Advertisement

ಕಜಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ : ಅಧ್ಯಕ್ಷರ ನಿವಾಸ, ಮೇಯರ್‌ ಕಚೇರಿಗೆ ಬೆಂಕಿ

08:18 PM Jan 06, 2022 | Team Udayavani |

ಆಲ್ಮಟಿ/ಮಾಸ್ಕೋ: ಎಲ್‌ಪಿಜಿ ದರ ಏರಿಕೆ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೇಂದ್ರ ಏಷ್ಯಾ ರಾಷ್ಟ್ರ ಕಜಕಿಸ್ತಾನದ ಸರ್ಕಾರದ ವಿರುದ್ಧ ನಾಗರಿಕರು ರೊಚ್ಚಿಗೆದ್ದಿದ್ದಾರೆ. ಅವರು ಗುರುವಾರ ಅಧ್ಯಕ್ಷೀಯ ನಿವಾಸ ಮತ್ತು ಮೇಯರ್‌ ಕಚೇರಿಗಳಿಗೆ ಲಗ್ಗೆಯಿಟ್ಟು, ಬೆಂಕಿ ಹಚ್ಚಿದ್ದಾರೆ.

Advertisement

ಕಜಕಿಸ್ತಾನದಾದ್ಯಂತ ಹಿಂಸಾಚಾರ ತೀವ್ರಗೊಂಡಿದ್ದು, ಹಲವು ಕಡೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದಿವೆ. ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಲು ಬಂದಿದ್ದವರ ಪೈಕಿ 12 ಮಂದಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. 8 ಪೊಲೀಸರು ಮತ್ತು ನ್ಯಾಷನಲ್‌ ಗಾರ್ಡ್‌ನ ಒಬ್ಬ ಅಧಿಕಾರಿಯನ್ನು ಪ್ರತಿಭಟನಾಕಾರರು ಹತ್ಯೆಗೈದಿದ್ದಾರೆ.

ಈ ಗಲಭೆಯಲ್ಲಿ ಸುಮಾರು ಒಂದು ಸಾವಿರ ಮಂದಿ ಗಾಯಗೊಂಡಿದ್ದು, 400 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಲ್ಮಟಿಯ ಮೇಯರ್‌ ಕಚೇರಿ ಮತ್ತು ಕಜಕಿಸ್ತಾನದ ವಿಮಾನ ನಿಲ್ದಾಣದ ಮೇಲೂ ದಾಳಿ ಮಾಡಲಾಗಿದೆ. ಜಲಫಿರಂಗಿ ಪ್ರಯೋಗ ಮಾಡುವ ಮೂಲಕ ಪ್ರತಿಭಟನಾಕಾರರನ್ನು ಚದುರಿಸಲಾಗಿದೆ. ಗಲಭೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಕಾಸ್ಯಮ್‌- ಜೋಮಾರ್ಟ್‌ ಟೋಕಯೇವ್‌ ಅವರು ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜತೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ರಷ್ಯಾ ಪಡೆಗಳು ಆಗಮಿಸಿವೆ.

ಹಿಂಸಾಚಾರಕ್ಕೆ ಕಾರಣವೇನು?
ಅಪಾರ ನೈಸರ್ಗಿಕ ಸಂಪತ್ತು ಇದ್ದರೂ, ಕಜಕಿಸ್ತಾನ ಸರ್ಕಾರವು ರಾತ್ರೋರಾತ್ರಿ ಎಲ್‌ಪಿಜಿ ದರವನ್ನು ಏರಿಕೆ ಮಾಡಿದ್ದೇ ಕಾರಣ. ಎಲ್‌ಪಿಜಿಯ ದರದ ಮಿತಿಯನ್ನು ಜ.1ರಿಂದ ಸರ್ಕಾರ ತೆಗೆದುಹಾಕಿತ್ತು. ಹೀಗಾಗಿ, ಲೀಟರ್‌ಗೆ 8.55 ರೂ. ಇದ್ದ ಎಲ್‌ಪಿಜಿ ದರ 20.52 ರೂ.ಗೆ ಏರಿತು. ಇದರಿಂದ ಜನ ರೊಚ್ಚಿಗೆದ್ದರು. ಇದರ ಜೊತೆಗೆ ಸರ್ಕಾರದ ಭ್ರಷ್ಟಾಚಾರ, ಹದಗೆಟ್ಟ ಬ್ಯಾಂಕಿಂಗ್‌ ವ್ಯವಸ್ಥೆ, ಆರ್ಥಿಕ ಬಿಕ್ಕಟ್ಟು ಕೂಡ ಜನರ ಕೋಪಕ್ಕೆ ಕಾರಣ.

ಪ್ರತಿಭಟನೆ ನೇತೃತ್ವ ಯಾರದ್ದು?
ಹಿಂದಿನಿಂದಲೂ ಸರ್ಕಾರದ ವಿರುದ್ಧ ಧ್ವನಿಯೆತ್ತಿದವರನ್ನು ಹತ್ತಿಕ್ಕಲಾಗುತ್ತಿತ್ತು. ಆದರೆ, ಈಗ ಯಾರದ್ದೂ ನೇತೃತ್ವವೇ ಇಲ್ಲದೆ ಜನರೇ ದಂಗೆಯೆದ್ದಿದ್ದಾರೆ.

Advertisement

ರಷ್ಯಾದ ಪಾತ್ರವೇನು?
ಹಿಂಸಾಚಾರದಲ್ಲಿ ವಿದೇಶದಲ್ಲಿ ತರಬೇತಿ ಪಡೆದ ಭಯೋತ್ಪಾದಕರ ಗ್ಯಾಂಗ್‌ನ ಕೈವಾಡವಿದೆ ಎಂದು ಅಧ್ಯಕ್ಷ ಟೋಕಯೇವ್‌ ಆರೋಪಿಸಿದ್ದಾರೆ. ಹೀಗಾಗಿ, ರಷ್ಯಾದ ಸಹಾಯವನ್ನು ಅವರು ಯಾಚಿಸಿದ್ದಾರೆ. ಅದರಂತೆ, ರಷ್ಯಾದ ಯೋಧರು ಸೇನಾ ವಿಮಾನದ ಮೂಲಕ ಕಜಕಿಸ್ತಾನಕ್ಕೆ ಬಂದಿಳಿದಿದ್ದಾರೆ.

ಇದನ್ನೂ ಓದಿ : ಕಾಶ್ಮೀರ ಮಾಜಿ ಸಿಎಂಗಳಿಗೆ ನೀಡಲಾಗಿದ್ದ ವಿಶೇಷ ಭದ್ರತೆ ಹಿಂಪಡೆಯಲು ಕೇಂದ್ರ ಚಿಂತನೆ

Advertisement

Udayavani is now on Telegram. Click here to join our channel and stay updated with the latest news.

Next