Advertisement

ಏಕಾಗ್ರತೆ ಸಾಧಿಸುವುದು ಹೇಗೆ?

12:52 AM Aug 28, 2019 | mahesh |

ಒಬ್ಬ ಸಾಮಾನ್ಯ ವ್ಯಕ್ತಿಗೂ ಮತ್ತು ಮಹಾನ್‌ ವ್ಯಕ್ತಿಗೂ ಇರುವ ವ್ಯತ್ಯಾಸವೆಂದರೆ, ಅವರಲ್ಲಿನ ಏಕಾಗ್ರತೆಯ ಮಟ್ಟ

Advertisement

ಏಕಾಗ್ರತೆಯನ್ನು ಸಾಧಿಸುವುದು ಹೇಗೆ? ನಮ್ಮ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು ಹೇಗೆ? ಅದೇ ಸ್ಥಿತಿಯಲ್ಲಿ ಬಹಳ ಹೊತ್ತು ಇರುವುದು ಹೇಗೆ? ಇವು ನಿಜಕ್ಕೂ ಅತ್ಯಂತ ಮಹತ್ತರ ಪ್ರಶ್ನೆಗಳು. ಏಕೆಂದರೆ, ಜೀವನದಲ್ಲಿ ಯಶಸ್ವಿಯಾಗಲು ಮತ್ತು ಆಧ್ಯಾತ್ಮಿಕವಾಗಿ ಎತ್ತರಕ್ಕೇರಲು ಮನಸ್ಸನ್ನು ಕೇಂದ್ರೀಕರಿಸುವುದು ಬಹಳ ಮುಖ್ಯವಾದದ್ದು.

‘ಒಬ್ಬ ಸಾಮಾನ್ಯ ವ್ಯಕ್ತಿಗೂ ಮತ್ತು ಮಹಾನ್‌ ವ್ಯಕ್ತಿಗೂ ಇರುವ ವ್ಯತ್ಯಾಸವೆಂದರೆ, ಅವರಲ್ಲಿನ ಏಕಾಗ್ರತೆಯ ಮಟ್ಟ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದ. ಖುದ್ದು ಸ್ವಾಮಿ ವಿವೇಕಾನಂದರೂ ಕೂಡ ಅಸಾಧಾರಣ ಮಟ್ಟದ ಏಕಾಗ್ರತೆಯ ಶಕ್ತಿಯನ್ನು ಹೊಂದಿದ್ದರು. ರಾಜಯೋಗ ಮತ್ತು ಪತಂಜಲಿಯೋಗದಂಥ ಯೋಗ ಮಾರ್ಗಗಳಿವೆಯಲ್ಲ ಅವು ಏಕಾಗ್ರತೆಯ ಶ್ರೇಷ್ಠ ಹಂತಗಳು.

ಆಧುನಿಕ ಮನಶಾÏಸ್ತ್ರವೂ ಕೂಡ ಏಕಾಗ್ರತೆಯ ಶಕ್ತಿಯ ಬಗ್ಗೆ ಬಹಳ ಸಂಶೋಧನೆ ನಡೆಸಿದೆ. ‘ನಮ್ಮ ಜೀವನದ ಗುಣಮಟ್ಟವು ನಾವು ಎಷ್ಟು ಏಕಾಗ್ರತೆಯನ್ನು ಸಾಧಿಸಬಲ್ಲೆವು, ಮತ್ತು ಯಾವುದರತು ಏಕಾಗ್ರರಾಗಿರುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ’ ಎನ್ನುತ್ತಾರೆ ಮನಶಾÏಸ್ತ್ರಜ್ಞರೊಬ್ಬರು. ಅಂದರೆ ಮನಸ್ಸನ್ನು ಕೇಂದ್ರೀಕರಿಸುವುದಷ್ಟೇ ಅಲ್ಲ, ಅದನ್ನು ಯಾವುದರತ್ತ ಕೇಂದ್ರೀಕರಿಸಿರುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

ರ್ಯಾಪ್ಟ್(- RAPT) ಎನ್ನುವ ಪುಸ್ತಕ ಬರೆದಿರುವ ವಿನ್‌ಫ್ರೆಡ್‌ ಗಲ್ಲಾಘರ್‌ ಎನ್ನುವ ಲೇಖಕಿ ಅದರಲ್ಲಿ ಕ್ಯಾನ್ಸರ್‌ ಪೀಡಿತ ಹೆಣ್ಣುಮಗಳೊಬ್ಬಳ ಕಥೆಯನ್ನು ಬರೆದಿದ್ದಾರೆ.

