Advertisement

ಹೇಗೆ ಬದಲಾಗಿದೆ ನೋಡಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ಬಣ್ಣ, ಚಹರೆ!

01:08 PM Jan 31, 2018 | |

ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿಯ ವಿಜೃಂಭಣೆಯಿಂದಾಗಿ ಬಲಿಪಶು ಆದ ಪ್ರಖ್ಯಾತ ಕರಿಯ ಕ್ರಿಕೆಟಿಗನೆಂದರೆ ಫ್ರಾಂಕ್‌ ರೋ ರೋ. ದ.ಆಫ್ರಿಕಾದ ಕ್ರಿಕೆಟ್‌ ಕ್ಷೇತ್ರದಲ್ಲಿ ಯಾರಿಂದಲೂ “ಹಾಡಿ ಹೊಗಳಲ್ಪಡದ ವೀರ’ನೆಂಬ ಬಣ್ಣನೆಗೆ ಪಾತ್ರರಾಗಿರುವ ರೋ ರೋ ಅವರು ಆಸ್ಟ್ರೇಲಿಯದ ಕ್ರಿಕೆಟ್‌ ವೀರಾಗ್ರಣಿ ಸರ್‌ ಡೊನಾಲ್ಡ್‌ ಬ್ರಾಡ್ಮನ್‌ರಷ್ಟೇ ಶ್ರೇಷ್ಠ ಆಟಗಾರನೆಂಬ ಕಾರಣಕ್ಕಾಗಿ “ಡಸ್ಟೀ ಬ್ರಾಡ್ಮನ್‌’ ಎಂದೂ ಕರೆಸಿಕೊಂಡವರು.

Advertisement

ಮಹಾತ್ಮಾ ಗಾಂಧೀಜಿ 120 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ಬಿಳಿಯರು ತೋರುತ್ತಿದ್ದ ಜನಾಂಗೀಯ ಭೇದ ಭಾವ ಹಾಗೂ ತಾರತಮ್ಯ ಧೋರಣೆಯ ವಿರುದ್ಧ ನಡೆಸಿದ ಹೋರಾಟಗಳ ಫ‌ಲವಾಗಿ ಇಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಕ್ರೀಡೆಯ ಸ್ವರೂಪವೇ ಬದಲಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಈಗ ನಡೆಯುತ್ತಿರುವ ಕ್ರಿಕೆಟ್‌ ಸರಣಿಯನ್ನು ಟಿವಿ ಮಾಧ್ಯಮದ ಮೂಲಕ ವೀಕ್ಷಿಸುತ್ತಿರುವ ಕ್ರೀಡಾ ಪ್ರೇಮಿಗಳು, ಆ ತಂಡದ ಜನಾಂಗೀಯ ಧೋರಣೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸದೆ ಇರಲಾರರು. ಆದರೆ ಅಚ್ಚರಿಯೆಂದರೆ ಈ ಕ್ರಿಕೆಟ್‌ ಸರಣಿಯನ್ನು ಪ್ರಸಾರಿಸುತ್ತಿರುವ ಪತ್ರಕರ್ತರು ಹಾಗೂ ವೀಕ್ಷಕ ವಿವರಣೆ ಗಾರರ ಪೈಕಿ ಯಾರೊಬ್ಬರೂ ಇಂಥ ಐತಿಹಾಸಿಕ ಮಹತ್ವದ ಬದಲಾವಣೆಯ ಬಗ್ಗೆ ಸೊಲ್ಲೆತ್ತಿಲ್ಲ. 

ದಕ್ಷಿಣ ಆಫ್ರಿಕಾವನ್ನು ಆಳಿದ ಅಲ್ಪಸಂಖ್ಯಾಕ ಶ್ವೇತವರ್ಣಿಯರು ತೋರುತ್ತಿದ್ದ ವರ್ಣ ಪಕ್ಷಪಾತ ಅಥವಾ ವರ್ಣ ಭೇದ ನೀತಿಯ ವಿರುದ್ಧ ಹೋರಾಡಿದ ನೆಲ್ಸನ್‌ ಮಂಡೇಲರಂಥ ಆಫ್ರಿಕನ್‌ ನ್ಯಾಶನಲ್‌ ಕಾಂಗ್ರೆಸ್‌ ನಾಯಕರಿಗೆ ಸ್ಫೂರ್ತಿ – ಪ್ರೇರಣೆ ನೀಡಿದ ವರು ನಮ್ಮ ಗಾಂಧೀಜಿಯೇ. ಹೇಳಲೇಬೇಕಾದ ಮಾತೆಂದರೆ, ಭಾರತೀಯ ಕ್ರಿಕೆಟ್‌ ಕೂಡ ಅಸ್ಪೃಶ್ಯತೆ ಹಾಗೂ ಹಿಂದೂ – ಮುಸ್ಲಿಂ ಕೋಮುವಾದದ ವಿರುದ್ಧ ಗಾಂಧೀಜಿಯವರು ನಡೆಸಿದ್ದ ಆಂದೋ ಲನದ ಪ್ರಭಾವಕ್ಕೆ ಒಳಗಾಗಿತ್ತು. ಗಾಂಧೀಜಿಯವರು “ಕೋಮು ವಾದಿ ಕ್ರಿಕೆಟ್‌’ ಅನ್ನು ವಿರೋಧಿಸುತ್ತಿದ್ದ ಕಾರಣಕ್ಕಾಗಿ ಪ್ರಖ್ಯಾತ ಬಾಂಬೆ “ಪೆಂಟಾಂಗ್ಯುಲರ್‌ ಟೂರ್ನಮೆಂಟ್‌’ 1944ರಲ್ಲಿ ನಿಂತೇ ಹೋಯಿತು. ಪೆಂಟಾಂಗ್ಯುಲರ್‌ ಪಂದ್ಯಾವಳಿಯಲ್ಲಿ ಹಿಂದೂ

