Advertisement
ಅಜರ್ಬೈಜಾನ್ ದೇಶಕ್ಕೆ ಬರುವ ಅತೀಹೆಚ್ಚಿನ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರದೇಶ ಇದು. ಅತೆಷ್ಗಾ ಎನ್ನುವ ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಕರೆಯುತ್ತಾರೆ. ಈ ಸ್ಥಳವನ್ನು ಕೇವಲ ಹಿಂದೂ ಮಾತ್ರವಲ್ಲದೆ, ಸಿಕ್ಖರು, ಜೋರಾಷ್ಟ್ರಿಯನ್ ಪಾರ್ಸಿಗಳು ಸಹ ಪವಿತ್ರ ಸ್ಥಳವೆಂದು ಪರಿಗಣಿಸಿ ಅಂದಿನ ಕಾಲದಲ್ಲಿ ಪೂಜಿಸುತ್ತಿದ್ದರು.
Related Articles
Advertisement
ಪರ್ಷಿಯನ್ ಭಾಷೆಯಲ್ಲಿ “ಅತೇಶ್’ ಎಂದರೆ ಬೆಂಕಿ ಮತ್ತು “ಗಾಹ್’ ಎಂದರೆ ಹಾಸಿಗೆ ಎಂದರ್ಥ. ಅತೇಷ್ಗಾ ಒಂದು ಕಾಲದಲ್ಲಿ ನೈಸರ್ಗಿಕ ಅನಿಲ ಕ್ಷೇತ್ರವನ್ನು ಹೊಂದಿತ್ತು, ಈ ನೈಸರ್ಗಿಕ ಅನಿಲವೇ ಈ ಬೆಂಕಿಗೆ ಕಾರಣವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು 7ನೇ ಶತಮಾನದ ಅರ್ಮೇನಿಯನ್ ಭೂಗೋಳಶಾಸ್ತ್ರಜ್ಞ ಅನನಿಯಾ ಶಿರಕಾಟ್ಸೆ ಅವರ ಪುಸ್ತಕ ಅಶ್ಗರತ್ ಸುಯಟ್ಸ್ ದಾಖಲಿಸಿದ್ದಾರೆ. ದೇವಾಲಯವಿರುವ ಪಟ್ಟಣವನ್ನು ಸುರಖಾನಿ ಎಂದು ಕರೆಯಲಾಗುತ್ತದೆ, ಟಾಟ್ ಭಾಷೆಯಲ್ಲಿ ಇದರರ್ಥ “ರಂಧ್ರವಿರುವ ಕಾರಂಜಿ’ ಎಂದು. ಟಾಟ್ ಭಾಷೆಯು ಕ್ಯಾಸ್ಪಿಯನ್ ಸಮುದ್ರದ ಸುತ್ತಲಿನ ಟಾಟ್ ಜನರು ಮಾತನಾಡುವ ಪರ್ಷಿಯನ್ ಭಾಷೆಯಾಗಿದೆ.
ಇನ್ನು ಶಾಸನಗಳ ಬಗ್ಗೆ ಹೇಳುವುದಾದರೆ, ಅಬ್ರಹಾಂ ವ್ಯಾಲೆಂಟೈನ್ ವಿಲಿಯಮ್ಸ… ಜಾಕ್ಸನ್ ಅವರ ಪುಸ್ತಕವಾದ “ಫ್ರಮ್ ಕಾನ್‌ಸ್ಟಾಂಟಿನೋಪಲ್ ಟು ದ ಹೋಮ್ ಆಫ್ ಓಮರ್‌ಖಯ್ನಾಮ್’ (From Constantinople to the home of Omar Khayyam) ಪ್ರಕಾರ, ಶಾಸನಗಳನ್ನು 1668 ಮತ್ತು 1816 AD ನಡುವೆ ಕೆತ್ತಿಸಲಾಗಿದೆ. ಆರ್ಮೇನಿಯನ್ ವಿದ್ವಾಂಸರ ಪ್ರಕಾರ ಈ ದೇವಾಲಯ ಪ್ರಾಕಾರವು ಎರಡನೇ ಶತಮಾನದಲ್ಲಿ ಪರ್ಶಿಯನ್ ದೊರೆಗಳ ಕಾಲಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದೆ. ಪರ್ಶಿಯನ್ ಸಸಾನಿಯನ್ ಸಾಮ್ರಾಜ್ಯದ ಸ್ಥಾಪಕ ಮೊದಲನೇ ಅರ್ದಾಶಿರ್(180-242 AD) ಈ ಕಟ್ಟಡವನ್ನು ನಿರ್ಮಿಸಿರಬಹುದೆಂದು ಹೇಳಿದ್ದಾರೆ.