Advertisement

ಕ್ಯಾನ್ಸರ್‌ ರೋಗದಿಂದಾಗಿ ಬಹುಕಾಲ ನರಳಿದ್ದ ಆ ಹೆಣ್ಣುಮಗಳು ‘ಈ ನೋವಿನಿಂದ ತಪ್ಪಿಸಿಕೊಳ್ಳುವುದಕ್ಕಂತೂ ನನಗೆ ಸಾಧ್ಯವಿಲ್ಲ. ಇದು ಅನಿವಾರ್ಯ, ಅನುಭವಿಸಲೇಬೇಕು. ಆದರೆ ಈ ನೋವಿನ ಮೇಲೆ ನನ್ನ ಗಮನ ಕೇಂದ್ರೀಕರಿಸಿದರೆ ಇನ್ನಷ್ಟು ವೇದನೆಯಾಗುತ್ತದೆ. ಹಾಗಾಗಿ, ಇನ್ಮುಂದೆ ನಾನು ನೋವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಅದರ ಬದಲು ನನ್ನ ಗಮನವನ್ನು ಕಲೆಯತ್ತ ಕೇಂದ್ರೀಕರಿಸುತ್ತೇನೆ’ ಎಂದು ನಿರ್ಧರಿಸುತ್ತಾಳೆ. ಯಾವಾಗ ಆಕೆ ನೋವು, ಕ್ಯಾನ್ಸರ್‌, ಮೆಡಿಕಲ್ ಬಿಲ್ನ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ನಿಲ್ಲಿಸಿ ಕಲೆಯತ್ತ ಗಮನ ಹರಿಸಿದಳ್ಳೋ ಆಗ ಆಕೆಯ ಜೀವನ ಸುಖಕರವಾಯಿತು. ‘ಕ್ಯಾನ್ಸರ್‌ ಬರುವುದಕ್ಕಿಂತ ಮೊದಲು ಹೇಗಿದ್ದೆನೋ ಅದಕ್ಕಿಂತಲೂ ಹೆಚ್ಚು ಸಂತೋಷಯುತ ಜೀವನ ನನ್ನದಾಯಿತು’ ಎನ್ನುತ್ತಾಳೆ ಆಕೆ. 17ನೇ ಶತಮಾನದ ಆಂಗ್ಲ ಕವಿ ಜಾನ್‌ ಮಿಲ್ಟನ್‌ ತನ್ನ ಮಹಾಕಾವ್ಯ Paradise Lost ನಲ್ಲಿ ‘ಮನಸ್ಸು ತನ್ನೊಳಗೆ ತಾನೇ ನರಕವನ್ನು ಸ್ವರ್ಗವಾಗಿಸಬಲ್ಲ, ಸ್ವರ್ಗವನ್ನು ನರಕವಾಗಿಸಬಲ್ಲ ಜಾಗ’ ಎಂದು ಬರೆದದ್ದು ಇದೇ ಕಾರಣದಿಂದಲೇ ಅಲ್ಲವೇ?