ಗಳ, ಮುಸ್ಲಿಮರ, ಯುರೋಪಿಯನ್ನರ, ಪಾರ್ಸಿಗಳ ಹಾಗೂ ಇತರರ (ಭಾರತೀಯ ಕ್ರಿಶ್ಚಿಯನ್ನರು ಇತ್ಯಾದಿ) ತಂಡಗಳಿದ್ದವು. ಎಲ್ಲಕ್ಕಿಂತ ಮೊದಲಿಗೆ ಗಾಂಧೀಜಿಯವರ ಅಸ್ಪೃಶ್ಯತಾ ಸಮರದ ಫ‌ಲವಾಗಿ ದಲಿತ ಪಾಲ್ವಂಕರ್‌ ಸೋದರರು (ಬಾಲೂ, ವಿಟuಲ್‌, ಶಿವರಾಂ ಹಾಗೂ ಗಣಪತ್‌) ಹಿಂದೂ ಕ್ರಿಕೆಟ್‌ ತಂಡದಲ್ಲಿ ಗೌರವ ಯುತ ಸ್ಥಾನಗಳನ್ನು ಪಡೆದರು. ಇವರು ಆಡಿದ್ದು ಪೆಂಟಾಂಗ್ಯುಲರ್‌ ಅಸ್ತಿತ್ವಕ್ಕೆ ಬರುವ ಮುನ್ನ ಇದ್ದ ಬಾಂಬೆ ಕ್ವಾಡ್ರಾಂಗ್ಯುಲರ್‌ನಲ್ಲಿ ಇಂಥ ಕ್ರೀಡಾ ಪಂದ್ಯಗಳು ಕರಾಚಿಯಲ್ಲೂ ನಡೆದಿವೆ.

