Advertisement

ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಹೇಗೆ?

03:45 AM Feb 06, 2017 | Harsha Rao |

ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದು ಮೂವತ್ತು ವರ್ಷಗಳು ಕಳೆಯುತ್ತಾ ಬಂದಿದ್ದರೂ, ಗ್ರಾಮವಾಸಿಗಳು, ವಿಶೇಷವಾಗಿ ರೈತರು ನಿರೀಕ್ಷಿತ ಮಟ್ಟದಲ್ಲಿ ಅದರ ಉಪಯೋಗ ಪಡೆದೇ ಇಲ್ಲ. ರೈತರಲ್ಲಿ ಈ ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದು ಅನೇಕ ವರದಿ ಮತ್ತು ಸಮೀಕ್ಷೆಗಳಿಂದ ಸ್ಪಷ್ಟವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದೇ ಪದೇ ಇದನ್ನು ಪ್ರಸ್ತಾಪಿಸಿ, ಗ್ರಾಹಕ ಜಾಗೃತಿ ಕೇವಲ ನಗರಕ್ಕೆ ಸೀಮಿತವಾಗಿದ್ದರೆ ಅದರಿಂದ ಯಾವುದೇ ನಿಜವಾದ ಬದಲಾವಣೆ ಸಾಧ್ಯವಿಲ್ಲವೆಂದು ಹೇಳುತ್ತಿದೆ. ಇದೆಲ್ಲವೂ ಸರಿಯೆ. ಆದರೆ ಈ ಸಮಸ್ಯೆಗೆ ಕಾರಣ ಹುಡುಕಿ ಕಾರ್ಯಕ್ರಮವೊಂದನ್ನು ರೂಪಿಸಿ ಕ್ರಮ ಕೈಗೊಳ್ಳುವುದು ಸರ್ಕಾರ ಮತ್ತ ಗ್ರಾಹಕ ಸಂಘಟನೆಗಳ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಗ್ರಾಮವಾಸಿಗಳು ಮತ್ತು ರೈತರ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ. 

Advertisement

ಗ್ರಾಮಾಂತರ ಪ್ರದೇಶಗಳ ಮಾರುಕಟ್ಟೆಯ ಸ್ವರೂಪವೇ ವಿಭಿನ್ನವಾದದ್ದು. ಆರ್ಥಿಕ ತಜ್ಞರು ಏನೇ ಹೇಳಿದರೂ, ಗ್ರಾಮಸ್ಥರಿಗೆ ಅನೇಕ ತೊಂದರೆಗಳಿದೆ. ಉದಾಹರಣೆಗೆ ನಗರವಾಸಿಗಳಂತೆ, ಗ್ರಾಮಸ್ಥರಿಗೆ ಆಯ್ಕೆಯ ಹಕ್ಕು ಸೀಮಿತವಾದದ್ದು. ಊರಿನಲ್ಲಿ ಒಂದೆರಡು ಅಂಗಡಿಗಳನ್ನು ಹೊರತುಪಡಿಸಿದರೆ, ಗ್ರಾಮದ ಗ್ರಾಹಕರಿಗೆ ಅನ್ಯ ಮಾರ್ಗವಿಲ್ಲ. ತಮಗೆ ಬೇಕಾದ ಅಗತ್ಯ ಸರಕುಗಳನ್ನು ಈ ಅಂಗಡಿಯಲ್ಲೆ ಖರೀದಿಸಬೇಕು. ಒಂದೆರಡು ಔಷಧ ಮಾರಾಟಮಾಡುವ ಅಂಗಡಿಗಳಿದ್ದು, ಬಳಕೆದಾರರು ಅದನ್ನೇ ಅವಲಂಬಿಸಬೇಕಿದೆ. ಎಲ್ಲಿ ಆಯ್ಕೆ ಇರುವುದಿಲ್ಲವೊ ಅಲ್ಲಿ ಗ್ರಾಹಕರ ಶೋಷಣೆ ಇರುತ್ತದೆ. ಬೆಲೆ, ಗುಣಮಟ್ಟ, ವೈವಿದ್ಯತೆ, ಲಭ್ಯತೆ ಇತ್ಯಾದಿ ಎಲ್ಲವೂ ಗ್ರಾಹಕರನ್ನು ಕಾಡುತ್ತದೆ. ನಗರವಾಸಿಗಳಂತೆ ಗ್ರಾಮಸ್ಥರು ಅನೇಕ ಟಿವಿ ಚಾನೆಲ್‌ಗ‌ಳನ್ನು ನೋಡಬಹುದು. ಆದರೆ ಆ ರೀತಿಯ ಆಯ್ಕೆ ಇತರೆ ಸರಕು ಮತ್ತು ಸೇವೆಗಳಿಗೆ ವಿಸ್ತರಿಸಿದಾಗ ಮಾತ್ರ ಗ್ರಾಮಾಂತರ ಪ್ರದೇಶದಲ್ಲಿ ಸ್ಪರ್ಧೆಯನ್ನು ಕಾಣಬಹುದು. 