ಮನಸ್ಸಿನ ಸಾಮರ್ಥ್ಯ, ಏಕಾಗ್ರತೆಯ ಶಕ್ತಿಯ ಬಗ್ಗೆ ಅನೇಕರು ಆಳವಾದ ಅಧ್ಯಯನ ನಡೆಸಿದ್ದಾರೆ. ಹಂಗೇರಿಯನ್‌-ಅಮೆರಿಕನ್‌ ಮನಶಾÏಸ್ತ್ರಜ್ಞ ಮಿಹಾಯ್ಲ ಜಿಗ್ಸನ್‌ಮಿಹಾಯ್ಲನ Flow: The Psychology of Optimal Experience ಪುಸ್ತಕವನ್ನು ನೀವು ಓದಿರಬಹುದು. ಅದರಲ್ಲಿ ಆತ ಏಕಾಗ್ರತೆಯ ಶಕ್ತಿ ಮತ್ತು ಜೀವನದ ಗುಣಮಟ್ಟದ ನಡುವಿನ ಸಂಬಂಧವನ್ನು ಅನ್ವೇಷಿಸುತ್ತಾನೆ. ತನ್ನ ಪುಸ್ತಕರದಲ್ಲಿ ಮಿಹಾಯ್ಲ, ಪತಂಜಲಿ ಯೋಗ ಸೂತ್ರವನ್ನು ಉಲ್ಲೇಖೀಸುತ್ತಾನೆ. ಏಕಾಗ್ರತೆಯ ಹರಿವು ಅಥವಾ ಫ್ಲೋ ಅನ್ನು ಸಾಧಿಸುವ ಅತ್ಯುತ್ತಮ ಮಾರ್ಗವು ಪತಂಜಲಿ ಯೋಗದಲ್ಲಿದೆ ಎಂದು ಹೇಳುತ್ತಾನೆ.

ಏಕಾಗ್ರತೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪತಂಜಲಿ ಯೋಗವು ಒಂದು ಮಾರ್ಗ ಎಂದಂತಾಯಿತು. ಪತಂಜಲಿ ಯೋಗದಲ್ಲಿ ನೀವು ನಿಮ್ಮ ಗಮನವನ್ನು ಒಂದೇ ವಸ್ತುವಿನತ್ತ ಕೇಂದ್ರೀಕರಿಸುತ್ತಾ, ಮನದೊಳಗೆ ಬರುವ ಉಳಿದ ವಿಚಾರಗಳನ್ನೆಲ್ಲ ದೂರತಳ್ಳುತ್ತಾ ಮತ್ತೆ ಮೂಲ ವಸ್ತುವಿನತ್ತ ಮರಳುವಂತೆ ಮಿದುಳಿಗೆ ತರಬೇತಿ ನೀಡುತ್ತೀರಿ.

ಮಿಹಾಯ್ಲ ಅವರು ಪತಂಜಲಿ ಯೋಗದಲ್ಲಿನ ಈ ಅಂಶದ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆೆ. ಏಕಾಗ್ರತೆ ಎನ್ನುವುದು ಎರಡು ಅಂಶಗಳನ್ನು ಆಧರಿಸಿದೆ. ಒಂದು ನಿಮ್ಮ ವಾತಾವರಣ(ಅಥವಾ ಮನಸ್ಸು) ಎದುರೊಡ್ಡುತ್ತಿರುವ ‘ಸವಾಲು’, ಎರಡನೆಯದು ಅದನ್ನು ನಿಭಾಯಿಸಬಲ್ಲ ನಿಮ್ಮ ‘ಕೌಶಲ’.