ರಾಷ್ಟ್ರೀಯ ತಂಡದಲ್ಲಿ ಕರಿಯರ ಕೋಟಾ ಎಷ್ಟು?
1888ರಿಂದ 1994ರವರೆಗಿನ (106 ವರ್ಷಗಳ) ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ತಂಡಗಳಲ್ಲಿ ಕೇವಲ ಶ್ವೇತವರ್ಣಿಯರೇ ಇದ್ದರು. ಮುಂದೆ ಈ ದೇಶದ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಯಿತೆನ್ನಬಹುದು. ಭಾರತದ ವಿರುದ್ಧದ ಮೂರನೆಯ ಟೆಸ್ಟ್‌ ಪಂದ್ಯದಲ್ಲಿ (ಈ ಸಲದ) ದಕ್ಷಿಣ ಆಫ್ರಿಕಾ ಬಿಳಿಯರಲ್ಲದ ಐವರನ್ನು ಕಣಕ್ಕಿಳಿಸಿದ್ದೇ ಈ ಮಾತಿಗೆ ಸಾಕ್ಷಿ.ಅವರೆಂದರೆ- ಹಾಶಿಮ್‌ ಆಮ್ಲ (ಭಾರತೀಯ ಮೂಲದವರು), ವೆರ್ನನ್‌ ಫಿಲಾಂಡರ್‌ (ಮಿಶ್ರ ವರ್ಣೀಯ), ಆಂಡಿಲ್‌ ಫೆಲ್‌ಕ್ವಾಯೋ, ಕ್ಯಾಗಿಸೊ ರಬಾಡ ಹಾಗೂ ಲುಂಗಿಸಾನಿ ಎನ್‌ಗಿಡಿ (ಶ್ವೇತ ವರ್ಣೇತರರು). ತಂಡದ ಇತರ ಆರುಮಂದಿ ಶ್ವೇತ ವರ್ಣೀ ಯರು. ಹಾಗೇ ನೋಡಿದರೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಶ್ವೇತ ವರ್ಣೇತರರ ಸಂಖ್ಯೆ ಶ್ವೇತವರ್ಣೀಯರಿಗಿಂತ ಒಂದು ಕಡಿಮೆ. ಅರ್ಥಾತ್‌ ಸಂಖ್ಯಾವಾರು ಹಂಚಿಕೆಯಲ್ಲಿ ನಿಗದಿಯಾಗಿದ್ದ ಅಶ್ವೇತ ವರ್ಣಿàಯರ ಕೋಟಾದಲ್ಲಿ ಒಂದು ಕಡಿಮೆಯಾದಂತಾಗಿದೆ. 2016ರಲ್ಲಿ ದಕ್ಷಿಣ ಆಫ್ರಿಕಾ ಸರಕಾರದ ನಿರ್ದೇಶದನ್ವಯ ರಾಷ್ಟ್ರೀಯ ಮಟ್ಟದ ಪ್ರತಿಯೊಂದು ಕ್ರೀಡಾ ತಂಡದಲ್ಲೂ ಆರು ಮಂದಿ ಶ್ವೇತವರ್ಣೇತರರು ಇರತಕ್ಕದ್ದೆಂದು ಕ್ರಿಕೆಟ್‌ ಮಂಡಳಿ ನಿಗದಿ ಮಾಡಿತ್ತು. ಈ ಆರು ಮಂದಿಯ ಪೈಕಿ ಇಬ್ಬರು ಕೃಷ್ಣ ವರ್ಣೀ ಯರಿರಬೇಕೆಂದು ತೀರ್ಮಾನಿಸಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿನ ಈ ಬಾರಿಯ ಕ್ರಿಕೆಟ್‌ ಪ್ರವಾಸದಲ್ಲಿ ಇದುವರೆಗೆ, ಭಾರತೀಯ ಮೂಲದ ಇನ್ನೋರ್ವ ಕ್ರಿಕೆಟಿಗರಾದ ಕೇಶವ್‌ ಮಹಾರಾಜ್‌ ಆಡಿದ್ದಾರೆ. ಇನ್ನೋರ್ವ ಪ್ರಮುಖ ವರ್ಣೀಯ ಆಟಗಾರ ಜೆ.ಪಿ. ಡುಮಿನಿ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

Advertisement

ಡಿ’ಆಲಿವೇರಾ
ದಕ್ಷಿಣ ಆಫ್ರಿಕಾದಲ್ಲಿ ಮೇಲುಗೈ ಸಾಧಿಸಿದ್ದ ವರ್ಣಭೇದ ನೀತಿ ಹಾಗೂ ಪ್ರತ್ಯೇಕತಾ ಧೋರಣೆ 1968ರ ವರೆಗೂ ಕ್ರಿಕೆಟ್‌ ಕ್ರೀಡಾ ಕ್ಷೇತ್ರದಲ್ಲೂ ಹೇಗೆ ಮೇಲುಗೈ ಸಾಧಿಸಿತ್ತೆಂಬುದನ್ನು ನೋಡೋಣ. ಆ ವರ್ಷ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಅಧಿಕಾರಿಗಳು ಇಂಗ್ಲೆಂಡ್‌ ತಂಡದ ಪ್ರವಾಸಕ್ಕೆ ಅವಕಾಶ ನಿರಾಕರಿಸಿದರು. ಕಾರಣ ಆ ತಂಡದಲ್ಲಿ ದಕ್ಷಿಣ ಆಫ್ರಿಕಾ ಮೂಲದವರೇ ಆಗಿದ್ದ ಶ್ವೇತವರ್ಣೇತರ ಕ್ರಿಕೆಟಿಗ ರೊಬ್ಬರಿದ್ದರು. ಅವರೇ, ಬಾಸಿಲ್‌ ಡಿ’ ಆಲಿವೇರಾ (1931-2011). ಭಾರತೀಯ ಹಾಗೂ ಪೋರ್ಚುಗೀಸ್‌ ಮೂಲದ ದಂಪತಿಯ (ಅಂತರ್‌ವರ್ಣೀಯ) ಪುತ್ರರಾಗಿದ್ದ ಶ್ರೇಷ್ಠ ಕ್ರಿಕೆಟಿಗ ಡಿ’ಆಲಿವೇರಾ ತಾನೋರ್ವ ಶ್ವೇತವರ್ಣೇತರನೆಂಬ ಕಾರಣ ಕ್ಕಾಗಿಯೇ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಅವರು ದೇಶ ಬಿಟ್ಟು ಇಂಗ್ಲೆಂಡಿಗೆ ಹೋದರು. ಮೊದಲಿಗ ವೂಸ್ಟರ್‌ಶೈರ್‌ ಕೌಂಟಿಗಾಗಿ, ಮುಂದೆ ಇಂಗ್ಲೆಂಡ್‌ಗಾಗಿ ಆಡಿದರು. 50 ವರ್ಷಗಳ ಹಿಂದೆ ಇಂಗ್ಲೆಂಡ್‌ ಕ್ರೀಡಾಧಿಕಾರಿಗಳು ದಕ್ಷಿಣ ಆಫ್ರಿಕಾದೊಂದಿಗೆ ಬೂಟಾಟಿಕೆಯಿಂದ ವ್ಯವಹರಿಸುತ್ತಿದ್ದರು. ಬ್ರಿಟಿಷರಲ್ಲೂ ವರ್ಣ ಭೇದ ನೀತಿಗೆ ಮಣೆ ಹಾಕುವವರು ಅನೇಕರಿದ್ದರು; ಆದರೆ ದಕ್ಷಿಣ ಆಫ್ರಿಕಾ ಸಂಪದ್ಭರಿತ ರಾಷ್ಟ್ರವಾದ್ದರಿಂದ ಅದರೊಂದಿಗಿನ ಸಂಬಂಧವನ್ನು ಕೆಡಿಸಿಕೊಳ್ಳುವುದು ಅವ ರಿಗೆ ಬೇಕಿರಲಿಲ್ಲ. (ಭಾರತ ಸ್ವತಂತ್ರಗೊಂಡ ಬಳಿಕ ಇಲ್ಲಿ ಹಿಂದೆ ಸೇವೆ ಸಲ್ಲಿಸಿದ್ದ ಅನೇಕ ಬ್ರಿಟಿಷರು ದಕ್ಷಿಣ ಆಫ್ರಿಕಾಕ್ಕೆ ಹೋಗಿ ನೆಲೆಸಿದ್ದರು). ತಂಡದಿಂದ ಹೊರಬೀಳುವ ವಿಷಯಕ್ಕೆ ಸಂಬಂಧಿ ಸಿದಂತೆ ಬ್ರಿಟಿಷ್‌ ಕ್ರಿಕೆಟ್‌ ಆಡಳಿತಾಧಿಕಾರಿಗಳು ಡಿ’ಆಲಿವೇರಾ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ಆತ ಜಗ್ಗಲಿಲ್ಲ. 

