Advertisement

ಎಷ್ಟು ದೂರಕೆ ಕೊಡಲಿ ಎಸೆಯಬಲ್ಲಿರಿ?

03:45 AM Mar 23, 2017 | Harsha Rao |

ಅಯೋಧ್ಯೆಯಲ್ಲಿ ತ್ರಿಜಟ ಎಂಬ ವೃದ್ಧ ಬ್ರಾಹ್ಮಣನಿದ್ದ. ಬದುಕಿನುದ್ದಕ್ಕೂ ಸಾತ್ವಿಕ ಪ್ರವೃತ್ತಿಯಿಂದ ಆತ ಕಷ್ಟಕಾಲದಲ್ಲಿ ಪರರಿಗೆ ನೆರವಾಗುತ್ತ ದಿನಗಳೆದಿದ್ದ. ತನಗಾಗಿ ಏನನ್ನೂ ಉಳಿಸಿಕೊಳ್ಳದೆ ತ್ಯಾಗದಿಂದಲೇ ದೊಡ್ಡವನೆನಿಸಿಕೊಂಡಿದ್ದ. ಈಗ ದೇಹದಲ್ಲಿ ಕಸುವಿಲ್ಲದೆ ಯಾವ ಕೆಲಸವನ್ನೂ ಮಾಡಲು ಅಸಮರ್ಥನಾಗಿದ್ದ. ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ಬಂದಿತ್ತು. ಅವನ ಹೆಂಡತಿ ಬಳಿಗೆ ಬಂದು, “ನಮ್ಮನ್ನು ಆಳುವ ದೊರೆ ಶ್ರೀರಾಮಚಂದ್ರನು ದಿನವೂ ಸಜ್ಜನರಿಗೆ ಕೈತುಂಬ ದಾನ ಧರ್ಮಗಳನ್ನು ಮಾಡುತ್ತಿದ್ದಾನೆಂದು ಎಲ್ಲರೂ ಹೇಳುತ್ತಿದ್ದಾರೆ. ನೀವೂ ಕೂಡ ಆಸ್ಥಾನಕ್ಕೆ ಹೋಗಿ ಏನನ್ನಾದರೂ ಯಾಚಿಸಿಕೊಂಡು ಬರಬಾರದೇ? ಕೊನೆಗಾಲದಲ್ಲಿ ಒಂದಿಷ್ಟು ನೆಮ್ಮದಿಯಿಂದ ಬದುಕಬಹುದು ತಾನೆ?’ ಎಂದು ಕೇಳಿದಳು. ತ್ರಿಜಟನು ನಿರಾಕರಿಸಿದ, “ಕೇಳಿದವರಿಗೆಲ್ಲ ನನ್ನ ಗಳಿಕೆಯನ್ನು ಕರೆಕರೆದು ಹಂಚುತ್ತಿದ್ದ ನನ್ನ ಕೈಗಳು ಬೇಡುವುದೆಂದರೆ ಮುಜುಗರದ ವಿಷಯ. ಬೇಡ, ನನ್ನನ್ನು ಭಿಕ್ಷುಕನಾಗಲು ಒತ್ತಾಯಿಸಬೇಡ’ ಎಂದು ಹೇಳುತ್ತಲೇ ಬಂದ.

Advertisement

ಕಡೆಗೂ ಜೀವನ ನಿರ್ವಹಣೆ ಸಾಧ್ಯವೇ ಇಲ್ಲ ಎನಿಸಿದಾಗ ಹೆಂಡತಿಯ ಒತ್ತಾಯಕ್ಕೆ ಮಣಿದು ಶ್ರೀರಾಮನ ಬಳಿಗೆ ತೆರಳಿದ. ಅಲ್ಲಿ ಅದೆಷ್ಟೋ ಮಂದಿ ಅಸಹಾಯಕರು, ಋಷಿಮುನಿಗಳು ಜೀವನದ ಕಷ್ಟ ನಿವಾರಣೆಗೆ ಬೇಕಾದ ಪರಿಹಾರ ಪಡೆಯುವ ಆಕಾಂಕ್ಷೆಯಿಂದ ಸಾಲುಗಟ್ಟಿ ನಿಂತಿದ್ದರು. ಮಂಗಳ ಮೂರ್ತಿಯಾದ ಶ್ರೀರಾಮನು ಮುಗುಳ್ನಗುತ್ತ ಪ್ರತಿಯೊಬ್ಬರ ಬಳಿಗೆ ಬಂದು ಕ್ಷೇಮಕುಶಲ ವಿಚಾರಿಸಿ ಅವರಿಗೆ ಬೇಕಾದುದನ್ನು ಕೊಟ್ಟು ಕಳುಹಿಸಿದ.

ಕಡೆಗೆ ಕರುಣ ವಾರಿಧಿಯ ಕೃಪಾದೃಷ್ಟಿ ತ್ರಿಜಟನ ಕಡೆಗೆ ಹರಿಯಿತು. ಹೇಗೆ ಬೇಡಲಿ ಎಂದು ಸಂಕೋಚದಿಂದ ನಿಂತಿದ್ದ ಅವನಿಗೆ ತನಗೇನು ಬೇಕು ಎಂಬುದನ್ನು ತಾನೇಕೆ ಹೇಳಬೇಕು ಎಂಬ ಒಣಪ್ರತಿಷ್ಠೆ ಇತ್ತು. ಇವನು ನಿಜವಾಗಿಯೂ ದೇವರೇ ಆಗಿದ್ದರೆ ಭಕ್ತರ ಬದುಕಿನ ಕೊರತೆಯನ್ನು ಅವನಾಗಿಯೇ ತಿಳಿದುಕೊಳ್ಳಲಿ ಎಂದು ಆತ ಮನದಲ್ಲೇ ನೆನೆಸಿದ್ದ. ಹೀಗಾಗಿ ತಾನೇಕೆ ಬಂದೆ ಎಂಬ ಕಾರಣವನ್ನು ಹೇಳದೆಯೇ ಸುಮ್ಮನೆ ಶ್ರೀರಾಮನಿಗೆ ವಂದಿಸಿ ನಿಂತುಕೊಂಡ.