ಉದಾಹರಣೆಗೆ: ನೀವು ಟೆನ್ನಿಸ್‌ ಆಡಲು ಆರಂಭಿಸಿದ್ದೀರಿ ಎಂದುಕೊಳ್ಳಿ. ಆರಂಭದ ದಿನಗಳಲ್ಲಿ ನಿಮ್ಮ ಸಂಪೂರ್ಣ ಶಕ್ತಿ ಮತ್ತು ಕೌಶಲವು ಎದುರಾಳಿ ಹೊಡೆಯುವ ಚೆಂಡನ್ನು(ಆತನ ಸರ್ವ್‌ ಅನ್ನು) ಹಿಂದಿರುಗಿಸುವುದರತ್ತ ಮಾತ್ರ ಕೇಂದ್ರೀಕೃತವಾಗಿರುತ್ತದೆ. ಆತ ಸರ್ವ್‌ ಮಾಡುತ್ತಿದ್ದಂತೆಯೇ ಸಂಪೂರ್ಣ ಏಕಾಗ್ರತೆಯಿಂದ ಚೆಂಡನ್ನು ವಾಪಸ್‌ ಆತನ ಅಂಗಳಕ್ಕೆ ತಳ್ಳುವುದಷ್ಟೇ ನಿಮ್ಮ ಗುರಿಯಾಗಿರುತ್ತದೆ. ಆದರೆ ದಿನಗಳೆದಂತೆ ಅಷ್ಟು ಸಾಕಾಗುವುದಿಲ್ಲವಲ್ಲ, ಬರೀ ಎದುರಾಳಿ ಹೊಡೆದ ಚೆಂಡನ್ನು ತಿರುಗಿ ಹೊಡೆಯುತ್ತಾ ಹೋದರೆ ನಿಮಗೆ ಬೋರಾಗುತ್ತದೆ. ಆಟವನ್ನು ಇನ್ನಷ್ಟು ರೋಚಕಗೊಳಿಸುವತ್ತ ನಿಮ್ಮ ಗಮನ ಹರಿಯಲಾರಂಭಿಸುತ್ತದೆ, ತದನಂತರ ಉತ್ತಮ ಆಟಗಾರನೊಂದಿಗೆ ಆಟವಾಡುವತ್ತ ನೀವು ಗಮನಹರಿಸಲಾರಂಭಿಸುತ್ತೀರಿ…ಇದನ್ನು ಮಿಹಾಯ್ಲ ಏಕಾಗ್ರತೆಯ ಫ್ಲೋ ಅಥವಾ ಹರಿವು ಎಂದು ಕರೆಯುತ್ತಾರೆ..

ಅಂದರೆ ಏಕಾಗ್ರತೆ ಎನ್ನುವುದು ಸವಾಲು ಮತ್ತು ಕೌಶಲವನ್ನು ಒಳಗೊಂಡಂಥದ್ದು. ಸವಾಲು ಮತ್ತು ಕೌಶಲ ಸರಿಸಮನಾಗಿರಬೇಕು. ಸವಾಲು ನಿಮ್ಮ ಕೌಶಲಕ್ಕಿಂತ ದೊಡ್ಡದಾಗಿದ್ದರೆ, ಅದು ಮಾನಸಿಕ ಒತ್ತಡ, ದುಗುಡಕ್ಕೆ ಕಾರಣವಾಗುತ್ತದೆ. ಕೌಶಲವು ಸವಾಲಿಗಿಂತ ಕೆಳ ಮಟ್ಟಕ್ಕಿದ್ದರೆ ಆ ಕೆಲಸ ಬೋರ್‌ ಹೊಡೆಸುತ್ತದೆ. ಅವೆರಡೂ ಸಮತೋಲನದಲ್ಲಿರುವಾಗ ಮಾತ್ರ ಏಕಾಗ್ರತೆ ಸಾಧ್ಯವಾಗುತ್ತದೆ.

ಹಾಗಿದ್ದರೆ, ಪ್ರಾಯೋಗಿಕವಾಗಿ ಇದರ ಅರ್ಥವೇನು? ಏಕಾಗ್ರತೆ ಮತ್ತು ಫ್ಲೋ ಸಾಧ್ಯವಾಗಬೇಕು ಎಂದರೆ ನೀವು ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸವಾಲನ್ನು ಹೆಚ್ಚಿಸಿಕೊಳ್ಳಬೇಕು. ಯಾವಾಗ ನಿಮ್ಮ ಸುತ್ತಲಿನ ಪರಿಸರವು ನಿಮ್ಮ ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಮಾಣದ ಸವಾಲನ್ನು ಎದುರಿಟ್ಟಿತೆಂದರೆ, ಆ ಸವಾಲನ್ನು ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿ, ಒಂದೊಂದರತ್ತ ಗಮನಹರಿಸುತ್ತಾ ಹೋಗಬೇಕು.