ವರ್ಣಭೇದ ನೀತಿಗೆ ಬಲವಾಗಿ ಆತುಕೊಂಡಿದ್ದ ಆಗಿನ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಬಿ.ಜೆ. ವೋರ್‌ಸ್ಟರ್‌ ಅವರು ಶ್ವೇತವರ್ಣೇತರ ಕ್ರಿಕೆಟಿಗನೊಬ್ಬ ತಮ್ಮ ದೇಶಕ್ಕೆ ಆಡಲು ಹೊರಟಿರುವುದರ ವಿರುದ್ಧದ ತಮ್ಮ ಗಟ್ಟಿ ನಿಲುವನ್ನು ಪ್ರಕಟಿಸಿದರು; ಪರಿಣಾಮವಾಗಿ ಆ ಪ್ರವಾಸವೇ ರದ್ದಾಯಿತು. ಇದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಒಂದು “ಅಸ್ಪೃಶ್ಯ ರಾಷ್ಟ್ರ’ವಾಯಿತು. ಆ ವರ್ಷ (1968) ದಕ್ಷಿಣ ಆಫ್ರಿಕಾವನ್ನು ಎಲ್ಲ ಕ್ರೀಡೆಗಳಲ್ಲೂ ಬಹಿಷ್ಕರಿಸುವಂತೆ ವಿಶ್ವಸಂಸ್ಥೆಯ ಮಹಾಸಭೆ ಕರೆ ನೀಡಿತು. ಕಾಮನ್‌ವೆಲ್ತ್‌ ರಾಷ್ಟ್ರಗಳ ನಾಯಕರು 1977ರಲ್ಲಿ ಸ್ಕಾಟ್ಲೆಂಡ್‌ನ‌ ಗ್ಲೆàನೀಗಲ್ಸ್‌ನಲ್ಲಿ ಸಭೆ ಸೇರಿ, ದಕ್ಷಿಣ ಆಫ್ರಿಕಾದ ಮೇಲಿನ ಬಹಿಷ್ಕಾರ ಮುಂದುವರಿಯಬೇಕೆಂಬ ನಿರ್ಣಯವನ್ನು ಸ್ವೀಕರಿಸಿದರು. ಈ ನಿಷೇಧ 1992ರವರೆಗೂ ಮುಂದುವರಿಯಿತು. ಅದರ ಹಿಂದಿನ ವರ್ಷವಷ್ಟೆ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಆಳ್ವಿಕೆ ಅಂತ್ಯಗೊಂಡಿದ್ದ ಹಿನ್ನೆಲೆ ಯಲ್ಲಿ ನಿಷೇಧವನ್ನು ರದ್ದುಪಡಿಸುವ ನಿರ್ಧಾರಕ್ಕೆ ಬರಲಾಗಿತ್ತು.

