ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಸರಕಾರಿ ಶಾಲೆಗಳೂ ಮಾರ್ಪಾಡು ಹೊಂದಿ ಹತ್ತು ಹಲವು ಕೊರತೆಗಳ ಹೊರತಾಗಿಯೂ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಒದ ಗಿಸುತ್ತಿವೆ. ಸರಕಾರ ಕೂಡ ಈ ಶಾಲೆಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಆಧಾರಸ್ತಂಭಗಳು ಎಂಬುದನ್ನು ಮನಗಂಡು ಹಲವಾರು ವಿನೂತನ ಉಪಕ್ರಮ, ಯೋಜ ನೆಗಳ ಮೂಲಕ ಈ ಶಾಲೆಗಳ ಉನ್ನತೀಕರಣಕ್ಕೆ ನಿರಂತರವಾಗಿ ಪ್ರಯತ್ನಿಸು ತ್ತಲೇ ಬಂದಿದೆ. ಆದ ರೂ ರಾಜ್ಯದಲ್ಲಿರುವ ಸರಕಾರಿ ಶಾಲೆಗಳ ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕೊರತೆಗಳ ಪಟ್ಟಿ ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಬಲುಮುಖ್ಯ ಕಾರಣವೆಂದರೆ ಸರಕಾರಿ ಶಾಲೆಗಳ ಬಗೆಗಿನ ಸರಕಾರ, ಅಧಿಕಾರಿ ವರ್ಗದ ಅಸಡ್ಡೆ ಮತ್ತು ನಿರ್ಲ ಕ್ಷ್ಯದ ಧೋರಣೆ.
ಸರಕಾರಿ ಶಾಲಾ ಮಕ್ಕಳಿಗೆ 2 ಜತೆ ಸಮವಸ್ತ್ರ, ಒಂದು ಜತೆ ಶೂ ಮತ್ತು 2 ಜತೆ ಸಾಕ್ಸ್ ವಿತರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪರಿಯನ್ನು ನೋಡಿದಾಗ ಕೇವಲ ಸರಕಾರ ಮಾತ್ರವಲ್ಲ ಸಂಬಂಧ ಪಟ್ಟ ಅಧಿಕಾರಿಗಳು ತಮ್ಮ ಮುಖಕ್ಕೆ ತಾವೇ ಹೊಡೆದುಕೊಂಡಂತಾಗಿದೆ. 2019ರಲ್ಲಿ ಹೈಕೋರ್ಟ್ ಈ ವಿಚಾರವಾಗಿ ನೀಡಿದ ಆದೇಶವನ್ನು ಸಮರ್ಪಕವಾಗಿ ಪಾಲನೆ ಮಾಡದಿರುವ ಹಿನ್ನೆಲೆಯಲ್ಲಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭ ದಲ್ಲಿ ವಿಭಾಗೀಯ ನ್ಯಾಯಪೀಠ ಸರಕಾರದ ಒಟ್ಟಾರೆ ಧೋರಣೆ, ಮನಃಸ್ಥಿತಿ ಯನ್ನು ಕಟು ಮಾತುಗಳಲ್ಲಿ ಟೀಕಿಸಿತು. ಈ ವಾಗ್ಧಾಳಿ ಒಟ್ಟಾರೆಯಾಗಿ ಇಡೀ ಆಡಳಿತ ವ್ಯವಸ್ಥೆಯ ಜಿಡ್ಡುಗಟ್ಟಿದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ ಯುವಂತಿತ್ತು. ಶಿಕ್ಷಣ, ಸರಕಾರಿ ಶಾಲೆಗಳು ಎಂದಾಕ್ಷಣ ಉದ್ಧಾರ, ಆಮೂಲಾಗ್ರ ಬದಲಾವಣೆ, ಖಾಸಗಿ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿ, ಸರಕಾರಿ ಶಾಲೆಗಳ ಮಕ್ಕಳಿಗಾಗಿ ಹತ್ತು ಹಲವು ಸೌಲಭ್ಯಗಳು, ಶಿಕ್ಷಕರ ಸಹಿತ ಅಗತ್ಯ ಸಿಬಂದಿಯ ನೇಮಕ… ಹೀಗೆ ಪುಂಖಾನುಪುಂಖವಾಗಿ ಮಾತನಾಡುವವರು ಹೈಕೋರ್ಟ್ ನೀಡಿದ ಎಚ್ಚರಿಕೆಯ ಮತ್ತು ಅತ್ಯಂತ ತೀಕ್ಷ್ಣ ಮಾತುಗಳಿಗೆ ಈಗ ಕಿವಿಗೊಡಲೇ ಬೇಕಿದೆ.
