುಬಿದಿರೆ ಮೆಸ್ಕಾಂ ಕಚೇರಿಯಲ್ಲಿ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಇಂಥದ್ದೇ ಪ್ರಶ್ನೆ ಎತ್ತಿದ ಬೆಳುವಾಯಿ ಗ್ರಾ.ಪಂ. ಸದಸ್ಯ ಭರತ್ ಶೆಟ್ಟಿ ಅವರು ಮುಂಡ್ರೊಟ್ಟು ನಲ್ಲಿ ಜನವಸತಿ ಇರುವಲ್ಲಿ ಹಾದುಹೋಗಿರುವ ಎಚ್‌ಟಿ ಲೈನ್ ತೀರಾ ಅಪಾಯಕಾರಿಯಾಗಿದೆ. ಮಗುವಿಗೆ ವಿದ್ಯುತ್ ಶಾಕ್ ಹೊಡೆದಿದೆ ಎಂದರು. ದೂರನ್ನಾಲಿಸಿದ ಕಾವೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ನಾಯ್ಕ ಅವರು ಈ ಬಗ್ಗೆ ತತ್ ಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರಗಿಸುವುದಾಗಿ ತಿಳಿಸಿದರು.
Related Articles
Advertisement
ಪುರಸಭೆ ಸದಸ್ಯ ಕೊರಗಪ್ಪ ಮಾತನಾಡಿ, ತನ್ನ ವಾರ್ಡ್‌ನಲ್ಲಿ ಒಂದು ಭಾಗಕ್ಕೆ ಕರೆಂಟಿರುವಾಗ ಇನ್ನೊಂದು ಭಾಗಕ್ಕೆ ಇಲ್ಲ ಎಂಬ ಪರಿಸ್ಥಿತಿ ಇದೆ, ಇದೇಕೆ ಹೀಗೆ, ಸರಿಪಡಿಸಿ ಎಂದು ಕೋರಿದರು. ಇರುವೈಲು ಲಕ್ಷ್ಮಣ ಪ್ರಭು ಅವರು ಕೋರಿಬೆಟ್ಟು ಪ್ರದೇಶದ ಹಲವಾರು ಕೃಷಿ ಪಂಪ್ ಸೆಟ್‌ಗಳು ಲೋ ವೋಲ್ಟೆಜ್‌ನಿಂದ ಸಮಸ್ಯೆಗೀಡಾಗಿದ್ದು ಸಮಸ್ಯೆಗೆ ಪರಿಹಾರ ಕೋರಿದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಪುರಸಭೆ ಸದಸ್ಯ ಪುರಂದರ ದೇವಾಡಿಗ,ಇಕ್ಬಾಲ್ ಕರೀಂ ಬೆಳುವಾಯಿ ದಯಾನಂದ ಹೆಗ್ಡೆ, ಅನಿಲ್ ಮೆಂಡೋನ್ಸಾ ಮೊದಲಾದವರು ತಮ್ಮ ದೂರುಗಳನ್ನು ಸಲ್ಲಿಸಿದರು. ಸ್ಥಳೀಯರ ಗಮನ ಸೆಳೆಯದೆ ಮೆಸ್ಕಾಂ ಸಭೆ ನಡೆಸಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿ ಮುಂದೆ ಇದನ್ನು ಸರಿಪಡಿಸುವುದಾಗಿ ಸಂತೋಷ ನಾಯ್ಕಭರವಸೆ ಇತ್ತರು. ಜಂಗಲ್ ಕಟ್ಟಿಂಗ್ ಅನ್ನು ಎಪ್ರಿಲ್ ಮೇ ಯೊಳಗೆ ಪೂರ್ಣಗೊಳಿಸುವ ಮೂಲಕ ವಿದ್ಯುತ್ ಲೈನ್ ಗಳ ಅಡೆತಡೆ ನಿವಾರಿಸುವುದಾಗಿ ಸಂತೋಷ ನಾಯ್ಕ ತಿಳಿಸಿದರು.
