Advertisement

ಕರೆನ್ಸಿ ಸಮಸ್ಯೆ ಬಗೆಹರಿಸಿದ್ದಾದರೂ ಹೇಗೆ? ಇಲ್ಲಿದೆ ಮಾಹಿತಿ…

12:03 AM Nov 29, 2022 | Team Udayavani |

ಪಾಕಿಸ್ಥಾನ, ಶ್ರೀಲಂಕಾ ಅನುಭವಿಸುತ್ತಿರುವ ವಿದೇಶಿ ವಿನಿಮಯ ಸಂಗ್ರಹ ಇಳಿಕೆ ಅಥವಾ ಕರೆನ್ಸಿ ಕೊರತೆ ಸಮಸ್ಯೆ ಇಂದಿನದ್ದೇನಲ್ಲ. ಹಿಂದಿನಿಂದಲೂ ಒಂದಲ್ಲ ಒಂದು ದೇಶಗಳು ಈ ಸಮಸ್ಯೆಗೆ ತುತ್ತಾಗಿ ಅದರಿಂದ ಹೊರಗೆ ಬಂದಿವೆ. ಇದರಲ್ಲಿ ಭಾರತವೂ ಸೇರಿದೆ ಎಂಬುದು ವಿಶೇಷ. ಆಗ ಆ ದೇಶಗಳು ತೆಗೆದುಕೊಂಡ ಸಕಾಲಿಕ ಕ್ರಮಗಳಿಂದಾಗಿ ಅವು ಹೊರಗೆ ಬಂದವು. ಹಾಗಾದರೆ ಈ ಕರೆನ್ಸಿ ಸಮಸ್ಯೆ ಬಗ್ಗೆ ಇತಿಹಾಸ ಏನು ಹೇಳುತ್ತದೆ? ಯಾವ ದೇಶಗಳು ಈ ಸಮಸ್ಯೆಗೀಡಾಗಿದ್ದವು? ಈಗ ಯಾವ ದೇಶಗಳಲ್ಲಿ ಈ ಸಮಸ್ಯೆ ಇದೆ? ಇಲ್ಲಿದೆ ಮಾಹಿತಿ…

Advertisement

ಜಪಾನ್‌ನಿಂದ ಎಚ್ಚರಿಕೆ ಸಂದೇಶ
ಇತ್ತೀಚೆಗಷ್ಟೇ ಜಪಾನ್‌ನ ಬ್ಯಾಂಕ್‌ ನುಮುರಾವು ಏಳು ರಾಷ್ಟ್ರಗಳ ಆರ್ಥಿಕತೆ ಬಗ್ಗೆ ಎಚ್ಚರಿಕೆಯೊಂದನ್ನು ನೀಡಿದೆ. ಅಂದರೆ ಈಜಿಪ್ಟ್, ರೋಮ್ಯಾನಿಯಾ, ಶ್ರೀಲಂಕಾ, ಟರ್ಕಿ, ಚೆಕ್‌ ರಿಪಬ್ಲಿಕ್‌, ಪಾಕಿಸ್ಥಾನ ಮತ್ತು ಹಂಗೇರಿ ದೇಶಗಳು ತೀವ್ರತರನಾದ ಕರೆನ್ಸಿ ಕೊರತೆ ಅನುಭವಿಸುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದೆ. ಅಂದರೆ ಪಾಕಿಸ್ಥಾನ ಮತ್ತು ಶ್ರೀಲಂಕಾದ ಸ್ಥಿತಿಯಂತೂ ಎಲ್ಲರಿಗೂ ಗೊತ್ತೇ ಇದೆ. ಆದರೆ ಈಜಿಪ್ಟ್ನಲ್ಲಿಯೂ ಇಂಥ ಪರಿಸ್ಥಿತಿ ತಲೆದೋರಿದ್ದು, ಅದು ಈ ವರ್ಷವೇ ಎರಡು ಭಾರೀ ತನ್ನ ಹಣದ ಮೌಲ್ಯವನ್ನು ಇಳಿಸಿಕೊಂಡಿದೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಬಳಿ ಸಹಾಯಕ್ಕಾಗಿ ಕೈಚಾಚಿದೆ. ರೋಮೇನಿಯಾ ಕೂಡ ತನ್ನ ಕರೆನ್ಸಿ ಮೌಲ್ಯ ಇಳಿಸುವತ್ತ ಮುಂದಾಗಿದ್ದರೆ, ಟರ್ಕಿಯಲ್ಲಿಯೂ ಈ ಪರಿಸ್ಥಿತಿ ತಲೆದೋರುತ್ತಿದೆ.