ಆದರೆ ಏಕಾಗ್ರತೆ ಸಾಧಿಸುವ ಹಾದಿಯಲ್ಲಿ ಇರುವ ಅಡ್ಡಿಗಳು ಇವಷ್ಟೇ ಅಲ್ಲ. ಮತ್ತೂಂದು ಪ್ರಮುಖ ಅಡ್ಡಿಯಿದೆ. ಅದೇ ‘ಸ್ವಾರ್ಥ’. ನಾವು ಒಂದು ಸಂಗತಿಯತ್ತ ಗಮನ ಕೇಂದ್ರೀಕರಿಸುವಾಗ ಅದರಿಂದ ಕೇವಲ ನಮಗಷ್ಟೇ ಪ್ರಯೋಜನವಾಗಲಿ ಎಂಬ ಉದ್ದೇಶವಿದ್ದರೆ, ನಿಸ್ಸಂಶಯವಾಗಿಯೂ ಏಕಾಗ್ರತೆಗೆ ಭಂಗವಾಗುತ್ತದೆ. ಏಕೆಂದರೆ, ಆಗ ನಾವು ನಮಗೆ ಲಾಭವಾಗುತ್ತಿದೆಯೋ ಇಲ್ಲವೋ, ನಾನು ಮಾಡುತ್ತಿರುವುದು ನನಗೆ ಫ‌ಲಕೊಡುತ್ತದೋ ಇಲ್ಲವೋ ಎಂದು ಯೋಚಿಸಲಾರಂಭಿಸುತ್ತೇವೆ, ಆಗ ಏಕಾಗ್ರತೆಗೆ ಭಂಗ ಎದುರಾಗುವುದು ನಿಶ್ಚಿತ. ಅದೇ ಇನ್ನೊಂದೆಡೆ ನಿಸ್ವಾರ್ಥತೆ ಇದೆಯಲ್ಲ, ಅದು ಏಕಾಗ್ರತೆಯ ಬಹುದೊಡ್ಡ ಮಿತ್ರ. ನಿಸ್ವಾರ್ಥ ಮನಸ್ಸು ಶಾಂತವಾಗಿರುತ್ತದೆ. ನಿಮ್ಮ ಕೆಲಸವು ಯಾವಾಗ ನೀವು ದುಡಿಯುವ ಸಂಸ್ಥೆಯ, ನಿಮ್ಮ ಮನೆಯವರ ಅಥವಾ ಪ್ರೀತಿಪಾತ್ರರ ಹಿತಚಿಂತನೆಯನ್ನು ಬಯಸುತ್ತಿರುತ್ತದೋ ಆಗ ನಿಮ್ಮ ಮನಸ್ಸು ಹೆಚ್ಚು ಏಕಾಗ್ರತೆಯನ್ನು ಸಾಧಿಸುತ್ತದೆ.

ಸ್ವಾಮಿ ರಂಗನಾಥಾನಂದರು ಹೇಳುತ್ತಿದ್ದರು-”ಅಷ್ಟಕ್ಕೂ ಆಧ್ಯಾತ್ಮಿಕತೆ ಎಂದರೇನು? ಕಣ್ಣು ಮುಚ್ಚಿದಾಗ ಒಳಗೆ ಶಾಂತತೆಯನ್ನು ಪಡೆಯುವುದು, ಕಣ್ಣು ತೆರೆದಾಗ ಎದುರು ಕುಳಿತವರಿಗೆ ‘ನಿನಗೇನು ಕೊಡಲಿ?’ ಅಂತ ಕೇಳುವುದು” ಎನ್ನುತ್ತಿದ್ದರು. ಆದರೆ ಈಗೇನಾಗಿದೆಯೆಂದರೆ, ಕಣ್ಣು ಮುಚ್ಚುವ ವ್ಯಕ್ತಿಗೆ ಅಶಾಂತಿ ಎದುರಾಗುತ್ತದೆ, ನೂರಾರು ಯೋಚನೆಗಳು-ಭಾವನೆಗಳ ತುಳುಕಾಟ ಆರಂಭವಾಗಿಬಿಡುತ್ತದೆ. ಅವನು ಕಣ್ಣು ತೆರೆದವನೇ ಎದುರು ಕುಳಿತವರಿಗೆ, ‘ನೀವು ನನಗೇನು ಕೊಡುತ್ತೀ?’ ಎಂದು ಕೇಳುತ್ತಾನೆ.

ಅದಕ್ಕೇ ಹೇಳಿದ್ದು, ನಾವು ಯಾವ ಪ್ರಮಾಣದವರೆಗೂ ನಿಸ್ವಾರ್ಥರಾಗಿರುತ್ತೇವೋ, ಅಷ್ಟು ಪ್ರಮಾಣದಲ್ಲಿ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಆಗ ಏಕಾಗ್ರತೆ ಸಾಧಿಸಲು ಸುಲಭವಾಗುತ್ತದೆ.

