Advertisement
15 ದಿನಗಳ ಹಿಂದೆಯೇ ಈ ದೇವಸ್ಥಾನದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಶುಕ್ರವಾರ ಏಕಾಏಕಿ ಇಡೀ ದೇಗುಲವೇ ನೆಲಸಮವಾಗಿದೆ. ಅದೃಷ್ಟವಶಾತ್ ಆ ಸಮಯದಲ್ಲಿ ಒಳಗೆ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಈ ಘಟನೆಯು ಜೋಶಿಮಠದ ನಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಅನೇಕರು ತಮ್ಮ ಮನೆಗಳಲ್ಲಿರಲು ಹೆದರಿ, ತೀವ್ರ ಚಳಿಯ ನಡುವೆಯೂ ಹೊರಗೆಯೇ ರಾತ್ರಿಯಿಡೀ ಕಳೆದಿದ್ದಾರೆ.
ಜೋಶಿಮಠದ ಹಲವಾರು ಮನೆಗಳು, ರಸ್ತೆಗಳಲ್ಲಿ ಏಕಾಏಕಿ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಭೀತಿಗೊಳಗಾದ ಜನತೆ, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡುತ್ತಿದೆ. ಈಗಾಗಲೇ 50 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಹೀಗಿದ್ದರೂ, ಶುಕ್ರವಾರ ನಾಗರಿಕರು ಧರಣಿ, ಪ್ರತಿಭಟನೆ ಮುಂದುವರಿಸಿದ್ದಾರೆ. ನಿರ್ಮಾಣ ಕಾಮಗಾರಿ ಬಂದ್:
ಬಿರುಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಾರ್‌ಧಾಮ್ ರಸ್ತೆ(ಹೆಲಾಂಗ್-ಮರ್ವಾರಿ ಬೈಪಾಸ್) ನಿರ್ಮಾಣ ಯೋಜನೆ, ಎನ್‌ಟಿಪಿಸಿಯ ಜಲವಿದ್ಯುತ್ ಯೋಜನೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಔಲಿ ರೋಪ್‌ವೇ ಸೇವೆಯನ್ನೂ ರದ್ದು ಮಾಡಲಾಗಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿ, ಪರಿಸ್ಥಿತಿ ಪರಿಶೀಲಿಸಿದ್ದಾರೆ. ಜತೆಗೆ, ಬಿರುಕಿಗೆ ಕಾರಣ ತಿಳಿಯಲು ತಜ್ಞರ ಸಮಿತಿಯೊಂದನ್ನೂ ರಚಿಸಿದ್ದಾರೆ.
Related Articles
ಎಷ್ಟು ಕುಟುಂಬಗಳ ಸ್ಥಳಾಂತರ- 50
ಎಷ್ಟು ದಿನಗಳಿಂದ ಬಿರುಕು?- 15
Advertisement