ಯಾವೊಂದೂ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ದಿಂದ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿ ಯೂಟ, ಶೂ, ಸಾಕ್ಸ್ ವಿತರಣೆಯಂತಹ ಯೋಜನೆಗಳನ್ನು ಸರಕಾರ ಹಂತ ಹಂತಗಳಲ್ಲಿ ಜಾರಿಗೆ ತಂದು ಬಡ ಮಕ್ಕಳನ್ನು ಶಾಲೆಗಳತ್ತ ಆಕರ್ಷಿಸುವಲ್ಲಿ ಮತ್ತು ತನ್ನ ನೈಜ ಉದ್ದೇಶವನ್ನು ಈಡೇರಿಸುವಲ್ಲಿ ಭಾಗಶಃ ಸಫಲವಾಯಿತು. ಆದರೆ ಸರಕಾರ ಜಾರಿಗೊಳಿಸಿದ ಬಹುತೇಕ ಯೋಜನೆಗಳು ಆರಂಭಶೂರತನಕ್ಕೆ ಸೀಮಿತ ವಾಯಿತೇ ಹೊರತು ಅವುಗಳ ಸಮರ್ಪಕ ಅನುಷ್ಠಾನದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸರಕಾರಕ್ಕೆ ಸಾಧ್ಯವಾಗದೇ ಇರುವುದು ಬಲುದೊಡ್ಡ ದುರಂತ. ಪ್ರತೀ ವರ್ಷವೂ ಇವೆಲ್ಲವೂ ಒಂದಿಷ್ಟು ವಿವಾದಕ್ಕೀಡಾಗುವುದು ಮಾಮೂಲು. ಗ್ರಾಮೀಣ ಪ್ರದೇಶಗಳಲ್ಲಿನ ಸರಕಾರಿ ಶಾಲೆಗಳ ಸ್ಥಿತಿ ಇಂದಿಗೂ ಆಯೋಮಯ ವಾಗಿದೆ. ಪ್ರತೀ ವರ್ಷ ಹೊಸ ಯೋಜನೆಗಳನ್ನು ಘೋಷಿಸುತ್ತ ಬರಲಾಗುತ್ತಿದೆ ಯಾದರೂ ಜಾರಿಯಲ್ಲಿರುವ ಯೋಜನೆಗಳ ಸದ್ಯದ ಸ್ಥಿತಿಗತಿಯೇನು ಎಂಬ ಬಗೆಗೆ ಸರಕಾರವಾಗಲಿ, ಶಿಕ್ಷಣ ಇಲಾಖೆಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಅಸಡ್ಡೆಯ ಧೋರಣೆಯಿಂದಾಗಿ ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿ ಅವರ ಭವಿಷ್ಯ ಮಂಕಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದಾದರೆ ಇಂಥ ಯೋಜನೆಗಳನ್ನು ಘೋಷಿಸುವುದು ಯಾಕೆ ಎಂಬುದೇ ಹೈಕೋರ್ಟ್‌ನ ಪ್ರಶ್ನೆ. ಅಷ್ಟು ಮಾತ್ರವಲ್ಲದೆ ಮಕ್ಕಳ ಹಕ್ಕು ಮತ್ತು ಶಿಕ್ಷಣ ಸರಕಾರದ ಸಾಂವಿಧಾನಿಕ ಹೊಣೆಗಾರಿಕೆಯಾಗಿದ್ದು ಮಕ್ಕಳ ಕಲಿಕೆಗೆ ಅಗತ್ಯವಾದ, ಪೂರಕವಾಗಿರುವ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಿಕೊಡುವುದು ಸರಕಾರದ ಕರ್ತವ್ಯ ಕೂಡ. ಇದನ್ನು ಸರಕಾರ ಮತ್ತು ಅಧಿಕಾರಿಗಳು ಮೊದಲು ಅರ್ಥೈಸಿಕೊಳ್ಳಬೇಕು.