ಏಕೆ ಈ ಸಮಸ್ಯೆ?
ಸರಳವಾಗಿ ಹೇಳುವುದಾದರೆ ಪಾವತಿ ಕೊರತೆಯ ಬಾಕಿಯಿಂದಾಗಿ ಈ ಕರೆನ್ಸಿ ಸಮಸ್ಯೆಯುಂಟಾಗುತ್ತದೆ. ಹಣಕಾಸು ಸಂಸ್ಥೆಗಳು ಮತ್ತು ಸರಕಾರಗಳು ಸಾಲದ ಹೊಣೆಗಾರಿಕೆ, ಆರ್ಥಿಕ ಸಮಸ್ಯೆ ಮತ್ತು ಹಣದುಬ್ಬರದ ಹಿಡಿತದಿಂದ ಹೊರಬರಲು ಯತ್ನಿಸುತ್ತಲೇ ಇರುತ್ತವೆ. ಆದರೂ, ಅವುಗಳು ಆರ್ಥಿಕ ಹಿಂಜರಿತದೊಳಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಹೀಗೆಯೇ ಹಿಂದೆ ಮೆಕ್ಸಿಕೋ(1994), ಸೌತ್‌ಈಸ್ಟ್‌ ಏಷ್ಯಾ(1997), ರಷ್ಯಾ(1998) ಮತ್ತು ಅರ್ಜೆಂಟೀನ(1999-2002) ದೇಶಗಳು ಆರ್ಥಿಕ ಹಿಂಜರಿತಕ್ಕೆ ತುತ್ತಾಗಿದ್ದವು. ಇವುಗಳ ಜತೆಗೆ ವೆನೆಜುವೆಲಾ(2016ರಿಂದ)  ಮತ್ತು ಟರ್ಕಿ(2018ರಿಂದ) ಆರ್ಥಿಕ ಹಿಂಜರಿತದ ಸುಳಿಯಲ್ಲಿವೆ. ಇವುಗಳಲ್ಲಿ ಕೆಲವು ಅದರ ಸುಳಿಯಿಂದ ಹೊರಗೂ ಬಂದಿವೆ.

ರಷ್ಯಾ
1998ರ ಆ.17ರಂದು ರಷ್ಯಾದಲ್ಲಿ ಹಣಕಾಸಿನ ಸಮಸ್ಯೆ ಶುರುವಾಗಿತ್ತು. ಆಗ ರುಬೆಲ್‌ ಮೌಲ್ಯ ಕುಸಿತವಾಗಿ ಸಾಲದ ಹೊರೆಯೂ ಹೆಚ್ಚಾಗಿತ್ತು. ಸೋವಿಯತ್‌ ಯೂನಿಯನ್‌ ಸಿಡಿದ ಮೇಲೆ ಈ ದೇಶಗಳಿಗೆ ರಷ್ಯಾ ಸಹಾಯ ಮಾಡಬೇಕಾಗಿತ್ತು. ಇದರಿಂದಾಗಿ ಈ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಂಡಿತ್ತು. ಆಗ ತನ್ನಲ್ಲಿದ್ದ ವಿದೇಶಿ ಕರೆನ್ಸಿಯೂ ಖಾಲಿಯಾಗಿ, ಬೇರೆ ದೇಶಗಳಿಂದ ಪಡೆದಿದ್ದ ಸಾಲವನ್ನು ಮರಳಿಸಲಾಗದ ಸ್ಥಿತಿಗೆ ಬಂದಿತು. 1999-2000ರಲ್ಲಿ ತೈಲ ದರ ಏರಿಕೆಯಿಂದಾಗಿ ಹಣಕಾಸಿನ ಸ್ಥಿತಿ ಸುಧಾರಿತಗೊಂಡಿತು.