ದಕ್ಷಿಣ ಆಫ್ರಿಕಾದ ಇತಿಹಾಸದುದ್ದಕ್ಕೂ ಈ ರಾಷ್ಟ್ರ ತನ್ನನ್ನು ಆಳಿದ ಇಂಗ್ಲಿಷ್‌, ಡಚ್‌ ಹಾಗೂ ಫ್ರೆಂಚ್‌ ಆಡಳಿತಗಾರರ ವರ್ಣ
ಭೇದ ನೀತಿಗೆ ಬಲಿಯಾಗಬೇಕಾಯಿತು. ಇದರ ಫ‌ಲವಾಗಿ ದಕ್ಷಿಣ ಆಫ್ರಿಕಾ ಸರಕಾರ 1948ರಿಂದ “ಜಾತಿಯ ಪ್ರತ್ಯೇಕತಾ ನೀತಿ’ (ಅಪಾರ್ಥೀಡ್‌) ಎಂಬ ಕಠೊರ ವರ್ಣ/ಜಾತಿ ಪಕ್ಷಪಾತಿ ನಿಯ ಮ ವೊಂದನ್ನು ಆಡಳಿತದಲ್ಲಿ ರೂಢಿಸಿಕೊಂಡಿತು. ಇಂಥ ದೊಂದು ಅಮಾನವೀಯ ಧೋರಣೆಯ ಪ್ರತ್ಯೇಕತಾ ನೀತಿಯ ಶಿಲ್ಪಿ, ಆಗಿನ ದಕ್ಷಿಣ ಆಫ್ರಿಕಾದ ಪ್ರಧಾನಿ, ಡೇನಿಯಲ್‌ ಮ್ಯಾಲನ್‌. ಕ್ರಿಕೆಟ್‌ ಕ್ಷೇತ್ರದಲ್ಲಿ “ಅಪಾರ್ಥೀಡ್‌’ ಎಂದರೆ “ಕರಿಯ ಜನಾಂಗ, ವರ್ಣೀಯ ಅಥವಾ ಮಿಶ್ರ ರಕ್ತದ ಜನಾಂಗಕ್ಕೆ ಸೇರಿರುವ ಆಟಗಾರರು ಹಾಗೂ ಭಾರತೀಯ ಮೂಲದ ಆಟಗಾರರು, ವಂಶೀಯವಾಗಿ ಕೀಳು ದರ್ಜೆಯವರು ರಾಷ್ಟ್ರಮಟ್ಟದ ತಂಡಗಳಿಗೆ ಆಯ್ಕೆಯಾಗಲು ಅರ್ಹತೆಯಿಲ್ಲದ ಆಟಗಾರರು’ ಎಂದರ್ಥ. ದಕ್ಷಿಣ ಆಫ್ರಿಕಾದ ಮೂಲ ನಿವಾಸಿಗಳು (ನೀಗ್ರೋ – ಕಾಂಗ್ರೋ) ಅಥವಾ ಕೃಷ್ಣ ವರ್ಣೀಯ ಸಮುದಾಯಗಳು ಮಂದಿಯನ್ನು “ಬಂಟೂ’ಗಳೆಂದು (ಅಲ್ಲಿನ ಮೂಲ ಭಾಷೆಯಾದ “ಬಂಟೂ’ವನ್ನು ಮಾತೃಭಾಷೆಯಾಗಿ ಬಳಸುತ್ತಿರುವವರೆಂದು) ಹೀಗಳೆಯಲಾಗು ತ್ತಿತ್ತು. ದೇಶದ ಜನಸಂಖ್ಯೆಯ ಶೇ. 80ರಷ್ಟು ಜನರು ಈ ಸಮುದಾಯದವರೇ.

