Advertisement

ಹೇಗಿದೆ ಅಮೆರಿಕನ್‌ ಚುನಾವಣ ಕಣ?

12:07 PM Nov 03, 2015 | mahesh |

ನವೆಂಬರ್‌ 3ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಜಾಗತಿಕ ಶಕ್ತಿಯಾಗಿರುವ ಅಮೆರಿಕದಲ್ಲಿನ ಬದಲಾವಣೆಗಳು ಜಗತ್ತಿನ ಮೇಲೂ ಪ್ರಭಾವ ಬೀರುವುದರಿಂದ ಸಹಜವಾಗಿಯೇ ಎಲ್ಲಾ ರಾಷ್ಟ್ರಗಳ ಚಿತ್ತ ಅತ್ತ ಹರಿದಿದೆ. ಅಕ್ಟೋಬರ್‌ 22ರ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ: ಶುಕ್ರವಾರ ಬೆಳಗ್ಗೆ 7.30ಕ್ಕೆ) ಟ್ರಂಪ್‌ ಮತ್ತು ಬೈಡೆನ್‌ ಕೊನೆಯ ಅಧ್ಯಕ್ಷೀಯ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಚರ್ಚೆಯನ್ನು ನಡೆಸಿಕೊಡುತ್ತಿರುವ ವರದಿಗಾರ್ತಿ ಬೈಡೆನ್‌ ಪರ ಒಲವಿರುವವರು ಎನ್ನುವುದು ರಿಪಬ್ಲಿಕನ್ನರ ಆರೋಪ.

Advertisement

ಎರಡು ಪ್ರಮುಖ ಪಕ್ಷಗಳು
ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಎರಡು ಪಕ್ಷಗಳದ್ದೇ ಪಾರಮ್ಯವಿದೆ. ಹೀಗಾಗಿ, ಇವೆರಡರಲ್ಲಿ ಒಂದು ಪಕ್ಷದವರೇ ಅಧಿಕಾರಕ್ಕೇರುತ್ತಾ ಬಂದಿದ್ದಾರೆ.

ರಿಪಬ್ಲಿಕನ್ನರು : ಬಲಪಂಥೀಯ ಧೋರಣೆಗಳಿಂದ ಗುರುತಿಸಿಕೊಂಡಿರುವ ರಿಪಬ್ಲಿಕನ್‌ ಪಕ್ಷದ ಈ ವರ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌. ಅವರಿಗೆ ಅಮೆರಿಕನ್ನರು ಮತ್ತೆ ನಾಲ್ಕು ವರ್ಷ ಆಡಳಿತ ನಡೆಸಲು ಅವಕಾಶ ಕೊಡುತ್ತಾರಾ ಕಾದುನೋಡಬೇಕಿದೆ. ರಿಪಬ್ಲಿಕನ್‌ ಪಕ್ಷವನ್ನು ಗ್ರ್ಯಾಂಡ್‌ ಓಲ್ಡ್‌ ಪಾರ್ಟಿ(ಜಿಓಪಿ) ಎಂದೂ ಕರೆಯಲಾಗುತ್ತದೆ. ಕೆಲವು ವರ್ಷಗಳಿಂದ ಈ ಪಕ್ಷ ಕಡಿಮೆ ತೆರಿಗೆ ಪದ್ಧತಿ, ಗನ್‌ ಹಕ್ಕುಗಳು, ಕಠಿನ ವಲಸಿಗ ನೀತಿ, ಅಮೆರಿಕನ್ನರಿಗೇ ಉದ್ಯೋಗ ಆದ್ಯತೆಯಂಥ ನೀತಿಗಳನ್ನು ಅನುಸರಿಸುತ್ತಾ ಬಂದಿದೆ. ರಿಪಬ್ಲಿಕನ್‌ ಪಕ್ಷಕ್ಕೆ ಶ್ವೇತವರ್ಣೀಯ ಮಧ್ಯಮವರ್ಗದ ಬೆಂಬಲ ಅಧಿಕವಿದ್ದು, ಈ ಪಕ್ಷ ಅಮೆರಿಕದ ಗ್ರಾಮೀಣ ಭಾಗಗಳಲ್ಲಿ ಪ್ರಖ್ಯಾತವಾಗಿದೆ. ಜಾರ್ಜ್‌ ಡಬ್ಲೂé ಬುಷ್‌, ರೊನಾಲ್ಡ್‌ ರೇಗನ್‌, ರಿಚರ್ಡ್‌ ನಿಕ್ಸನ್‌ ರಿಪಬ್ಲಿಕನ್‌ ಪಕ್ಷದಿಂದ ಅಧ್ಯಕ್ಷರಾಗಿದ್ದವರು.