ಮೆಕ್ಸಿಕೋ
1994ರ ಚುನಾವಣೆಗೂ ಮುನ್ನವೇ ಮೆಕ್ಸಿಕೋದಲ್ಲಿ ಕರೆನ್ಸಿ ಸಮಸ್ಯೆ ಉದ್ಭವವಾಗಿತ್ತು. ಆಗ ವಿದೇಶಿ ಹೂಡಿಕೆದಾರರಿಂದ ಅಲ್ಲಿನ ಕರೆನ್ಸಿ ಪೆಸೋವಿನಲ್ಲಿ ಸಾಲ ಪಡೆದು, ಅಮೆರಿಕದ ಡಾಲರ್‌ನಲ್ಲಿ ವಾಪಸ್‌ ತೀರಿಸುವುದಾಗಿ ಹೇಳಲಾಗಿತ್ತು. ಆದರೆ ಚುನಾವಣೆಯಲ್ಲಿ ಅಧ್ಯಕ್ಷೀಯ ಸ್ಪರ್ಧಿಯನ್ನು ಹತ್ಯೆ ಮಾಡಿದ್ದರಿಂದ ದೇಶಾದ್ಯಂತ ದಾಂಧಲೆ ಉಂಟಾಗಿ ರಾಜಕೀಯ ಅಸ್ಥಿರತೆ ಮೂಡಿತು. ಇದರಿಂದಾಗಿ ಅಲ್ಲಿ ಆರ್ಥಿಕ ಅಸ್ಥಿರತೆಯೂ ಕಾಡಿತು. ಆಗ ಏನೇ ಮಾಡಿದರೂ ನಗದು ಸಮಸ್ಯೆಯನ್ನು ಹತೋಟಿಗೆ ತರಲಾಗಲಿಲ್ಲ. ಕಡೆಗೆ ಮೆಕ್ಸಿಕೋ ಸರಕಾರ  1994ರ ಡಿ.20ರಂದು ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿತು. ಜತೆಗೆ, ಬಡ್ಡಿ ದರ ಏರಿಕೆ ಮಾಡಿತು. ಇದರಿಂದ ಆರ್ಥಿಕ ಪ್ರಗತಿಗೆ ಪೆಟ್ಟಾಯಿತು. ಪೆಸೋದಿಂದ ಡಾಲರ್‌ ಖರೀದಿಸುವ ಶಕ್ತಿಯೇ ಹೋಯಿತು. ದೇಶದ ಹಣದುಬ್ಬರ ಮೌಲ್ಯ ಶೇ.50ರಷ್ಟು ಹೆಚ್ಚಾಯಿತು. ಹಲವಾರು ಬ್ಯಾಂಕುಗಳು ದಿವಾಳಿಯಾದವು. 1995ರಲ್ಲಿ ಅಮೆರಿಕವು 50 ಬಿಲಿಯನ್‌ ಡಾಲರ್‌ನಷ್ಟು ಹಣದ ನೆರವು ನೀಡಿ ಆರ್ಥಿಕತೆಯನ್ನು ಎತ್ತಲು ಸಹಾಯ ಮಾಡಿತು.

Advertisement

ಆಗ್ನೇಯ ಏಷ್ಯಾ
1997ರ ಜುಲೈ 2ರಂದು ಥೈಲ್ಯಾಂಡ್‌ನ‌ ಬಹ್‌¤ ಕರೆನ್ಸಿಯ ಕಥೆಯೂ ಹಾಗೆಯೇ ಆಯಿತು. ವಿದೇಶಿ ಕರೆನ್ಸಿಯ ಕೊರತೆ, ವಿದೇಶಿ ಸಾಲದ ಹೊರೆಯಿಂದಾಗಿ ಭಾರೀ ಸಂಕಷ್ಟವುಂಟಾಯಿತು. ಇದು ಇತರೆ ಆಗ್ನೇಯ ಏಷ್ಯಾದ ಎಲ್ಲ ದೇಶಗಳಿಗೂ ವ್ಯಾಪಿಸಿತು. ಒಂದೊಂದು ದೇಶಗಳೂ ನಗದು ಅಪಮೌಲ್ವಿಕರಣ, ಖಾಸಗಿ ಸಾಲದ ಹೆಚ್ಚಳ ಮಾಡಿದವು. ಆಗ ಇಂಡೋನೇಶಿಯಾ, ದಕ್ಷಿಣ ಕೊರಿಯ, ಲಾವೋಸ್‌, ಮಲೇಷ್ಯಾ, ಫಿಲಿಪ್ಪಿನ್ಸ್‌, ಬ್ರುನೈ, ಚೀನ, ಹಾಂಗ್‌ಕಾಂಗ್‌, ಸಿಂಗಾಪೂರ, ಥೈವಾನ್‌, ವಿಯೇಟ್ನಾಮ್‌ ಮತ್ತು ಜಪಾನ್‌ ಕೂಡ ಸಂಕಷ್ಟ ಅನುಭವಿಸಿದವು. ಆಗ ಐಎಂಎಫ್ ಥೈಲ್ಯಾಂಡ್‌, ಇಂಡೋನೇಶಿಯಾ ಮತ್ತು ದಕ್ಷಿಣ ಕೊರಿಯಗೆ 40 ಬಿಲಿಯನ್‌ ಡಾಲರ್‌ ಹಣಕಾಸಿನ ನೆರವು ನೀಡಿತ್ತು.