ಈ ದೇಶದಲ್ಲಿ ಜನಾಂಗೀಯ ದ್ವೇಷವೆನ್ನುವುದು ಗಾಂಧೀಜಿ ಇದ್ದ ಕಾಲಕ್ಕಿಂತ (1893-1916) ಹೆಚ್ಚು ತೀವ್ರಗೊಂಡುದು, 1948ರಲ್ಲಿ ಹಾಗೂ ಅದರ ಮುಂದಿನ ವರ್ಷಗಳಲ್ಲಿ ವರ್ಣ ಭೇದಭಾವ ಪೀಡಿತ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ತಂಡಗಳು ಆಡುತ್ತಿ ದ್ದುದು ಕೇವಲ ಇಂಗ್ಲೆಂಡ್‌, ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್‌ಗಳೊಂದಿಗಷ್ಟೆ. ದಕ್ಷಿಣ ಆಫ್ರಿಕಾ ವಾಸ್ತವವಾಗಿ ವೆಸ್ಟಿಂಡೀಸ್‌, ಭಾರತ ಅಥವಾ ಪಾಕಿಸ್ಥಾನದಂಥ ಕರಿಯ ಅಥವಾ ಕಂದು ವರ್ಣದ ಕ್ರೀಡಾಳುಗಳ ತಂಡಗಳೊಂದಿಗೆ ಕ್ರಿಕೆಟ್‌ ಸಂಬಂಧವನ್ನೇ ಹೊಂದಿರ ಲಿಲ್ಲ! ವರ್ಣ ಪಕ್ಷಪಾತ ಅಥವಾ ಪ್ರತ್ಯೇಕತಾ ನೀತಿಯನ್ನು ದೊಡ್ಡ ಮಟ್ಟದಲ್ಲಿ ಅನುಸರಿಸಿದವರು ಡಚ್‌ ಅಥವಾ ಫ್ರೆಂಚ್‌ ಮೂಲದ ಶ್ವೇತವರ್ಣೀಯರಿಗಿಂತಲೂ ಹೆಚ್ಚಾಗಿ ಇಂಗ್ಲಿಷ್‌ ಮೂಲದ ದಕ್ಷಿಣ ಆಫ್ರಿಕಾದ ಬಿಳಿಯರೇ. ಆದರೂ ಜನಾಂಗೀಯ ಪ್ರತ್ಯೇಕತಾ ನೀತಿಯನ್ನು ಮೊದಲಬಾರಿಗೆ ಖಂಡಿಸಿದವರು, ಮುಂಚೂಣಿ ಜಾಗತಿಕ ನಾಯಕರೆಂದು ಪರಿಗಣಿತರಾಗಿದ್ದ ಬ್ರಿಟನ್ನಿನ ಮಾಜಿ ಪ್ರಧಾನಿ ಹೆರಾಲ್ಡ್‌ ಮೆಕ್‌ಮಿಲನ್‌ ಅವರು. ದಕ್ಷಿಣ ಆಫ್ರಿಕಾದ ಜನಜಾತೀಯ ಪ್ರತ್ಯೇಕತಾ ಧೋರಣೆಯನ್ನು ಖಂಡಿಸಿ, ಆ ರಾಷ್ಟ್ರದ ಕ್ರಿಕೆಟ್‌ ತಂಡದೊಂದಿಗೆ ಆಡಲಾರೆ ಎಂದು ಘೋಷಿಸಿದ್ದ ಇಂಗ್ಲಿಷ್‌ ಕ್ರಿಕೆಟರ್‌ ರೆವರೆಂಡ್‌ ಡೇವಿಡ್‌ ಶೆಫ‌ರ್ಡ್‌ ಅವರನ್ನೂ ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ದಕ್ಷಿಣ ಆಫ್ರಿಕಾ ಕೃಷ್ಣ ವರ್ಣೀಯ, ಮಿಶ್ರವರ್ಣೀಯ ಹಾಗೂ ಭಾರತೀಯ ಮೂಲದ ಕ್ರಿಕೆಟಿಗರನ್ನು ದೊಡ್ಡ ಸಂಖ್ಯೆಯಲ್ಲಿ ಬೆಳೆಸಿದ್ದೇನೋ ನಿಜ. ಆದರೆ ಅವರಿಗೆ ಜನಾಂಗೀಯ ಭೇದ ಪ್ರಚಲಿತವಿದ್ದಾಗಲೇ ಆಗಲಿ, ಈ ಅನಿಷ್ಟ ನೀತಿಗೆ ಎಳ್ಳುನೀರು ಬಿಟ್ಟ ಮೇಲೇ ಆಗಲಿ – ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶ ಲಭಿಸಿಲ್ಲ. ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿಯ ವಿಜೃಂಭಣೆಯಿಂದಾಗಿ ಬಲಿಪಶುವಾಗಬೇಕಾಗಿ ಬಂದ ಪ್ರಖ್ಯಾತ ಕರಿಯ ಕ್ರಿಕೆಟಿಗನೆಂದರೆ ಫ್ರಾಂಕ್‌ ರೋ ರೋ ಅವರು. ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಕ್ಷೇತ್ರದಲ್ಲಿ ಯಾರಿಂದಲೂ “ಹಾಡಿ ಹೊಗಳಲ್ಪಡದ ವೀರ’ನೆಂಬ ಬಣ್ಣನೆಗೆ ಪಾತ್ರರಾಗಿರುವ ರೋ ರೋ ಅವರು ಆಸ್ಟ್ರೇಲಿಯಾದ ಕ್ರಿಕೆಟ್‌ ವೀರಾಗ್ರಣಿ ಸರ್‌ ಡೊನಾಲ್ಡ್‌ ಬ್ರಾಡ್ಮನ್‌ರಷ್ಟೇ ಶ್ರೇಷ್ಠ ಆಟಗಾರನೆಂಬ ಕಾರಣಕ್ಕಾಗಿ “ಡಸ್ಟೀ ಬ್ರಾಡ್ಮನ್‌’ ಎಂದೂ ಕರೆಸಿಕೊಂಡವರು. ರೋ ರೋ ಅವರು, ಶ್ವೇತವರ್ಣೇತರ ಕ್ರಿಕೆಟಿಗರಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದವರು; 1930 ಹಾಗೂ 1940ರ ದಶಕಗಳ ನಡುವಿನ ಅವಧಿಯಲ್ಲಿ ಕರಿಯ ಕ್ರಿಕೆಟಿಗರ ಸಾಮ್ರಾಟರಾಗಿ ಮೆರೆದವರು. ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಜಗತ್ತಿನ “ಟಾಪ್‌ ಟೆನ್‌’ ಕ್ರಿಕೆಟಿಗರಲ್ಲಿ ಅವರು ಇದ್ದೇ ಇದ್ದಾರೆ. ಹಾಶಿಮ್‌ ಆಮ್ಲ ಅವರೂ ಈ ಮೇರು ಕ್ರಿಕೆಟಿಗರ ಸಾಲಿನಲ್ಲಿದ್ದಾರೆ. ವರ್ಣ ಪ್ರತ್ಯೇಕತಾ ನೀತಿಗೆ ಬಲಿಪಶುಗಳಾದ ಇನ್ನಿತರ ಕರಿಯ ಕ್ರಿಕೆಟಿಗರೆಂದರೆ ಎರಿಕ್‌ ಹಾಗೂ ಖಾಯಾ ಮಜೋಲಾ, ಸಿಸಿಲ್‌ ಅಬ್ರಹಾಂ ಹಾಗೂ ವಿನ್ಸೆಂಟ್‌ ಬಾರ್ನ್ಸ್.