ಡೆಮಾಕ್ರಾಟ್‌ಗಳು : ಡೆಮಾಕ್ರಾಟ್‌ಗಳು ತಮ್ಮನ್ನು ಪ್ರಗತಿಪರ ಧೋರಣೆಯ ಪಕ್ಷ ಎಂದು ಕರೆದುಕೊಳ್ಳುತ್ತಾರೆ. ಆದರೆ, ಡೆಮಾಕ್ರಟಿಕ್‌ ಪಕ್ಷ ಎಡಚಿಂತನೆಯಿಂದ ಕೂಡಿದ್ದು, ಚೀನದ ಪರವಿದೆ ಎನ್ನುವುದು ರಿಪಬ್ಲಿಕನ್ನರ ವಾದ. ಈ ಬಾರಿ ಡೆಮಾಕ್ರಟಿಕ್‌ ಪಾರ್ಟಿಯ ಅಭ್ಯರ್ಥಿಯಾಗಿ 77 ವರ್ಷದ ಜೋ ಬೈಡನ್‌ ಕಣದಲ್ಲಿದ್ದಾರೆ. ಇವರು ಈ ಹಿಂದೆ ಒಬಾಮಾ ಅವಧಿಯಲ್ಲಿ 8 ವರ್ಷಗಳವರೆಗೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರು. ಬೈಡನ್‌ ನಂತರ ಪಕ್ಷದಲ್ಲೀಗ ಎರಡನೇ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವುದು ಭಾರತೀಯ ಮೂಲದ ಕಮಲಾ ಹ್ಯಾರಿಸ್‌. ಜಾನ್‌ ಎಫ್. ಕೆನಡಿ, ಜಿಮ್ಮಿ ಕಾರ್ಟರ್‌, ಬಿಲ್‌ ಕ್ಲಿಂಟನ್‌, ಬರಾಕ್‌ ಒಬಾಮಾ ಡೆಮಾಕ್ರಟಿಕ್‌ ಪಕ್ಷದ ಮೂಲಕ ಅಧ್ಯಕ್ಷರಾಗಿದ್ದ ನಾಯಕರು.

ಚರ್ಚೆಗೆ ಆಯ್ದ ವಿಷಯಗಳನ್ನು ಟೀಕಿಸಿದ ಟ್ರಂಪ್‌ ಟೀಂ 
ಈ ಬಾರಿಯ ಅಧ್ಯಕ್ಷೀಯ ಚರ್ಚೆಗೆ ಆಯ್ಕೆ ಮಾಡಿರುವ ವಿಷಯಗಳೆಂದರೆ
– ಕೋವಿಡ್‌-19
– ಅಮೆರಿಕನ್‌ ಕುಟುಂಬಗಳು
– ಅಮೆರಿಕದಲ್ಲಿನ ಜನಾಂಗಗಳು
– ಹವಾಮಾನ ಬದಲಾವಣೆ
– ರಾಷ್ಟ್ರೀಯ ಭದ್ರತೆ ಮತ್ತು ನಾಯಕತ್ವ.

Advertisement

ವಿದೇಶಾಂಗ ನೀತಿಯ ವಿಚಾರವನ್ನು ಚರ್ಚೆಯಲ್ಲಿ ಸೇರಿಸಿಯೇ ಇಲ್ಲ. ಈ ಮೊದಲು ಚರ್ಚೆ ಆಯೋಜಕರು ಈ ವಿಷಯವನ್ನು ಚರ್ಚೆಯ ಪ್ರಮುಖ ಅಂಶವಾಗಿಸುತ್ತೇವೆ ಎಂದು ಭರವಸೆ ನೀಡಿದ್ದರು, ಈಗ ಮಾತು ತಪ್ಪಿದ್ದಾರೆ ಎನ್ನುತ್ತಾರೆ ಟ್ರಂಪ್‌ರ ಪ್ರಚಾರ ಮ್ಯಾನೇಜರ್‌ ಸ್ಟೀಪಿನ್‌. ಕೊನೆಯ ಅಧ್ಯಕ್ಷೀಯ ಚರ್ಚೆಯನ್ನು ಎನ್‌ಬಿಸಿಯ ವರದಿಗಾರ್ತಿ ಕ್ರಿಸ್ಟನ್‌ ವೆಲ್ಕರ್‌ ನಡೆಸಿಕೊಡುತ್ತಿದ್ದು, ಅವರೇ ಮೇಲಿನ ವಿಷಯಗಳನ್ನು ಆಯ್ಕೆ ಮಾಡಿದ್ದಾರೆ. ಈ ವಿಷಯವೂ ರಿಪಬ್ಲಿ ಕನ್ನರ ಮುನಿಸಿಗೆ ಕಾರಣವಾಗಿದೆ. ಕ್ರಿಸ್ಟನ್‌ ವೆಲ್ಕರ್‌ ಎಡಪಂಥೀಯ ಚಿಂತನೆ ಹೊಂದಿದ್ದು, ಅವರು ಜೋ ಬೈಡೆನ್‌ ಪರವಿದ್ದಾರೆ ಎನ್ನುವುದು ರಿಪಬ್ಲಿಕನ್‌ ಬೆಂಬಲಿಗರ ಆರೋಪ.