ಅಧಿಕಾರಿಗಳಾದ ಮೋಹನ್ ಟಿ.(ಸ.ಕಾ.ನಿ. ಎಂಜಿನಿಯರ್ ಮೂಡುಬಿದಿರೆ), ಕುಮಾರ್ ವಿ.ಎಚ್. (ಸ. ಕಾ.ನಿ. ಎಂಜಿನಿಯರ್), ಕಲ್ಲಮುಂಡ್ಕೂರು ಶಾಖಾಧಿಕಾರಿ ಸುಭಾಷ್ ಆಚಾರಿ, ಬೆಳುವಾಯಿ ಶಾಖಾಧಿಕಾರಿ ಗೇಮಾ ನಾಯ್ಕ, ಮೂಡುಬಿದಿರೆ ಸಹಾಯಕ ಎಂಜಿನಿಯರ್ ಮಮತಾ ಎಂ.ಆರ್. ಮೊದಲಾದವರಿದ್ದರು.
ಎಕ್ಸ್‌ಪ್ರೆಸ್ ಫೀಡರ್‌ಲೈನ್ ಇದ್ದೂ ಮಂಗಳವಾರ ಪವರ್ ಕಟ್
ಅಭಯಚಂದ್ರರು 1.10 ಕೋ.ರೂ. ವೆಚ್ಚದ ಎಕ್ಸ್‌ಪ್ರೆಸ್ ಫೀಡರ್ ಲೈನ್ ಒದಗಿಸಿಕೊಟ್ಟಿದ್ದರೂ ಮಂಗಳವಾರ ಪವರ್ ಕಟ್ ಎಂಬುದು ಖಾಯಂ ಆಗಿ, ಮನೆ ಬಳಕೆಗೆ ಮಾತ್ರವಲ್ಲ, ಪುಚ್ಚಮೊಗರು ರೇಚಕ ಸ್ಥಾವರಕ್ಕೂ ವಿದ್ಯುತ್ ಪೂರೈಕೆ ಇಲ್ಲದೆ ಕನಿಷ್ಟ ಎರಡು ದಿನ ನೀರು ಪೂರೈಕೆಗೆ ಸಮಸ್ಯೆಯಾಗುತ್ತಿದೆ, ಜನ ನಮ್ಮನ್ನು ಕೇಳುತ್ತಾರೆ ಎಂದು ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್, ಜೆಸ್ಸಿ ಮಿನೇಜಸ್, ಮಹತ್ವದ ಪ್ರಶ್ನೆ ಎತ್ತಿದರು.ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ” ಎಕ್ಸ್‌ಪ್ರೆಸ್ ಲೈನ್ ಜತೆ ಇತರ ಲೈನ್ ಕೂಡ ಇದ್ದು ಅದಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ ಇದ್ದಾಗ ಅಪಾಯ ನಿವಾರಿಸಲು ಎರಡೂ ಲೈನ್ ಗಳನ್ನು ಅಫ್ ಮಾಡಬೇಕಾಗುತ್ತದೆ ಎಂದಾಗ ಮೊದಲು ಹೀಗಿರಲಿಲ್ಲ, ಈಗ ಕೆಲವು ತಿಂಗಳಿನಿಂದ ಹೀಗಾಗುತ್ತಿದೆ ಏಕೆ ಎಂದು ಕೇಳಿದರು ಸುರೇಶ್ ಕೋಟ್ಯಾನ್.
ಕರೆ ಸ್ವೀಕರಿಸದ ಎಸ್‌ಒ : ತೀವ್ರ ಆಕ್ರೋಶ
ವಿದ್ಯುತ್ ಸಮಸ್ಯೆಗಳ ಬಗ್ಗೆ ಮೂಡುಬಿದಿರೆ ಮೆಸ್ಕಾಂ ಎಸ್‌ಒ ಅವರಿಗೆ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ ಎಂದು ಸಭೆಯಲ್ಲಿದ್ದ ಅನೇಕರು ಉನ್ನತಾಧಿಕಾರಿಗಳ ಗಮನ ಸೆಳೆದರು. ಎಸ್‌ಒ ಅಲ್ಲಗಳೆಯುವ ಪ್ರಯತ್ನ ಮಾಡಿದರು. ಒಂದು ಹಂತದಲ್ಲಿ ಸಂತೋಷ್ ನಾಯ್ಕ ಅವರು ಎಸ್‌ಒ ಪ್ರವೀಣ್ ಅವರನ್ನು ‘ಯಾಕೆ ಹೀಗೆ ಮಾಡುತ್ತೀರಾ, ಸಣ್ಣ ಪುಟ್ಟ ವಿಷಯಗಳನ್ನೆಲ್ಲ ನೀವೇ ಸರಿಪಡಿಸಬೇಕು’ ಎಂದು ತಾಕೀತು ಮಾಡಿದರು.