ದಕ್ಷಿಣ ಆಫ್ರಿಕಾಕ್ಕಾಗಿ ಟೆಸ್ಟ್‌ ಕ್ರಿಕೆಟ್‌ ಆಡಿದ ಪ್ರಪ್ರಥಮ ಕಲಿಯ ಕ್ರಿಕೆಟಿಗನೆಂದರೆ, ಎಡಗೈ ಸ್ಪಿನ್ನರ್‌ ಉಮರ್‌ ಹೆನ್ರಿ. ಭಾರತೀಯ ತಂಡದ ವಿರುದ್ಧ ನಡೆದಿದ್ದ ಪಂದ್ಯ ಇದು. ಮುಂದೆ ಭಾರತದ ವಿರುದ್ಧ ಆಡಿದ ಇತರರಲ್ಲಿ ಹಾಶಿಮ್‌ ಆಮ್ಲ , ಜೆ.ಪಿ. ಡುಮಿನಿ, ಇಮ್ರಾನ್‌ ತಾಹಿರ್‌, ಮಖಾಯ್‌ ಎನ್‌ಟಿನಿ ಇವರುಗಳನ್ನು ಹೆಸರಿಸಬಹುದು.

ಗಮನಿಸಲೇ ಬೇಕಾದ ಅಂಶ ಇದು – 1968 ರಿಂದ 1992ರ ವರೆಗಿನ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳದಂತೆ ಹೇರಲಾದ ನಿಷೇಧದ ಫ‌ಲವಾಗಿ ಆ ರಾಷ್ಟ್ರದ ತಾರಾ ಕ್ರಿಕೆಟಿಗರ ವೃತ್ತಿಜೀವನಕ್ಕೆ ಬಹುದೊಡ್ಡ ಹಾನಿ ಉಂಟಾದುದು ಸುಳ್ಳಲ್ಲ. ಈ ಎಲ್ಲ ಕ್ರಿಕೆಟಿಗರೂ ಬಿಳಿಯರೇ. ಇವರಲ್ಲಿ ಪೋಲಕ್‌ ಸಹೋದರರಾದ ಗ್ರೇಮ್‌ ಪೋಲಾಕ್‌ ಹಾಗೂ ಶಾನ್‌ ಪೋಲಾಕ್‌, ಬೇರಿ ರಿಚರ್ಡ್ಸ್‌, ಮೈಕ್‌ ಪ್ರೋಕ್ಟರ್‌, ಪ್ಯಾಟ್‌ ಪಿಮ್‌ ಕಾಕ್ಸ್‌, ಮಾರ್ಕ್‌ ಬೌಚರ್‌ ಹಾಗೂ ಜಾನಿ ವೈನ್‌ ಮುಂತಾದವರಿದ್ದರು.