ಅಧ್ಯಕ್ಷೀಯ ಚರ್ಚೆಯಲ್ಲಿ ಮೈಕ್‌ ಮ್ಯೂಟ್‌!
ಅಮೆರಿಕದಲ್ಲಿ ಚುನಾವಣೆಗೂ ಮುನ್ನ ಅಧ್ಯಕ್ಷೀಯ ಅಭ್ಯರ್ಥಿಗಳ ನಡುವೆ ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ. ನಾಲ್ಕರಿಂದ ಐದು ವಿಷಯಗಳನ್ನು ಆಯ್ಕೆ ಮಾಡಿ, ಅದರ ಮೇಲೆ ಅಭ್ಯರ್ಥಿಗಳಿಬ್ಬರೂ ತಮ್ಮ ವಾದ ಮಂಡಿಸಬೇಕು. ಸೆಪ್ಟಂಬರ್‌ 29ರಂದು ಟ್ರಂಪ್‌ ಮತ್ತು ಜೋ ಬೈಡೆನ್‌ ನಡುವೆ ನಡೆದ ಚರ್ಚೆಯು ಇದುವರೆಗಿನ ಅತ್ಯಂತ ಕಳಪೆ ಚರ್ಚೆಯೆಂದು ಕರೆಸಿಕೊಂಡಿತು. ಏಕೆಂದರೆ, ಟ್ರಂಪ್‌ ಹಾಗೂ ಬೈಡೆನ್‌ ಪರಸ್ಪರರ ಮಾತುಗಳನ್ನು ತುಂಡರಿಸುತ್ತಾ ಹೋದರು. ಒಂದು ಹಂತದಲ್ಲಂತೂ ಟ್ರಂಪ್‌ ಬೈಡನ್‌ರ ಮಾತಿಗೆ ಅಡ್ಡಿಪಡಿಸುತ್ತಲೇ ಹೋದಾಗ ಸಿಟ್ಟಾದ ಬೈಡನ್‌ “ವಿಲ್‌ ಯು ಶಟ್‌ ಅಪ್‌ ಮ್ಯಾನ್‌’ (ಬಾಯಿಮುಚ್ಚಿ ಕೊಂಡು ಇರ್ತೀಯಾ?) ಎಂದು ರೇಗಿಬಿಟ್ಟರು. ಈ ಕಾರಣಕ್ಕಾಗಿಯೇ, ಅಕ್ಟೋಬರ್‌ 22ರಂದು ಅಮೆರಿಕದ ನ್ಯಾಶ್‌ವಿಲ್ಲೆಯಲ್ಲಿ ರಾತ್ರಿ 9 ಗಂಟೆಗೆ (ಭಾರತೀಯ ಕಾಲಮಾನ: ಶುಕ್ರವಾರ ಬೆಳಗ್ಗೆ 7.30ಕ್ಕೆ) ಆಯೋಜನೆಯಾಗಿರುವ ಚರ್ಚೆಯಲ್ಲಿ ಹೊಸ ನಿಯಮ ತರಲಾಗಿದೆ! ಈ ಚರ್ಚೆಯಲ್ಲಿ ಬೈಡನ್‌ ಮಾತನಾಡುವಾಗ ಟ್ರಂಪ್‌ರ ಮೈಕ್‌ ಮ್ಯೂಟ್‌ ಮಾಡಲಾಗುತ್ತದೆ. ಟ್ರಂಪ್‌ ಮಾತನಾಡುವಾಗ ಬೈಡನ್‌ರ ಮೈಕ್‌ ಮ್ಯೂಟ್‌ ಆಗಲಿದೆ!