ಶ್ರೀರಾಮನು ಮುಗುಳ್ನಗುತ್ತಲೇ, “ಪೂಜ್ಯರೇ, ನನಗೆ ಒಂದು ಸಲ ನಿಮ್ಮ ಬ್ರಾಹ್ಮಣ್ಯದ ತೋಳ್ಬಲ ಎಷ್ಟೆಂಬುದನ್ನು ತಿಳಿಯಬೇಕೆಂಬ ಮಹದಾಸೆಯಿದೆ. ದಯವಿಟ್ಟು ಇಲ್ಲವೆನ್ನದೆ ಅದನ್ನು ನೆರವೇರಿಸಿ ಕೊಡುತ್ತೀರಾ?’ ಎಂದು ಕೇಳಿದ. ಎಂತಹ ವ್ಯಂಗ್ಯವಿದು ಅನಿಸಿತು ತ್ರಿಜಟನಿಗೆ. ದೇಹದಲ್ಲಿ ಬಲಗುಂದಿ ಬೇಡಲು ಬಂದವನ ದೇಹಬಲ ಪರೀಕ್ಷಿಸುವ ಮನಸ್ಸು ಇವನಿಗೆ. ಇವನೆಂತಹ ಕರುಣೆಯ ವಾರಿಧಿ? ಎಂದು ತನ್ನಲ್ಲೇ ಪ್ರಶ್ನಿಸಿಕೊಂಡ. ಬಿಗುಮಾನದಿಂದಲೇ, “ಆಗಬಹುದು, ನಾನೇನು ಮಾಡಬೇಕು?’ ಎಂದು ಕೇಳಿದ. ಶ್ರೀರಾಮ ಒಂದು ಕೊಡಲಿಯನ್ನು ತರಿಸಿದ. ತ್ರಿಜಟನ ಮುಂದೆ ಅದನ್ನಿರಿಸಿದ. “ಈ ಕೊಡಲಿಯನ್ನು ಎಷ್ಟು ಸಾಧ್ಯವೋ ಅಷ್ಟು ದೂರಕ್ಕೆ ಎಸೆಯಬೇಕು’ ಎಂದು ಕೋರಿದ. ತ್ರಿಜಟನಿಗೆ ಕೋಪ ಕುದಿಯಿತು. 

ವೃದ್ಧನಾದ ತನ್ನನ್ನು ಹೀಗೂ ಪರೀಕ್ಷಿಸುವ ಮನಸ್ಸೇ? ಇವನಿಗೆ ವೇದವಿದ್ಯೆಯ ಬಲವೆಷ್ಟೆಂಬುದನ್ನು ತೋರಿಸುತ್ತೇನೆ ಎಂದು ಯೋಚಿಸಿದ. “ಆಗಲಿ, ನನ್ನ ದೇಹಬಲವನ್ನು ಪ್ರತ್ಯಕ್ಷ ನೋಡು’ ಎಂದು ಹೇಳಿ ಕೊಡಲಿಯನ್ನು ಎತ್ತಿ ಗಿರಗಿರನೆ ತಿರುಗಿಸಿ ಬಹು ದೂರಕ್ಕೆ ಎಸೆದುಬಿಟ್ಟ. ಕೊಡಲಿ ಶರವೇಗದಲ್ಲಿ ಸಾಗಿ ಸರಯೂ ನದಿಯನ್ನು ದಾಟಿ ಆಚೆಯ ದಡದಲ್ಲಿ ಹೋಗಿ ಬಿದ್ದಿತು. ಪ್ರಭುವು ಸೇವಕರನ್ನು ಕರೆದ. “ಈ ಹಿರಿಯರು ಎಸೆದ ಕೊಡಲಿ ಎಲ್ಲಿ ಬಿದ್ದಿದೆಯೆಂಬುದನ್ನು ತಿಳಿದುಕೊಂಡು ಬನ್ನಿ. ಅದು ಬಿದ್ದ ಸ್ಥಳದ ತನಕ ಅರಮನೆಯಿಂದ ದನಗಳನ್ನು ಸಾಲಾಗಿ ನಿಲ್ಲಿಸಿ ದಾನವಾಗಿ ಇವರಿಗೆ ಒಪ್ಪಿಸಿಬಿಡಿ’ ಎಂದು ಆಜಾnಪಿಸಿದ. ಪ್ರಭುವಿನ ಕರುಣೆ ನೋಡಿ ತ್ರಿಜಟ ಕಣ್ಣೀರಿನ ಕಡಲಾದ. ಇಂತಹ ಕೊಡುಗೆ ನೀಡಲು ದೇವರು ತನ್ನ ಶಕ್ತಿಯನ್ನು ಪರೀಕ್ಷಿಸಿದನೆಂಬುದು ಅರಿವಾಗುತ್ತಲೇ ಅವನಲ್ಲಿ ಧನ್ಯತೆಯ ಭಾವ ಉಕ್ಕಿ ಹರಿಯಿತು. ಸ್ವಾಮಿಯ ಪಾದಗಳಿಗೆರಗಿ ಭಕ್ತಿಯ ಕುಸುಮಗಳನ್ನು ಸಮರ್ಪಿಸಿದ.

Advertisement

– ಪ. ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next