ಕರಿಯ-ಬಿಳಿಯರಿಗೆ ಕೋಟಾ ವ್ಯವಸ್ಥೆ ರೂಪಿಸಿರುವುದಕ್ಕೆ ವಿರೋಧವೂ ವ್ಯಕ್ತವಾಗಿದೆ. ಈಗ ಆಡುತ್ತಿರುವ ಕ್ರಿಕೆಟಿಗರಲ್ಲೊಬ್ಬ ರಾದ ಕೆವಿನ್‌ ಪೀಟರ್‌ಸನ್‌ ಇದರ ವಿರುದ್ಧ ಬಂಡೆದ್ದು, ಆಫ್ರಿಕನ್‌ ತಂಡದಿಂದ ಹೊರಬಿದ್ದು ಇಂಗ್ಲೆಂಡ್‌ ತಂಡದಲ್ಲಿ ಆಡಲು ಹೋದರು. ಜಾಕ್‌ ಕಾಲಿಸ್‌ ಅವರು ಕೂಡ ಕೋಟಾ ವ್ಯವಸ್ಥೆಗೆ ಪ್ರತಿಭಟನೆ ವ್ಯಕ್ತಪಡಿಸಿದ್ದುಂಟು. ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಕೃಷ್ಣ ವರ್ಣೀಯ ಆಟಗಾರರೀಗ ಅಲ್ಲಿನ ಕ್ರೀಡಾ ವಲಯಕ್ಕೆ ಗೌರವ, ಖ್ಯಾತಿ ತಂದು ಕೊಡುತ್ತಿರು ವುದನ್ನು ನೋಡಿದರೆ ಅಲ್ಲಿನ ರಾಷ್ಟ್ರೀಯ ತಂಡದಲ್ಲಿನ ಎಲ್ಲ 11 ಮಂದಿ ಆಟಗಾರರೂ ಕೃಷ್ಣವರ್ಣೀಯರು, ಭಾರತೀಯರು ಅಥವಾ ಮಿಶ್ರವರ್ಣೀಯರು, ಭಾರತೀಯರು ಅಥವಾ ಮಿಶ್ರವರ್ಣೀಯರೇ ಆಗಿರುವ ಸಾಧ್ಯತೆ ಹೆಚ್ಚು ದೂರದಲ್ಲೇನೂ ಇಲ್ಲವೆನ್ನಬಹುದು.

ವೆಸ್ಟ್‌ಇಂಡೀಸ್‌ ಕರಿಯರು, ಭಾರತೀಯರ ಕತೆಯೂ ಇದೇ 
ಸ್ವಲ್ಪ ಮಟ್ಟಿಗೆ ವೆಸ್ಟ್‌ಇಂಡೀಸ್‌ ತಂಡದಲ್ಲಿನ ಕರಿಯ ಹಾಗೂ ಭಾರತೀಯ ಆಟಗಾರರು ಕೂಡ ಬಿಳಿಯರ ಪ್ರಾಬಲ್ಯದಿಂದಾಗಿ ಕಷ್ಟ ಅನುಭವಿಸಿದ್ದುಂಟು. ವೆಸ್ಟ್‌ಇಂಡೀಸ್‌ನ ಶ್ರೇಷ್ಠ ದಾಂಡಿಗ  ಜಾರ್ಜ್‌ ಹೆಡ್ಲಿಗೆ ಕೂಡ ತಂಡದ ಕ್ಯಾಪ್ಟನ್‌ ಹುದ್ದೆಯನ್ನು ನಿರಾಕರಿಸಲಾಯಿತು; ಅವರು ಜಾನ್‌ ಗೊಡಾರ್ಡ್‌ರಂಥ ಶ್ವೇತ ವರ್ಣೀಯ ಕಿರಿಯ ಆಟಗಾರರ ಕೈ ಕೆಳಗೆ ಆಡಬೇಕಾಗಿ ಬಂತು. ವೆಸ್ಟ್‌ ಇಂಡೀಸ್‌ ತಂಡದ ಪ್ರಥಮ ಕರಿಯ ಕಪ್ತಾ¤ನರೆಂದರೆ ಸರ್‌ ಫ್ರಾಂಕ್‌ ವೋರೆಲ್‌; ಕಟ್ಟಕಡೆಯ ಶ್ವೇತ ವರ್ಣೀಯ ಕಪ್ತಾನ ರೆಂದರೆ ಎಫ್.ಸಿ.ಎಂ. ಅಲೆಗಾಡರ್‌, ದಕ್ಷಿಣ ಆಫ್ರಿಕಾ ತಂಡದಲ್ಲಿದ್ದ ಶ್ವೇತವರ್ಣೀಯರಿಗಿಂತ ಭಿನ್ನವಾಗಿ, ವೆಸ್ಟ್‌ ಇಂಡೀಸ್‌ತಂಡದ ಬಿಳಿಯ ಆಟಗಾರರು ತಮ್ಮ ಕರಿಯ ಹಾಗೂ ಭಾರತೀಯ ಮೂಲದ ಸಹ ಸದಸ್ಯರೊಂದಿಗೆ ಬೆರೆತು ಆಡಿದ್ದುಂಟು. ಕೃಷ್ಣ ವರ್ಣೀಯರಿಗೆ ಕಫ್ತಾನಗಿರಿ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರೆಂದರೆ ಕ್ರಿಕೆಟ್‌ ಲೇಖಕ ಸಿ.ಎಲ್‌. ಆರ್‌.ಜೇಮ್ಸ್‌.

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next