ಈ ರಾಷ್ಟ್ರವನ್ನು ಅಧಿಕೃತವಾಗಿ ಅಜೆರ್ಬೈಜಾನ್ ಗಣರಾಜ್ಯ ( Republic of Azerbaijan) ಎಂದು ಕರೆಯಲಾಗುತ್ತದೆ. ಅಜರ್ಬೈಜಾನ್ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್ ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್ ದೇಶದೊಂದಿಗೆ ಗಡಿಯನ್ನು ಹೊಂದಿದೆ. ಸೋವಿಯತ್ ರಷ್ಯಾದ ಒಂದು ಭಾಗವಾಗಿದ್ದ ಈ ರಾಷ್ಟ್ರ 1991ರಲ್ಲಿ ಸ್ವತಂತ್ರವಾಯಿತು. ಈ ದೇಶದ ವಿಸ್ತೀರ್ಣ ಹೇಳಬೇಕೆಂದರೆ, ಉತ್ತರ ದಕ್ಷಿಣವಾಗಿ 385 ಕಿ.ಮೀ. ಪೂರ್ವ ಪಶ್ಚಿಮವಾಗಿ 475 ಕಿ.ಮೀ. ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿ.ಮೀ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಅಂದಾಜು ಒಂದು ಕೋಟಿ ಜನಸಂಖ್ಯೆಯನ್ನು ಈ ದೇಶಹೊಂದಿದೆ, ದೇಶದ ಬಹುಪಾಲು ಜನರು ಇಸ್ಲಾಂ ಧರ್ಮವನ್ನ ಪಾಲಿಸುತ್ತಾರೆ. ಬಹಳಷ್ಟು ಜನರು ಟರ್ಕಿ ಮೂಲದವರು, ತಲಾ ಶೇ.8ರಷ್ಟು ಜನರು ರಷ್ಯಾ ಮತ್ತು ಆರ್ಮೇನಿಯ ಮೂಲದವರು. ಜನಸಂಖ್ಯೆಯಲ್ಲಿ ಶೇ.52 ಗ್ರಾಮೀಣ ಭಾಗದವರು. ಈ ದೇಶವು ಅರೆ ಮರುಭೂಮಿಯ ವಾಯುಗುಣವನ್ನು ಹೊಂದಿದೆ. ಬೇಸಿಗೆ ಅತೀ ಉಷ್ಣದಿಂದ ಕೂಡಿದ್ದು ಚಳಿಗಾಲವು ತಂಪಾಗಿರುತ್ತದೆ. ಕುವೈಟ್, ಇರಾಕ್, ಇರಾನ್ ದೇಶಗಳು ಇಂತಹದ್ದೇ ವಾಯುಗುಣವನ್ನು ಹೊಂದಿವೆ. ಕುರಾ ಮತ್ತು ಅರಾಸ್ ನದಿಗಳು ಇಲ್ಲಿನ ಪ್ರಮುಖ ನದಿಗಳು.
ಅಜೆರ್ಬೈಜಾನ್‌ನ ಪ್ರಾಥಮಿಕ ಮತ್ತು ಅಧಿಕೃತ ಭಾಷೆ ಅಜೆರ್ಬೈಜಾನಿ ಆಗಿದೆ, ಇದು ತುರ್ಕಿಶ್ ಭಾಷೆ ಎಂದೇ ಹೇಳಬಹುದು ಅಷ್ಟರ ಮಟ್ಟಿಗೆ ಇದು ಆಧುನಿಕ ತುರ್ಕಿಕ್ ಭಾಷೆಗೆ ಬಹುತೇಕ ಹೋಲುತ್ತದೆ. ಟರ್ಕಿ ದೇಶದ ಜತೆಗೆ ನಿಕಟ ಸಂಬಂಧವನ್ನು ಈ ದೇಶ ಹೊಂದಿದೆ. ಈ ಅಜೆರ್ಬೈಜಾನಿ ಭಾಷೆಯು ಟರ್ಕಿಶ್, ತುರ್ಕಮೆನ್ ಮತ್ತು ಗಗೌಜ್ ಸೇರಿದಂತೆ ನೈಋತ್ಯ ತುರ್ಕಿಕ್ ಭಾಷಾ ಕುಟುಂಬದ ಒಗುಜ್ ಶಾಖೆಯ ಒಂದು ಕುಡಿ ಎಂದು ಹೇಳಬಹುದು. ಹಿಂದೂ ದೇವಾಲಯದ ಜತೆಗೆ ಅಜೆರ್ಬೈಜಾನ್ ತನ್ನ ಇನ್ನಿತರ ತಾಣಗಳಿಗೂ ಹೆಸರುವಾಸಿ. ವಿವಿಧ ದೇಶಗಳಿಂದ ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ವಿಶೇಷತೆಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ. * ಪಿ.ಎಸ್.ರಂಗನಾಥ, ಮಸ್ಕತ್