ಇದನ್ನು ಮಾಡುವುದು ಹೇಗೆ ?
ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಮತ್ತು ಜಾತಿಗೆ ದೊರೆಯುವಷ್ಟು ಪ್ರಾಮುಖ್ಯತೆ ಗ್ರಾಹಕರ ಹಿತರಕ್ಷಣೆಗೆ ದೊರೆಯುತ್ತಿಲ್ಲ. ನೀವು ಯಾವುದೆ ಗ್ರಾಮದಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ. ಆ ಊರಿನ ರಾಜಕೀಯ ಅಥವಾ ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹಿಸಿದರೆ ಮಾತ್ರ ಸಾರ್ವಜನಿಕರು ಪಾಲ್ಗೊಳ್ಳುತ್ತಾರೆ.

ಸಾರ್ವಜನಿಕರು ರಾಜಕೀಯಕ್ಕಾಗಲಿ ಅಥವಾ ಧರ್ಮಕ್ಕಾಗಲಿ ಆದ್ಯತೆ ನೀಡಬಾರದು ಎಂಬುದು ಇದರ ಅರ್ಥವಲ್ಲ. ಆದರೆ ಗ್ರಾಹಕ ಸಮಸ್ಯೆ ಮತ್ತು ಅದಕ್ಕಿರುವ ಪರಿಹಾರ ಮಾರ್ಗವನ್ನು ಅರಿತುಕೊಳ್ಳಲು ಜನ ಮುಂದೆ ಬಾರದಿದಲ್ಲಿ, ಸಂಘಟಕರು ಮಾಡುವುದಾದರೂ ಏನು? ಗ್ರಾಹಕ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಸರ್ಕಾರಿ ಇಲಾಖೆಗಳೂ ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿದೆ. ಅದು ಆಹಾರ ಸುರಕ್ಷತೆಯಾಗಲಿ, ತೂಕ ಅಥವಾ ಅಳತೆಯಾಗಲಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಒಬ್ಬ ಆಹಾರ ಸುರಕ್ಷತಾ ಅಧಿಕಾರಿ ಎರಡು ಅಥವಾ ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಹೇಗೆ ನಿಭಾಯಿಸಲು ಸಾಧ್ಯ? ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳ ಹಣೆಬರಹವೂ ಇದೇ ಆಗಿದೆ. ಸಾಕಷ್ಟು ಪ್ರಮಾಣದಲ್ಲಿ ದೂರುಗಳು ದಾಖಲಾಗುತ್ತಿಲ್ಲ ಎಂದು ಸರ್ಕಾರ ಜಿಲ್ಲೆಗೊಂದು ವೇದಿಕೆಯನ್ನು ಸ್ಥಾಪಿಸಲು ಹಿಂದೇಟು ಹಾಕುತ್ತಿದೆ. ಮತ್ತೂಂದೆಡೆ, ಜಿಲ್ಲಾ ಗ್ರಾಹಕ ವೇದಿಕೆ ಇಲ್ಲದೆ ನಾವು ಎಲ್ಲಿ ದೂರು ಸಲ್ಲಿಸುವುದು ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ. ಹುಚ್ಚು ಬಿಡುವುವವರೆಗೂ ಮದುವೆ ಆಗುವುದಿಲ್ಲ. ಮದುವೆ ಆಗುವ ತನಕ ಹುಚ್ಚು ಬಿಡುವುದಿಲ್ಲ ಎಂಬಂತಾಗಿದೆ ಅಥವಾ ಮೊಟ್ಟೆ ಮೊದಲೊ, ಹುಂಜ ಮೊದಲೋ ಎಂಬಂತಾಗಿದೆ.

ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಹಕ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಗ್ರಾಹಕ ಸಂರಕ್ಷಣಾ ಕಾಯ್ದೆಯಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಗ್ರಾಹಕ ಸಂರಕ್ಷಣಾ ಪರಿಷತ್ತನ್ನು ಸ್ಥಾಪಿಸಬೇಕೆಂದು ಕಾಯ್ದೆ ಹೇಳುತ್ತದೆ. ಆದರೆ ರಾಜ್ಯದಲ್ಲಿ ಕಳೆದ ಆರೆಂಟು ವರ್ಷಗಳಿಂದ ಈ ಪರಿಷತ್ತುಗಳು ಸ್ಥಾಪನೆಗೊಂಡಿಲ್ಲ. ಎಲ್ಲಿ ಪರಿಷತ್ತುಗಳನ್ನು ರಚಿಸಲಾಗಿತ್ತೋ ಅದರ ಅವಧಿ ಮುಗಿದ ನಂತರ ಸರ್ಕಾರ ಅದನ್ನು ಪುನರ್‌ರಚಿಸಿಲ್ಲ. ಜಿಲ್ಲಾ ಗ್ರಾಹಕ ಸಂರûಾ ಪರಿಷತ್ತು ಇದ್ದಲ್ಲಿ ಎಲ್ಲ ಸಮಸ್ಯೆಗಳೂ ಬಗೆ ಹರಿಯುತ್ತದೆ ಎಂದು ಇದರ ಅರ್ಥವಲ್ಲ. ಕನಿಷ್ಟ ಗ್ರಾಹಕರ ಕುಂದುಕೊರತೆಗಳನ್ನು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ಇದರತ್ತ ಗಮನ ಹರಿಸುವುದು ಅವಶ್ಯ. 

Advertisement

ಗ್ರಾಮಮಟ್ಟದಲ್ಲಿ ಅನೇಕ ಸ್ವಯಂ ಸೇವಾ ಸಂಸ್ಥೆಗಳಿದ್ದು, ಗ್ರಾಹಕರಲ್ಲಿ ಜಾಗೃತಿ ಉಂಟು ಮಾಡಲು ಶ್ರಮಿಸುತ್ತಿದೆ. ಆದರೆ ನಗರ ಮತ್ತು ರಾಜಧಾನಿಯ ಸಂಸ್ಥೆಗಳಿಗೆ ದೊರೆಯುವ ಸೌಲಭ್ಯ, ಸವಲತ್ತು, ಮಾಧ್ಯಮದಿಂದ ಸಹಾಯ ಈ ಸ್ವಯಂಸೇವಾ ಸಂಸ್ಥೆಗಳಿಗೆ ಸಿಗುತ್ತಿಲ್ಲ. ಪರಿಸರ, ಶಿಕ್ಷಣ, ಆರೋಗ್ಯ ಇತ್ಯಾದಿ ವಿಷಯಗಳಿಗೆ ದೊರೆಯುವಷ್ಟು ಹಣ ಮತ್ತು ಸಹಾಯ, ಗ್ರಾಹಕ ಸಂರಕ್ಷಣೆಗೆ ದೊರೆಯುತ್ತಿಲ್ಲ. ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಲಿಟಿ ಯೋಜನೆಯ ಅಡಿಯಲ್ಲಿ ಗ್ರಾಹಕ ಸಂರಕ್ಷಣೆಗೆ ಒಂದು ಬಿಡಿಗಾಸೂ ದೊರೆಯುತ್ತಿಲ್ಲ. ಕಾರಣ ಗ್ರಾಹಕರ ರಕ್ಷಣೆಯನ್ನು ಉದ್ಯಮ ವಿರೋಧಿಸುತ್ತದೆ. ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಉಂಟು ಮಾಡಿದಲ್ಲಿ ಎಲ್ಲಿ ತಮ್ಮ ಸರಕುಗಳಲ್ಲಿರುವ ದೋಷ ತಿಳಿದು ಗ್ರಾಹಕರು ಅದಕ್ಕೆ ಬಹಿಷ್ಕಾರ ಹಾಕುತ್ತಾರೋ ಎಂಬ ಅಂಜಿಕೆ ಉದ್ಯಮದಲ್ಲಿದೆ. ದೂರಸಂಪರ್ಕ ಕಂಪನಿಗಳು, ಔಷಧಿ ಮಾರಾಟಗಾರರು, ಜಾಹೀರಾತುದಾರರು ಇತ್ಯಾದಿ ಗ್ರಾಹಕ ಸಂರಕ್ಷಣೆಯಲ್ಲಿ ನಿರತವಾಗಿರುವ ಸಂಸ್ಥೆಗೆ ಅನುದಾನ ಅಥವಾ ದೇಣಿಗೆ ನೀಡಿದ್ದನ್ನು ಕಂಡಿದ್ದೀರಾ?. ಗ್ರಾಹಕ ಸಂಸ್ಥೆಗಳು ಎಲ್ಲೇ ಇರಲಿ ಕೆಲವನ್ನು ಹೊರತುಪಡಿಸಿ, ತನ್ನ ಚಟುವಟಿಕೆಗಳಿಗೆ ಸರ್ಕಾರವನ್ನೇ ಅವಲಂಭಿಸಬೇಕಿದೆ. ಈ ಪರಿಸ್ಥಿತಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಜಾಗೃತಿ ಉಂಟುಮಾಡುವುದು ಹೇಗೆ?

– ವೈ.ಜಿ.ಮುರಳೀಧರನ್‌

Advertisement

Udayavani is now on Telegram. Click here to join our channel and stay updated with the latest news.

Next