Advertisement

ರೆಮಿಡಿಸಿವಿರ್‌ ಬಿಜೆಪಿ ಸಂಸದರಿಗೆ ಸಿಕ್ಕಿದ್ದು ಹೇಗೆ: ಡಿಕೆಶಿ ಪ್ರಶ್ನೆ

12:34 AM May 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಚಿಕಿತ್ಸೆಗೆ ಅಗತ್ಯವಾದ ರೆಮಿಡಿಸಿವಿರ್‌ ಚುಚ್ಚುಮದ್ದಿನ ಅಭಾವ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಚುಚ್ಚುಮದ್ದನ್ನು ಬಿಜೆಪಿ ನಾಯಕರು ಹಾಗೂ ಸಂಸದರಿಗೆ ಬಾಕ್ಸ್‌ಗಟ್ಟಲೆ ಕೊಟ್ಟು ಕಳುಹಿಸಲಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಯೋಧರ ನೇಮಕ ಅಭಿಯಾನ ಹಾಗೂ ಆ್ಯಂಬುಲೆನ್ಸ್‌ ಸೌಲಭ್ಯಕ್ಕೆ ಚಾಲನೆ ಕೊಟ್ಟ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಛತ್ತೀಸ್‌ಘಡ ಹಾಗೂ ರಾಜಸ್ಥಾನ ಮುಖ್ಯಮಂತ್ರಿಗಳು ಕರೆ ಮಾಡಿ, ನಾವು ನಿಮ್ಮ ರಾಜ್ಯದ ಡಿಎಚ್‌ಒಗಳಿಗೆ ಔಷಧಗಳನ್ನು ಪೂರೈಸಲು ಅನುಮತಿ ನೀಡಿದ್ದರೂ ರಾಜ್ಯ ಸರಕಾರ ಅದನ್ನು ತಡೆ ಹಿಡಿದಿದೆ ಎನ್ನುತ್ತಿದ್ದಾರೆ ಎಂದರು.

ಈ ಬಗ್ಗೆ  ನಾನು ಆರೋಗ್ಯ  ಇಲಾಖೆ ಕಾರ್ಯದರ್ಶಿಗಳಿಗೆ ಕರೆ ಮಾಡಿದರೆ ಅವರು ಏನನ್ನೂ ಹೇಳದೆ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದಷ್ಟೇ ಹೇಳುತ್ತಿದ್ದಾರೆ.  ಮತ್ತೂಂದು ಕಡೆ ಬಿಜೆಪಿ ನಾಯಕರಿಗೆ ಈ ಔಷಧವನ್ನು ಡಬ್ಬಗಳಲ್ಲಿ ತುಂಬಿಸಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು, ಸಂಸದರು ಆಸ್ಪತ್ರೆಗಳ ಮಾಲಕರಾ? ಡ್ರಗ್‌ ಕಂಟ್ರೋಲರ್‌ಗಳಾ? ಔಷಧ ಪಡೆ ಯಲು ಪರವಾನಿಗೆ ಪಡೆದಿದ್ದಾರಾ? ಆ ನಾಯಕರು ಔಷಧ ತೆಗೆದುಕೊಂಡು ಜನರಿಗೆ ನೀಡುತ್ತಿರಬಹುದು, ಅದರ ಬಗ್ಗೆ ನಾನು ತಕರಾರು ಮಾಡುವುದಿಲ್ಲ. ಆದರೆ ಯಾವ ಕಾನೂನಿನ ಅಡಿಯಲ್ಲಿ ಅವರು ದೊಡ್ಡ ಪ್ರಮಾಣದಲ್ಲಿ ಔಷಧವನ್ನು ಕೊಂಡೊಯ್ಯಲು ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದರು.

ಜನರ ನಡುವಿರಲು ಸಂಕಲ್ಪ

Advertisement

ನಮ್ಮ ಚಿಂತನೆ ಹಾಗೂ ಎಐಸಿಸಿ ಆದೇಶದಂತೆ ಈ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್‌ ಜನರ ನಡುವಿರಲು ಸಂಕಲ್ಪ ಮಾಡಿದೆ. ಜನರಿಗೆ ನಾವು ನೆರವು ನೀಡುವುದರ ಜತೆಗೆ ಸರಕಾರಕ್ಕೆ ಅಗತ್ಯ ಸಹಕಾರ, ಸಲಹೆಗಳನ್ನು ನೀಡುತ್ತಿದ್ದೇವೆ. ಆಕ್ಸಿಜನ್‌ ವ್ಯವಸ್ಥೆಯಿರುವ 10 ಆ್ಯಂಬುಲೆನ್ಸ್‌ಗಳ ಸೇವೆಯನ್ನು ಕೆಪಿಸಿಸಿ ಮುಖ್ಯ ಕಚೇರಿಯಿಂದ ಆರಂಭಿಸುತ್ತಿದ್ದು, ಕರೆ ಮಾಡಿದ 40 ನಿಮಿಷದಲ್ಲಿ ಅದು ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ. ರಾಜ್ಯದ ಇತರ ಜಿಲ್ಲಾ ಕೇಂದ್ರಗಳಲ್ಲೂ ಇದರ ಸೇವೆ ನೀಡುತ್ತಿದ್ದೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next