ಟೀಕಾಸ್ತ್ರ
ಕೋವಿಡ್‌ ತಡೆಯುವಲ್ಲಿ ಟ್ರಂಪ್‌ ಆಡಳಿತ ವಿಫ‌ಲವಾಗಿದೆ ಎಂದು ಜೋ ಬೈಡನ್‌ ಟೀಕಾಸ್ತ್ರ ಹರಿಸುತ್ತಿದ್ದು, ಈ ವಿಚಾರ ಟ್ರಂಪ್‌ ಆಡಳಿತಕ್ಕೆ ಮಾರಕವಾಗುತ್ತದಾ ಎನ್ನುವ ಬಗ್ಗೆ ಸ್ಪಷ್ಟತೆ ಮೂಡುತ್ತಿಲ್ಲ. ಆದರೆ, ಅತ್ತ ಟ್ರಂಪ್‌ ಶಾಸನ ಕೋವಿಡ್‌ ವೇಳೆಯಲ್ಲಿ ಜನರಿಗೆ ನೇರ ಹಣ ಪಾವತಿ, ಕಂಪೆನಿಗಳಿಗೆ ಚೇತರಿಕೆ ಫ‌ಂಡ್‌ ನೀಡಿದ್ದಷ್ಟೇ ಅಲ್ಲದೇ ಈ ಬಿಕ್ಕಟ್ಟಿನ ಸಮಯದಲ್ಲಿ ಅಮೆರಿಕದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳುವಂತೆ ಮಾಡಿದ್ದೇವೆ ಎಂದು ವಾದಿಸುತ್ತದೆ. ಕೋವಿಡ್‌ ಸಂಕಟಕ್ಕೆ ಚೀನವನ್ನು ನಿರಂತರವಾಗಿ ದೂಷಿಸುತ್ತಲೇ ಬಂದಿರುವ ಟ್ರಂಪ್‌, ಬೈಡನ್‌ರಿಂದಾಗಿ 8 ವರ್ಷಗಳವರೆಗೆ ಅಮೆರಿಕದ ಉದ್ಯೋಗಗಳು ಚೀನಕ್ಕೆ ಹರಿದುಹೋಗಿದ್ದವು, ನಾನು ಅವನ್ನು ವಾಪಸ್‌ ತಂದಿದ್ದೇನೆ, ಈಗ ಬೈಡನ್‌ ಗೆದ್ದರೆ ಚೀನ ಗೆದ್ದಂತೆಯೇ ಅರ್ಥ ಎನ್ನುತ್ತಾರೆ. ಇನ್ನು ಕಪ್ಪುವರ್ಣೀಯ ಜಾರ್ಜ್‌ ಫ್ಲಾಯ್ಡ ಎನ್ನುವ ವ್ಯಕ್ತಿಯನ್ನು ಶ್ವೇತವರ್ಣೀಯ ಪೊಲೀಸನೊಬ್ಬ ಕೊಂದ ವಿಚಾರ ಭಾರೀ ಪ್ರತಿಭಟನೆಗಳಿಗೂ ಕಾರಣವಾಗಿದ್ದು, ಟ್ರಂಪ್‌ ಅವಧಿಯಲ್ಲಿ ಜನಾಂಗೀಯ ದ್ವೇಷ ಅಧಿಕವಾಗುತ್ತಿದೆ ಎನ್ನುವುದು ಡೆಮಾಕ್ರಾಟ್‌ಗಳ ವಾದ, ಆದರೆ ಡೆಮಾಕ್ರಾಟ್‌ಗಳು ದುರುದ್ದೇಶದಿಂದ ಈ ವಿಚಾರಕ್ಕೆ ರಾಜಕೀಯ ಬಣ್ಣ ಬಳಿದು, ಜನರ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತದೆ ರಿಪಬ್ಲಿಕನ್‌ ಪಾರ್ಟಿ.

ಸಮೀಕ್ಷೆಗಳು ಏನು ಹೇಳುತ್ತಿವೆ?
ಬಹುತೇಕ ಚುನಾವಣ ಪೂರ್ವ ಸಮೀಕ್ಷೆಗಳು ಬೈಡನ್‌ಗೆà ಜನಮತ ಅಧಿಕವಿದೆ ಎಂದು ಹೇಳುತ್ತಿವೆ. ಕಳೆದ ಬಾರಿಯ ಚುನಾವಣೆಯಲ್ಲೂ ಬಹುತೇಕ ಸಮೀಕ್ಷೆಗಳು ಟ್ರಂಪ್‌ ಸೋಲುತ್ತಾರೆ ಎಂದೇ ಹೇಳಿದ್ದವು. ಆಗ ಡೆಮಾಕ್ರಟಿಕ್‌ ಪಕ್ಷದಿಂದ ಕಣಕ್ಕಿಳಿ ದಿದ್ದ ಹಿಲರಿಯೇ ಅಧ್ಯಕ್ಷೆಯಾಗುತ್ತಾರೆ ಎಂದಿದ್ದವು. ಆದರೆ, ಸಮೀಕ್ಷೆಗಳಿಗೂ ಫ‌ಲಿತಾಂಶಕ್ಕೂ ತಾಳಮೇಳ ವಿಲ್ಲದಂತಾಯಿತು. ಈ ಬಾರಿ ಯೂ ಆಗಿನಂತೆಯೇ ಎಲ್ಲ ಸಮೀಕ್ಷೆಗಳು ಸುಳ್ಳಾಗುತ್ತವೆ ಎನ್ನುತ್ತಾರೆ ರಿಪಬ್ಲಿಕನ್ನರು.

Advertisement

Udayavani is now on Telegram. Click here to join our channel and stay updated with the latest news.

Next