ಏಕಾಗ್ರತೆಗೆ ಇರುವ ಅಡ್ಡಿಯೇನು ಎನ್ನುವುದನ್ನು ತಿಳಿದುಕೊಂಡೆವು. ಈಗ ಏಕಾಗ್ರತೆ ಪಡೆಯಲು ಪ್ರಮುಖ ಮಾರ್ಗ ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ. ಆ ಮಾರ್ಗ ಯಾವುದು ಗೊತ್ತೇ? ‘ಪ್ರೀತಿ’!

ಹೌದು, ಪ್ರೀತಿಯು ಏಕಾಗ್ರತೆಯ ರಹದಾರಿ. ಉದಾಹರಣೆಗೆ, ತಾಯಿಯೊಬ್ಬಳು ತನ್ನ ಮಗುವನ್ನು ಎಷ್ಟು ಪ್ರೀತಿಸುತ್ತಿರುತ್ತಾಳೆ ಎಂದರೆ, ಆಕೆಯ ಗಮನವೆಲ್ಲ ಆ ಮಗುವಿನೆಡೆಗೇ ಕೇಂದ್ರೀಕೃತವಾಗಿರುತ್ತದೆ. ಆಕೆಗೆ ಎಷ್ಟೇ ಡಿಸ್ಟರ್ಬೆನ್ಸಸ್‌ಗಳು ಎದುರಾದರೂ, ಅದನ್ನೆಲ್ಲ ದೂರಕ್ಕೆ ತಳ್ಳಿ ಮಗುವಿನತ್ತಲೇ ಚಿಂತನೆ ಹರಿಸುತ್ತಾಳೆ. ಅಂದರೆ ನೀವು ಮಾಡುವ ಕೆಲಸದ ಬಗ್ಗೆ ನಿಮಗೆ ಪ್ರೀತಿ ಇದ್ದಾಗ ನೀವು ಅದರತ್ತ ಸುಲಭವಾಗಿ ಮನಸ್ಸನ್ನು ಕೇಂದ್ರೀಕರಿಸಬಲ್ಲಿರಿ.

ಆಧ್ಯಾತ್ಮಿಕತೆಯ ಮಾರ್ಗದಲ್ಲಿ ಏಕಾಗ್ರತೆಗೆ ‘ಭಕ್ತಿ’ಯಂಥ ಸುಲಭ ಮಾರ್ಗ ಬೇರೊಂದಿಲ್ಲ. ದೇವರ ಮೇಲೆ ಭಕ್ತಿ ಇರುವ ವ್ಯಕ್ತಿ ಸುಲಭವಾಗಿ ದೇವರತ್ತ ಏಕಾಗ್ರತೆ ಸಾಧಿಸುತ್ತಾನೆ.

ಲೇಖಕರ ಕುರಿತು
ಸ್ವಾಮಿ ಸರ್ವಪ್ರಿಯಾನಂದರು ನ್ಯೂಯಾರ್ಕ್‌ನಲ್ಲಿನ ವೇದಾಂತ ಸೊಸೈಟಿಯ ಮಾರ್ಗದರ್ಶಕರಾಗಿದ್ದಾರೆ. ಭುವನೇಶ್ವರದ ಕ್ಸೇವಿಯರ್‌ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ನಿಂದ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್ ಪದವಿ ಪಡೆದಿರುವ ಸರ್ವಪ್ರಿಯಾನಂದರು ಆಧ್ಯಾತ್ಮ, ವೇದಾಂತ, ಶಿಕ್ಷಣ, ವಿಜ್ಞಾನ ಮತ್ತು ತತ್ವ ಶಾಸ್ತ್ರದ ಕುರಿತು ಆಸಕ್ತಿ ಹೊಂದಿದ್ದಾರೆ. ಅವರ ಪ್ರೇರಣಾದಾಯಕ ಪ್ರವಚನಗಳಿಗೆ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಕರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next