ಅರ್ಜೆಂಟೀನ
ರಷ್ಯಾ ಮತ್ತು ಬ್ರೆಜಿಲ್‌ನ ಆರ್ಥಿಕ ಹಿಂಜರಿತದಿಂದಾಗಿ ಅರ್ಜೆಂಟೀನ ಕೂಡ ಭಾರೀ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿತು. ಇದು 1998ರಲ್ಲಿ ಆರಂಭವಾಗಿ 2002ರಲ್ಲಿ ಮುಗಿಯಿತು. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ, ದಂಗೆ, ಸರಕಾರಗಳ ಪತನ, ವಿದೇಶಿ ಸಾಲದ ಬಾಕಿ, ಇತರೆ ಕರೆನ್ಸಿಗಳ ಏರಿಕೆ, ಮೆಕ್ಸಿಕೋದ ಪೆಸೋದ ವಿದೇಶಿ ವಿನಿಮಯ ಕೊನೆಯಾಗಿ ಅಮೆರಿಕ ಡಾಲರ್‌ನ ವಿನಿಮಯ ಆರಂಭವಾದ್ದರಿಂದ ಹೆಚ್ಚು ಸಮಸ್ಯೆಯಾಯಿತು. ಆರ್ಥಿಕತೆ ಶೇ.28ಕ್ಕೆ ಕುಸಿದು, ಅರ್ಜೆಂಟೀನದ ಅರ್ಧದಷ್ಟು ಮಂದಿ ಬಡತನದಲ್ಲಿ ನರಳುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ತನ್ನ ಪ್ರಮುಖ ಬೆಳೆಯಾದ ಸೋಯಾಬಿನ್‌ನ ದರ ಏರಿಕೆಯಾಗಿದ್ದರಿಂದ ಮತ್ತೆ ಆರ್ಥಿಕತೆ ಹಳಿಗೆ ಬಂದಿತು. ಚೀನದವರೇ ಹೆಚ್ಚು ಪ್ರಮಾಣದಲ್ಲಿ ಸೋಯಾ ಖರೀದಿ ಮಾಡಿದರು.

ವೆನೆಜುವೆಲಾ ಮತ್ತು ಟರ್ಕಿ
ವೆನೆಜುವೆಲಾದಲ್ಲಿ ಕಮ್ಯೂನಿಸ್ಟರ ಆಳ್ವಿಕೆಯಿಂದಾಗಿ ಆರ್ಥಿಕತೆ ಹಳಿ ತಪ್ಪಿತ್ತು. ಈ ದೇಶ ಪ್ರಮುಖವಾಗಿ ತೈಲ ಮಾರಾಟದ ಮೇಲೆಯೇ ಅವಲಂಬಿತವಾಗಿತ್ತು. ಸರಕಾರದ ತಪ್ಪುಗಳಿಂದಾಗಿ, ಎಲ್ಲವೂ ಬುಡಮೇಲಾಗಿ 2013ರಿಂದ ಶುರುವಾಗಿ ಈಗಲೂ ತೀರಾ ಹೆಚ್ಚಿನ ಹಣದುಬ್ಬರದಿಂದ ನರಳುತ್ತಿದೆ. ಅತ್ತ ಟರ್ಕಿಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿನ ಕರೆನ್ಸಿ ಲಿರಾ ಮೌಲ್ಯ ಇಳಿದಿದೆ. ಹೆಚ್ಚಿನ ಹಣದುಬ್ಬರ, ಸಾಲದ ಪ್ರಮಾಣದಲ್ಲಿ ಹೆಚ್ಚಳ, ಸಾಲ ಮರುಪಾವತಿಯಲ್ಲಿ ವಿಳಂಬವಾಗುತ್ತಿದೆ. ಇದಕ್ಕೆ ಅಲ್ಲಿನ ಅಧ್ಯಕ್ಷರ ಕೆಟ್ಟ ನೀತಿಗಳೇ ಕಾರಣ ಎಂದು ಹೇಳಲಾಗುತ್ತಿದೆ. ಆರ್ಥಿಕ ಹಿಂಜರಿತ 2018ರಿಂದ ಆರಂಭವಾಗಿದ್ದು, ಈಗಲೂ ಟರ್ಕಿಯಲ್ಲಿಯೂ ಹಣಕಾಸಿನ ಸ್ಥಿತಿ ಸುಧಾರಣೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next